ಬುಧವಾರ, ಮಾರ್ಚ್ 22, 2023
32 °C
ಬೆಂಕಿ ಬಿದ್ದ ಸ್ಥಳದ ನಿಖರ ಮಾಹಿತಿ; 9,200 ಕಿ.ಮೀ ಬೆಂಕಿ ರೇಖೆ ನಿರ್ಮಾಣ

ನಾಗರಹೊಳೆ ಉದ್ಯಾನವನದಲ್ಲಿ ಕಾಳ್ಗಿಚ್ಚು ತಡೆಗೆ ‘ಕಾರ್ ಸ್ಯಾಕ್’ ಆ್ಯಪ್‌

ಎಚ್.ಎಸ್.ಸಚ್ಚಿತ್ Updated:

ಅಕ್ಷರ ಗಾತ್ರ : | |

Prajavani

ಹುಣಸೂರು: ಬೇಸಿಗೆಯಲ್ಲಿ ಅರಣ್ಯಕ್ಕೆ ಬೀಳುವ ಬೆಂಕಿಯನ್ನು ಪತ್ತೆ ಹಚ್ಚಲು ಅರಣ್ಯ ಇಲಾಖೆಯು ‘ಕಾರ್ ಸ್ಯಾಕ್’ (ಕೆಎಆರ್‌ಎಸ್‌ಎಸಿ) ಆ್ಯಪ್‌ ಸಿದ್ಧಪಡಿಸಿದೆ. ಇದರಿಂದ ಬೆಂಕಿ ಬಿದ್ದ ಜಾಗವನ್ನು ಸುಲಭವಾಗಿ ಪತ್ತೆ ಮಾಡಲು ಸಹಕಾರಿಯಾಗಿದೆ.

ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನದಲ್ಲಿ (ನಾಗರಹೊಳೆ) ಪ್ರತಿವರ್ಷ ಬೆಂಕಿ ಕಾಣಿಸಿಕೊಂಡು ಸಾವಿರಾರು ಎಕರೆ ಪ್ರದೇಶ ಅರಣ್ಯ ನಾಶವಾಗುತ್ತಿದೆ. ವನ್ಯಜೀವಿಗಳ ಪ್ರಾಣಕ್ಕೆ ಕುತ್ತು ಬರುತ್ತಿದೆ. ಕಾಳ್ಗಿಚ್ಚು ಬೀಳದಂತೆ ತಡೆಗಟ್ಟುವುದು ಹಾಗೂ ಬೆಂಕಿ ವ್ಯಾಪಿಸುವುದನ್ನು ತಡೆಯಲು ಅರಣ್ಯ ಇಲಾಖೆ ಅಧಿಕಾರಿಗಳು ತಂತ್ರಜ್ಞಾನದ ಮೊರೆ ಹೋಗಿದ್ದಾರೆ.

ವಾಚರ್‌ಗಳಿಗೆ ನೀಡಿರುವ ವಾಕಿ ಟಾಕಿಯಲ್ಲಿ ‘ಕಾರ್‌ ಸ್ಯಾಕ್‌’ ಆ್ಯಪ್‌ ಅಳವಡಿಸಿದ್ದು, ಇವರು ಅರಣ್ಯದಲ್ಲಿ ತಿರುಗಾಡುವ ಸಂದರ್ಭದಲ್ಲಿ ಬೆಂಕಿ ಬಿದ್ದಿರುವ ಜಾಗದ ಮಾಹಿತಿಯನ್ನು ಆ್ಯಪ್‌ ಮೂಲಕ ಡಾಟಾ ಕೇಂದ್ರಕ್ಕೆ ರವಾನಿಸುತ್ತಾರೆ. ಈ ಮಾಹಿತಿಯನ್ನು ಉಳಿದ ವಾಚರ್‌ಗಳ ಮೊಬೈಲ್‌ಗೆ ರವಾನಿಸಲಿದ್ದು, ಕೂಡಲೇ ಬೆಂಕಿ ನಂದಿಸಲು ಕಾರ್ಯಪ್ರವೃತ್ತರಾಗಲಿದ್ದಾರೆ.

ಅಲ್ಲದೆ, ಬೆಂಕಿ ಬೀಳಬಹುದಾದ ಜಾಗ ಹಾಗೂ ಉಷ್ಣಾಂಶ ತೀವ್ರವಾಗಿರುವ ಸ್ಥಳದ ಮಾಹಿತಿಯನ್ನೂ ಅಪ್‌ಲೋಡ್‌ ಮಾಡಲಾಗುತ್ತದೆ. ಈ ಸ್ಥಳಗಳಲ್ಲಿ ಬೆಂಕಿ ಬೀಳದಂತೆ ಸಿಬ್ಬಂದಿ ನಿಗಾವಹಿಸುತ್ತಾರೆ.

ಬೆಂಕಿ ರೇಖೆ ನಿರ್ಮಾಣ: ಅರಣ್ಯದಲ್ಲಿ ಬೆಂಕಿ ವ್ಯಾಪಕ ವಾಗಿ ಹರಡುವುದನ್ನು ತಡೆಯಲು ಬೆಂಕಿ ರೇಖೆ (ಫೈರ್‌ ಲೈನ್‌) ನಿರ್ಮಿಸುವುದು ಸಾಮಾನ್ಯ. ಅರಣ್ಯದಲ್ಲಿ ಹಾದುಹೋಗುವ ಹೆದ್ದಾರಿ ಸೇರಿದಂತೆ ಅರಣ್ಯದೊಳಗಿನ ಪ್ರಮುಖ ಮಾರ್ಗದ 10 ಅಡಿ ಜಾಗದಲ್ಲಿ ಬೆಳೆದ ಗಿಡಗಂಟಿಗಳನ್ನು ತೆರವುಗೊಳಿಸಿ, ಬೆಂಕಿ ರೇಖೆ ನಿರ್ಮಿಸಲಾಗುತ್ತದೆ. ಇದರಿಂದ ಒಂದು ಕಡೆಯಿಂದ ಮತ್ತೊಂದು ಕಡೆಗೆ ಬೆಂಕಿ ಹರಡುವುದನ್ನು ತಪ್ಪಿಸಬಹುದು.

‘843 ಚದರ ಕಿ.ಮೀ ವ್ಯಾಪ್ತಿ ಹೊಂದಿರುವ ನಾಗರಹೊಳೆಯಲ್ಲಿ ಬೆಂಕಿ ಬೀಳದಂತೆ ಕಟ್ಟೆಚ್ಚರ ವಹಿಸಿದ್ದು, ಈಗಾಗಲೇ 8 ವಲಯಗಳಲ್ಲಿ ಈ ಹಿಂದೆ 2,536 ಕಿ.ಮೀ ಬೆಂಕಿ ರೇಖೆ (ಫೈರ್‌ ಲೈನ್‌) ನಿರ್ಮಿಸಲಾಗಿತ್ತು. ಹೊಸದಾಗಿ 9,200 ಕಿ.ಮೀ ಬೆಂಕಿ ರೇಖೆ ನಿರ್ಮಿಸಿದ್ದಾರೆ. 400 ಫೈರ್ ವಾಚರ್‌ಗಳನ್ನು ವಿಶೇಷವಾಗಿ ನಿಯೋಜಿಸಿದ್ದು, 31 ವಾಚರ್ ಟವರ್‌ಗಳಲ್ಲಿ ಪಾಳಿಯಲ್ಲಿ ಹಗಲು, ರಾತ್ರಿ ಕರ್ತವ್ಯ ನಿರ್ವಹಿಸುತ್ತಾರೆ’ ಎಂದು ಹುಲಿ ಯೋಜನಾ ನಿರ್ದೇಶಕ ಮಹೇಶ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ಸಿಬ್ಬಂದಿಗೆ ತರಬೇತಿ: ಬೇಸಿಗೆಯಲ್ಲಿ ಬೆಂಕಿ ಅವಘಡ ನಿಯಂತ್ರಿಸುವ ಕುರಿತು ಅಗ್ನಿಶಾಮಕ ದಳದ ಅಧಿಕಾರಿಗಳು ದಮ್ಮನಕಟ್ಟೆ, ವೀರನಹೊಸಹಳ್ಳಿ, ನಾಗರಹೊಳೆ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಿದ್ದಾರೆ. ಅರಣ್ಯ ಇಲಾಖೆ ವಾಹನದ ಜತೆಗೆ 11 ಖಾಸಗಿ ವಾಹನಗಳನ್ನು ಹೆಚ್ಚುವರಿಯಾಗಿ ನಿಯೋಜಿಸಲಾಗಿದೆ. ಅರಣ್ಯದಲ್ಲಿ ಬೆಂಕಿ ನಿರ್ವಹಣೆಗಾಗಿ ಏಳು ಜೀಪ್ ಮೌಂಟೆಡ್ ನೀರಿನ ಟ್ಯಾಂಕರ್‌, 8 ಸ್ಟ್ರೇಯರ್, 15 ಪವರ್ ಸಾ, 11 ಬ್ಲೋಯರ್ಸ್ ಇರಲಿವೆ’ ಎಂದು ಮಾಹಿತಿ ನೀಡಿದರು.

ಹೆಲಿಕಾಪ್ಟರ್‌, ಡ್ರೋನ್ ಬಳಕೆ
ಬೆಂಕಿಯಿಂದ ಅರಣ್ಯ ಸಂರಕ್ಷಣೆಗೆ ತುರ್ತು ಸಂದರ್ಭದಲ್ಲಿ ಹೆಲಿಕಾಪ್ಟರ್ ಬಳಸಲು ಅವಕಾಶ ನೀಡುವಂತೆ ಕೇಂದ್ರ ಪರಿಸರ ಸಚಿವಾಲಯಕ್ಕೆ ಮನವಿ ಮಾಡಲಾಗಿದೆ. ಅರಣ್ಯ ಇಲಾಖೆಯು ಮೂರು ಡ್ರೋನ್ ಕ್ಯಾಮೆರಾಗಳನ್ನು ಹೊಂದಿದ್ದು, ಇದರಲ್ಲಿ ಎರಡು ಥರ್ಮಲ್ ಡ್ರೋನ್ ಕ್ಯಾಮೆರಾಗಳು ರಾತ್ರಿ ಬೆಂಕಿ ಪತ್ತೆ ಮಾಡುವ ತಂತ್ರಜ್ಞಾನ ಹೊಂದಿವೆ. ಮತ್ತೊಂದು ಕ್ಯಾಮೆರಾ ಹಗಲು ಬೆಂಕಿ ಬಿದ್ದರೆ ಪತ್ತೆ ಮಾಡುತ್ತದೆ ಎಂದು ಮಹೇಶ್ ಕುಮಾರ್ ತಿಳಿಸಿದರು.

**

ಬೇಸಿಗೆಯಲ್ಲಿ ಬೆಂಕಿ ಅವಘಡ ನಿಯಂತ್ರಿಸಲು ತಂತ್ರಜ್ಞಾನ, ಮಾನವ ಶಕ್ತಿ ಬಳಸಿದರೂ ಅರಣ್ಯದಂಚಿನ ಗ್ರಾಮಸ್ಥರು, ಗಿರಿಜನರ ಸಹಕಾರ ಅತ್ಯಗತ್ಯ.
–ಮಹೇಶ್ ಕುಮಾರ್, ಹುಲಿ ಯೋಜನಾ ನಿರ್ದೇಶಕ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು