ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಾಗಸ್ವರ’ದ ಅಲೆಯಲ್ಲಿ ತೇಲಿದ ಸಭಿಕರು

ಪಾರಂಪರಿಕ ಸಂಗೀತೋತ್ಸವದಲ್ಲಿ ಕಾವ್ಯವಾಚನ ಆರಂಭ
Last Updated 5 ಸೆಪ್ಟೆಂಬರ್ 2019, 12:21 IST
ಅಕ್ಷರ ಗಾತ್ರ

ಮೈಸೂರು: ಶ್ರೀ ಪ್ರಸನ್ನ ವಿದ್ಯಾ ಗಣಪತಿ ಮಂಡಲಿ ಚಾರಿಟಬಲ್ ಟ್ರಸ್ಟ್ (ಎಸ್‌ಪಿವಿಜಿಎಂಸಿ) ವತಿಯಿಂದ ಹಾಗೂ ‘ಪ್ರಜಾವಾಣಿ’ ಸಹಯೋಗದಲ್ಲಿ ಇಲ್ಲಿನ ವಿ.ವಿ ಮೊಹಲ್ಲಾದ 8ನೇ ಅಡ್ಡರಸ್ತೆಯಲ್ಲಿ ನಡೆಯುತ್ತಿರುವ ‘58ನೇ ಪಾರಂಪರಿಕ ಸಂಗೀತೋತ್ಸವ’ದಲ್ಲಿ 3ನೇ ದಿನವಾದ ಬುಧವಾರ ಸಂಗೀತದ ಜತೆಗೆ ಕಾವ್ಯವಾಚನವೂ ಮಿಳಿತವಾಗಿ ಸಭಿಕರಿಗೆ ರಸದೌತಣ ನೀಡಿತು.

ಆರಂಭದಲ್ಲಿ ಕುಮಾರವ್ಯಾಸ ಭಾರತದ ‘ಭೀಷ್ಮಸೇನಾಧಿಪತ್ಯ’ ಅಧ್ಯಾಯವನ್ನು ಹಾಸನದ ವಿದ್ವಾನ್ ಗಣೇಶ್ ಉಡುಪ ಅವರು ವಾಚನ ಮಾಡುವ ಮೂಲಕ ಸಭಿಕರ ಗಮನ ಸೆಳೆದರು. ಇವರಿಗೆ ಮೈಸೂರಿನ ಡಾ.ಜ್ಯೋತಿ ಶಂಕರ ಅವರ ವ್ಯಾಖ್ಯಾನವನ್ನು ತನ್ಮಯರಾಗಿ ಕೇಳುವಂತೆ ಮಾಡಿತು.

ಕೇವಲ ಕುಮಾರವ್ಯಾಸ ಭಾರತ ಮಾತ್ರವಲ್ಲದೇ ಪಂಪಭಾರತ ಹಾಗೂ ಇನ್ನಿತರ ಮಹಾಕಾವ್ಯಗಳಿಂದಲೂ ಇವರು ಪದ್ಯಗಳನ್ನು ಆಯ್ದುಕೊಂಡು ವಾಚನ ಮಾಡಿದ್ದು ವಿಶೇಷ ಎನಿಸಿತ್ತು.

ನಂತರ, ತಮಿಳುನಾಡಿನ ಅಣ್ಣಾಮಲೈ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ವಿದ್ವಾನ್ ಚಿನ್ನಮನೂರ್ ಎ.ವಿಜಯ ಕಾರ್ತೀಕೇಯನ್ ಹಾಗೂ ತಮಿಳುನಾಡಿನ ಸರ್ಕಾರಿ ಶಾಲೆಯಲ್ಲಿ ಸಂಗೀತ ಅಧ್ಯಾಪಕರಾಗಿರುವ ವಿದ್ವಾನ್ ಇಡುಂಬವನಂ ವಿ.ಪ್ರಕಾಶ್ ಇಳಯರಾಜ ಅವರ ನಾಗಸ್ವರ ವಾದನ ಸೂಜಿಗಲ್ಲಿನಂತೆ ಸೆಳೆಯಿತು.

ಇವರು ‘ಶ್ರೀ’ರಾಗದಲ್ಲಿ ನುಡಿಸಿದ ‘ಎಂದರೋ ಮಹಾನುಭಾವುಲು’ ವಂತೂ ಸಭಿಕರ ಮನಸೂರೆಗೊಂಡಿತು. ‘ತರಂಗಿಣಿ’ಯಲ್ಲಿ ಮಾಯೇ ಜಾಯೇ, ‘ಮುಖಾರಿ’ಯಲ್ಲಿ ಎನ್ರುರೋ ಶಿವಕೃಪೈ, ‘ಹಂಸಾನಂದಿ’ಯಲ್ಲಿ ಪಾವನಗುರು ಆಕರ್ಷಣೀಯವಾಗಿದ್ದವು.

‘ಕಾಂಬೋದಿ’ಯಲ್ಲಿ ವಿಸ್ತರಿಸಿದ ಪಲ್ಲವಿಯಂತೂ ವಿಶೇಷ ಅನುಭೂತಿ ನೀಡಿತು. ಕೊನೆಯಲ್ಲಿ ಬಹಳಷ್ಟು ರಾಗಗಳ ತುಂಡುಗಳನ್ನು ಮುತ್ತಿನ ಮಣಿಗಳಂತೆ ಪೋಣಿಸಿ ನುಡಿಸಿದ್ದು ಕಾರ್ಯಕ್ರಮದ ಪರಾಕಾಷ್ಠ ಆನಂದವನ್ನು ಕೊಟ್ಟಿತು.

ಇವರಿಗೆ ವಿಶೇಷ ತವಿಲ್‌ನಲ್ಲಿ ವಿದ್ವಾನ್ ನಂಗೂರ್ ಡಾ.ಕೆಎಸ್‌ಕೆ ಮಣಿಕಂಡನ್ ಹಾಗೂ ವಿದ್ವಾನ್‌ ಇಡುಂಬವನಂ ಕೆ.ಮಣಿಕಂಡನ್ ಜತೆಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT