ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಮಕಾವಾಸ್ತೆಗೆ ನಡೆದಿದೆ ಪರಿಹಾರ ಕಾರ್ಯ: ಚರಿತಾ

Last Updated 31 ಆಗಸ್ಟ್ 2018, 19:30 IST
ಅಕ್ಷರ ಗಾತ್ರ

ಕೊಡಗು, ಕೇರಳದಲ್ಲಿ ಪ್ರವಾಹದಿಂದಾಗಿ ನೂರಾರು ಮಂದಿ ನಿರಾಶ್ರಿತರಾಗಿದ್ದಾರೆ. ಆಸ್ತಿ – ಪಾಸ್ತಿ ಕಳೆದುಕೊಂಡಿದ್ದಾರೆ. ಕೃಷಿಕರು ಕೃಷಿ ಭೂಮಿ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಮನೆಗಳು ನೀರಿನಲ್ಲಿ ಕೊಚ್ಚಿಹೋಗಿದ್ದು, ಬಹುತೇಕರು ನಿರಾಶ್ರಿತರಾಗಿದ್ದಾರೆ. ಹೀಗಿದ್ದೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಕಟ್ಟಿ ಕುಳಿತಿವೆ. ವಿದೇಶದಿಂದ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಹೆಸರಿನಲ್ಲಿ ಹಣ ತರುವ ಕೇಂದ್ರ ಸರ್ಕಾರ, ನೆರೆ ಪರಿಹಾರ ನೀಡಲು ವಿದೇಶಗಳು ಹಣ ನೀಡುವುದಾಗಿ ಹೇಳಿರುವುದನ್ನು ತಿರಸ್ಕರಿಸಿದೆ. ಇತ್ತ ನೆರೆ ಪೀಡಿತ ಪ್ರದೇಶಗಳಿಗೆ ಪರಿಹಾರ ನೀಡಲೂ ಮೀನಮೇಷ ಎಣಿಸುತ್ತಿದೆ. ಈ ಬೆಳವಣಿಗೆಯನ್ನು ಕುರಿತು ಕಲಾವಿದೆ ಚರಿತಾ ಮೈಸೂರು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ್ದಾರೆ.

ನೆರೆಪೀಡಿತ ಪ್ರದೇಶಗಳಿಗೆ ಕೇಂದ್ರ‌ ಸರ್ಕಾರವು ಪರಿಹಾರ ನೀಡುವಲ್ಲಿ ತಡ ಮಾಡುತ್ತಿರುವುದು ಸರಿಯೇ?

*ದಕ್ಷಿಣದಲ್ಲಿ ಬಿಜೆಪಿಯನ್ನು ಸ್ಪಷ್ಟವಾಗಿ ತಿರಸ್ಕರಿಸಿರುವ ಕಮ್ಯುನಿಸ್ಟ್ ರಾಜ್ಯ ಕೇರಳ ಕುರಿತಂತೆ ಕೇಂದ್ರ ಸರ್ಕಾರ ನಿರ್ಲಕ್ಷ್ಯ ತೋರಿಸಿರುವುದರಲ್ಲಿ ಆಶ್ಚರ್ಯವೇನಿಲ್ಲ. ಕೇರಳ ತನ್ನ ವೋಟ್ ಬ್ಯಾಂಕ್ ಆಗಲಾರದು ಎಂಬುದು ಬಿಜೆಪಿಗೆ ಸ್ಪಷ್ಟವಾಗಿ ಗೊತ್ತಿದೆ.
ಇದೇ ಹಿನ್ನೆಲೆಯಲ್ಲಿ ನೆರೆಪೀಡಿತ ಪ್ರದೇಶಗಳಿಗೆ ವಿದೇಶಗಳಿಂದ ಹರಿದುಬರುತ್ತಿರುವ ಪರಿಹಾರ ಧನವನ್ನು ತಡೆಗಟ್ಟಲಾಗುತ್ತಿದೆ.

ಕರ್ನಾಟಕದ ಮಟ್ಟಿಗೆ ಕೊಡಗು ಮತ್ತು ಹಾಸನದಲ್ಲೂ ನೆರೆಪೀಡಿತ ಪ್ರದೇಶಗಳಿಗೆ ನಾಮಕಾವಾಸ್ತೆಗೆ ಒಂದಷ್ಟು ಪರಿಹಾರ ಧನ ಕೊಟ್ಟಂತೆ ಮಾಡಿದೆ. ಕೊಡಗಿನಲ್ಲಿ ಸದಾ ತನ್ನ ಪ್ರಾಬಲ್ಯ ಸ್ಥಾಪಿಸಲು ಹೆಣಗುವ ಬಿಜೆಪಿ ಈ ಸಲವೂ ಕೊಡಗಿನ ನೆರೆಪೀಡಿತ ಪ್ರದೇಶಗಳಲ್ಲಿ ತನ್ನ ಕೊಳಕು ರಾಜಕಾರಣದ ಬೇಳೆ ಬೇಯಿಸುವ ಪ್ರಯತ್ನ ಮಾಡಿದೆ. ನೆರೆಪೀಡಿತರ ನೆರವಿಗೆ ನಿಂತಿದ್ದ ಜನಪರ ಸಂಘಟನೆಗಳ ಕಾರ್ಯಕರ್ತರ ಮೇಲೆ ಸ್ಥಳೀಯ ಆರ್‌ಎಸ್‌ಎಸ್‌ ಮತ್ತು ಬಿಜೆಪಿಯಿಂದ ಹಲ್ಲೆಗಳಾಗಿರುವುದನ್ನು ಗಮನಿಸಬಹುದು.

ಕೇಂದ್ರ ಸರ್ಕಾರದ ಪರವಾಗಿ ಈಚೆಗಷ್ಟೇ ಕರ್ನಾಟಕಕ್ಕೆ ಭೇಟಿ ನೀಡಿದ್ದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಂ ಅವರ ದಾರ್ಷ್ಟ್ಯದ ನಡವಳಿಕೆ ನಮ್ಮ ಕಣ್ಣ ಮುಂದಿದೆ. ಕರ್ನಾಟಕದಲ್ಲಿ ಪ್ರಾಬಲ್ಯ ಕೈತಪ್ಪಿ ಹೋದ ಹತಾಶೆ ಬಿಜೆಪಿಯಲ್ಲಿ ಎದ್ದು ಕಾಣುತ್ತಿದೆ. ಕೊಡಗಿನ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧವೂ ಘೋಷಣೆ ಕೂಗಲಾಯ್ತು. ಇಲ್ಲಿ ಜನಪರ ಕಾರ್ಯಗಳಿಗಿಂತ ಹೆಚ್ಚಾಗಿ ರಾಜಕೀಯ ಹಿತಾಸಕ್ತಿ ಪೋಷಿಸುವ ದುಷ್ಟ ಮನಸ್ಥಿತಿಯನ್ನು
ಗಮನಿಸಬಹುದು.

ನೆರೆ ಪರಿಹಾರಕ್ಕೆ ವಿದೇಶಿ ಹಣ ತಿರಸ್ಕರಿಸುವ ಅಗತ್ಯವಿತ್ತೇ?

* ಅರಬ್ ರಾಷ್ಟ್ರಗಳು ಕೊಡಲು ಹೊರಟಿರುವ ಸಾವಿರಾರು ಕೋಟಿ ಪರಿಹಾರ ಧನದ ಮುಂದೆ ಕೇಂದ್ರ ಸರ್ಕಾರವು ನೂರು-ಐನೂರರ ಚೌಕಾಸಿ ಮಾಡುತ್ತಿದೆ. ಈ ಮೂಲಕ ತನ್ನ ಹೊಲಸು ವೋಟ್ ಬ್ಯಾಂಕ್ ರಾಜಕಾರಣ ಮತ್ತು ಜನವಿರೋಧಿ ನಿಲುವನ್ನು ಮತ್ತೊಮ್ಮೆ ಸ್ಪಷ್ಟಗೊಳಿಸಿದೆ. ವಾಜಪೇಯಿಯವರ ಅಸ್ಥಿ ವಿಸರ್ಜನೆಗೆ ತೆಗೆದುಕೊಂಡ ಕಾಳಜಿಯಲ್ಲಿ ಎರಡು ಪರ್ಸೆಂಟ್ ಕಾಳಜಿ ಕೂಡ ನೆರೆಪರಿಹಾರ ಕಾರ್ಯಕ್ಕೆ ಕೊಡಲಾಗಿಲ್ಲ ಎನ್ನುವುದು ಬೇಸರ ಮೂಡಿಸುತ್ತಿದೆ.

ಪರಿಹಾರ ಕಾರ್ಯಾಚರಣೆ ವಿಳಂಬವಾಯಿತು ಅನ್ನಿಸುತ್ತಿಲ್ಲವೇ?

* ಪರಿಹಾರ ಕಾರ್ಯಾಚರಣೆ ವಿಳಂಬವಾಗಿದೆ. ಕೊಡಗಿನಲ್ಲಿ ಭೂಕುಸಿತದಿಂದ ನೆಲೆ ಕಳೆದುಕೊಂಡವರನ್ನು, ನೆರೆಯಲ್ಲಿ ಕೊಚ್ಚಿಹೋದವರನ್ನು, ನಾಪತ್ತೆಯಾದವರನ್ನು ಹುಡುಕುವ ಮತ್ತು ರಕ್ಷಿಸುವ ಜವಾಬ್ದಾರಿ ಹೊರಬೇಕಿದ್ದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳೆರಡೂ ಈ ವಿಷಯದಲ್ಲಿ ಹಿಂದೆಬಿದ್ದಿವೆ.

ರಾಜ್ಯ ಸರ್ಕಾರದ ಮಟ್ಟಿಗೆ ಇಂಥ ತುರ್ತು ಪರಿಸ್ಥಿತಿಯಲ್ಲಿ ನೆರವಿಗೆ ಧಾವಿಸಿ, ಜನರನ್ನು ರಕ್ಷಿಸುವ ನೈಪುಣ್ಯತೆಯಿರುವ, ತುರ್ತು ಪರಿಸ್ಥಿತಿಯಲ್ಲಿ ಸನ್ನದ್ಧವಾಗಿರುವ ಯಾವುದೇ ಪಡೆ ಇಲ್ಲದಿರುವುದು ಈ ಅವಘಡದ ಸಮಯದಲ್ಲಿ ಮನದಟ್ಟಾಗಿದೆ. ಇನ್ನು, ಮೊದಲೇ ಕರ್ನಾಟಕ ಕುರಿತು ನಿರ್ಲಕ್ಷ್ಯವಹಿಸಿರುವ ಕೇಂದ್ರ ಸರ್ಕಾರದ ಮನವೊಲಿಸಿ, ಒಂದಷ್ಟು ಸೈನಿಕ ತುಕಡಿಯನ್ನು ಇಲ್ಲಿಗೆ ಬರಮಾಡಿಕೊಳ್ಳಲಾಯಿತಾದರೂ ಅಷ್ಟರಲ್ಲಾಗಲೇ ನೆರೆ ಪರಿಸ್ಥಿತಿ ತೀರಾ ಬಿಗಡಾಯಿಸಿತ್ತು. ಜೋಡುಪಾಲದಲ್ಲಿ ಆದಿವಾಸಿ ಬುಡಕಟ್ಟು ಜನರ ಪೈಕಿ ಹಲವರಿಗೆ ಸೈನ್ಯದ ನೆರವೂ ತಲುಪದೆ ಹಲವರು ನೀರುಪಾಲಾದರೆನ್ನಲಾಗಿದೆ. ನಾಪತ್ತೆಯಾದ ಕೆಲವರನ್ನು ಪತ್ತೆಹಚ್ಚಲಾಗಲೇ ಇಲ್ಲ. ಪರಿಹಾರ ಕಾರ್ಯಾಚರಣೆ ನೆರೆಬಂದ ಕೂಡಲೆ ಶುರುವಾಗಿದ್ದರೆ ಬಹುಶಃ ಹಲವು ಜೀವಗಳನ್ನು ಉಳಿಸುವುದು ಸಾಧ್ಯವಾಗುತ್ತಿತ್ತೇನೊ. ರಾಜ್ಯ ಸರ್ಕಾರ ಇನ್ನಾದರೂ ತುರ್ತು ಪರಿಸ್ಥಿತಿಯಲ್ಲಿ ಶೀಘ್ರ ನೆರವಿಗೆ ಧಾವಿಸಬಹುದಾದ ನಿಪುಣರ ಪಡೆಯೊಂದನ್ನು ನೇಮಿಸುವ ಕಡೆಗೆ ಗಮನಹರಿಸಲಿ.

ವಿಪತ್ತು ನಿರ್ವಹಣೆ ವಿಧಾನ ಸುಧಾರಿಸಬೇಕು ಅನ್ನಿಸುತ್ತದೆಯೇ?

ಕೊಡಗು - ಹಾಸನ ನೆರೆಪೀಡಿತ ಪ್ರದೇಶಗಳಿಗೆ ತುರ್ತು ಪರಿಹಾರ ಕೈಗೊಳ್ಳುವಲ್ಲಿ ರಾಜ್ಯ ಸರ್ಕಾರ ಹಿಂದೆ ಬಿದ್ದಿದೆ. ದೊಡ್ಡ ಪ್ರಮಾಣದಲ್ಲಿ ಹಾನಿಗೊಳಗಾದ ಪ್ರದೇಶಗಳಿಗೆ ಬೇಕಾಗಿದ್ದ ಮಟ್ಟದಲ್ಲಿ, ಬೇಕಾದ ಸಮಯದಲ್ಲಿ ಔಷಧಿ ಮತ್ತು ಇತರೆ ತುರ್ತು ಸಲಕರಣೆಗಳನ್ನು ಒದಗಿಸುವಲ್ಲಿ ಹಿಂದೆ ಬಿದ್ದಿದೆ. ಈ ವಿಷಯದಲ್ಲಿ ಸರ್ಕಾರಿ ಪದಾಧಿಕಾರಿಗಳಿಗಿಂತ ಹೆಚ್ಚಾಗಿ ಸ್ವಯಂ ಸಂಘಟನೆಯ ಕಾರ್ಯಕರ್ತರು ಹೆಚ್ಚು ಚುರುಕಾಗಿ ಕೆಲಸ ನಿರ್ವಹಿಸಿದ್ದಾರೆ. ತುರ್ತು ಪರಿಸ್ಥಿತಿ ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ಇನ್ನೂ ಸಾಕಷ್ಟು ಸುಧಾರಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT