ಭಾನುವಾರ, ನವೆಂಬರ್ 17, 2019
28 °C

ಒಂದು ಭಾಷೆ, ಪಕ್ಷ ಸಾಕೆನುವುದು ದೇಶ ದ್ರೋಹ- ಓ.ಎಲ್.ನಾಗಭೂಷಣಸ್ವಾಮಿ

Published:
Updated:
Prajavani

ಮೈಸೂರು: ಒಂದು ಭಾಷೆ ಹಾಗೂ ಒಂದು ಪಕ್ಷ ಸಾಕು ಎನ್ನುವುದು ಈ ದೇಶಕ್ಕೆ ಬಗೆಯುವ ದ್ರೋಹ ಎಂದು ವಿದ್ವಾಂಸ ಓ.ಎಲ್.ನಾಗಭೂಷಣಸ್ವಾಮಿ ತಿಳಿಸಿದರು.

ಬಸವರಾಜ ಕಟ್ಟೀಮನಿ ಪ್ರತಿಷ್ಠಾನ ಹಾಗೂ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ವತಿಯಿಂದ ಇಲ್ಲಿನ ಕಾವೇರಿ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ‘ಬಸವರಾಜ ಕಟ್ಟೀಮನಿ ಸಾಹಿತ್ಯ ಸಮಕಾಲೀನ ಸಂದರ್ಭ’ ಎಂಬ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಪ್ರಾಣಿ, ಪಕ್ಷಿ, ಪರಿಸರ, ಭಾಷೆ, ರಾಜಕೀಯ ಪಕ್ಷಗಳಲ್ಲಿ ವೈವಿಧ್ಯತೆ ಇರಬೇಕು. ಒಂದು ವೇಳೆ ಈ ವೈವಿಧ್ಯತೆ ಇಲ್ಲವಾದರೆ ಈ ಜಗತ್ತು ನಾಶವಾಗುತ್ತದೆ ಎಂದು ಎಚ್ಚರಿಸಿದರು.

ಇಂತಹ ಸಮಕಾಲೀನ ಬೆಳವಣಿಗೆಗಳನ್ನು ಸಾಹಿತ್ಯ ಮತ್ತು ಕಲೆಯ ಮೂಲಕ ವಿರೋಧಿಸಬೇಕು ಎಂದು ಕರೆ ನೀಡಿದರು.

ಏನೋ ಒಂದು ಮಾಡಿ ಪಿಎಚ್.ಡಿ ಪಡೆಯುತ್ತಾರೆ. ಉದ್ಯೋಗವನ್ನೂ ಗಳಿಸುತ್ತಾರೆ. ಇವೆಲ್ಲವೂ ಆದ ಮೇಲಾದರೂ ಪ್ರಬುದ್ಧವಾಗಿ ಚಿಂತಿಸಿ, ಸಮಕಾಲೀನ ಪರಿಸ್ಥಿತಿಗಳಿಗೆ ಪ್ರತಿಕ್ರಿಯಿಸಬೇಕು ಎಂದು ಹೇಳಿದರು.

ಅಂಬಾನಿಗಳು ಬೆಳೆಯುತ್ತಿದ್ದಾರೆ– ಬಸವರಾಜ ಸಾದರ

‘ಕಟ್ಟೀಮನಿ ಕಾದಂಬರಿಗಳಲ್ಲಿ ವರ್ಗ ಮತ್ತು ವರ್ಣ ಸಂಘರ್ಷ’ ಕುರಿತು ಮಾತನಾಡಿದ ಸಾಹಿತಿ ಡಾ.ಬಸವರಾಜ ಸಾದರ, ‘ಕಟ್ಟೀಮನಿ ಅವರ ಕಾಲಘಟ್ಟದಲ್ಲಿ ಇದ್ದ ವರ್ಗ ಮತ್ತು ವರ್ಣ ಸಂಘರ್ಷ ಈಗಲೂ ಇದೆ’ ಎಂದು ಹೇಳಿದರು.

ಇಂದು ಅಂಬಾನಿಗಳಷ್ಟೇ ಬೆಳೆಯುತ್ತಿದ್ದಾರೆ. ಹೊರಗುತ್ತಿಗೆ ಪದ್ಧತಿಯಿಂದ ಕೆಲಸಗಾರರು ಹೈರಾಣಾಗುತ್ತಿದ್ದಾರೆ. ಹಣ ಮಾಡಿದವರು ಕುರ್ಚಿಯಲ್ಲಿ ಕೂರುತ್ತಾರೆ ಅಥವಾ ವಿದೇಶಕ್ಕೆ ಓಡಿ ಹೋಗುತ್ತಾರೆ. ಅಸಹಿಷ್ಣುತೆಯೇ ರಾಷ್ಟ್ರೀಯ ಮೌಲ್ಯ ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

 

ಪ್ರತಿಕ್ರಿಯಿಸಿ (+)