ಶುಕ್ರವಾರ, ಆಗಸ್ಟ್ 12, 2022
28 °C
ಸ್ಥಳದಲ್ಲೇ ಯೋಜನೆಗಳ ಮಾಹಿತಿ, ನೋಂದಣಿ, ಫಲಾನುಭವಿಯಾಗುವ ಅವಕಾಶ– ರಾಮದಾಸ್

ಸೆ. 17ರಂದು ’ನಮೋ ದಿವಸ್ ನಮಸ್ಕಾರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಪ್ರಧಾನಮಂತ್ರಿ ನರೇಂದ್ರಮೋದಿ ಅವರ ಜನ್ಮದಿನದ ಪ್ರಯುಕ್ತ ವಿದ್ಯಾರಣ್ಯಾಪುರಂನ ರಾಮಲಿಂಗೇಶ್ವರ ಉದ್ಯಾನದಲ್ಲಿ ‘ನಮೋ ದಿವಸ್ ನಮಸ್ಕಾರ’ ಶೀರ್ಷಿಕೆಯಡಿ ಸೆ. 17ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4ರವರೆಗೆ ವಿಶೇಷ ಕಾರ್ಯಕ್ರಮಗಳು ನಡೆಯಲಿವೆ.

ಇಲ್ಲಿ ಕೇಂದ್ರ ಸರ್ಕಾರದ ಎಲ್ಲ ಯೋಜನೆಗಳ ಮಾಹಿತಿ ಲಭ್ಯವಿದ್ದು, ಅರ್ಹರು ಫಲಾನುಭವಿಯಾಗುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು. ಈ ಮಾಹಿತಿ ನೀಡುವ ಆ್ಯಪ್‌ನ್ನು ಆನ್‌ಲೈನ್‌ನಲ್ಲಿ ಸಾಹಿತಿ ಎಸ್.ಎಲ್‌.ಭೈರಪ್ಪ ಬಿಡುಗಡೆ ಮಾಡುವರು ಎಂದು ಶಾಸಕ ಎಸ್.ಎ.ರಾಮದಾಸ್ ಇಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪ್ರಧಾನಿಯವರು ನೀಡಿದ ಆಯ್ದ 70 ಯೋಜನೆಗಳ ಫ್ಲೆಕ್ಸ್‌ಗಳನ್ನು ಪ್ರದರ್ಶನಕ್ಕಿಡಲಾಗುವುದು. ಇವುಗಳನ್ನು ವೀಕ್ಷಿಸಿ, ಯೋಜನೆಗಳ ಅನುಷ್ಠಾನ ಸಂಬಂಧ 2 ಪುಟಗಳಷ್ಟು ಸಲಹೆ ನೀಡಲು ಅವಕಾಶ ಇದೆ. ಇದರಲ್ಲಿ ಉತ್ತಮವಾದ ಸಲಹೆಗಳಿಗೆ ಬಹುಮಾನಗಳನ್ನು ನೀಡಲಾಗುವುದು ಎಂದು ಹೇಳಿದರು.

ನರೇಂದ್ರ ಮೋದಿ ಅವರ ಬಾಲ್ಯದಿಂದ ಹಿಡಿದು ಇಲ್ಲಿಯವರೆಗಿನ 70 ಭಾವಚಿತ್ರಗಳ ಪ್ರದರ್ಶನದ ವ್ಯವಸ್ಥೆಯು ಇರಲಿದೆ. 18 ವರ್ಷದೊಳಗಿನ ಮಕ್ಕಳು ಇವುಗಳನ್ನು ವೀಕ್ಷಿಸಿ 5 ರಸಪ್ರಶ್ನೆಗಳಿಗೆ ಉತ್ತರ ನೀಡಬೇಕಿದೆ. ಸರಿಯಾದ ಉತ್ತರ ನೀಡಿದ ಮಕ್ಕಳಿಗೆ ‘ನಮೋ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು ಎಂದು ಹೇಳಿದರು.

ಫ್ಲೆಕ್ಸ್‌ ವಿಭಾಗ ಹಾಗೂ ಮಕ್ಕಳ ರಸಪ್ರಶ್ನೆ ವಿಭಾಗದಲ್ಲಿ ಪ್ರಥಮ ಬಹುಮಾನ ₹ 5 ಸಾವಿರ, ದ್ವಿತೀಯ ಬಹುಮಾನ ₹ 4 ಸಾವಿರ, ತೃತೀಯ ಬಹುಮಾನ ₹ 3 ಸಾವಿರ, 4ನೇ ಬಹುಮಾನ ₹ 2 ಸಾವಿರ, 5ನೇ ಬಹುಮಾನ ₹ 1 ಸಾವಿರ ಹಾಗೂ 5 ಸಮಾಧಾನಕರ ಬಹುಮಾನಗಳು ಇರಲಿವೆ ಎಂದರು.

ವೃತ್ತಿ ಜೀವನವನ್ನು ಪ್ರೀತಿಸಿ, ಗೌರವಿಸಿ ಆತ್ಮಗೌರವದಿಂದ ಬದುಕುತ್ತಿರುವ 70 ಜನ ವೃತ್ತಿವಂತರನ್ನು ಸನ್ಮಾನಿಸಲಾಗುವುದು, ಮೋದಿ ಅವರ 6 ವರ್ಷಗಳ ಸಾಧನೆಯನ್ನು ಕನ್ನಡ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ ಆನ್‌ಲೈನ್‌ನಲ್ಲಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಮೋದಿ ಜನಿಸಿದ ಸಮಯವಾದ ಬೆಳಿಗ್ಗೆ 10.15ಕ್ಕೆ ಅಭಿಲಾಷ್ ಎಂಬ ಕಾರ್ಯಕರ್ತರೊಬ್ಬರು ಮೋದಿ ಅವರ ಭಾವಚಿತ್ರವನ್ನು ಬಿಡಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಗುವುದು. ಬೆಳಿಗ್ಗೆ 9 ಗಂಟೆಯಿಂದ ಸಂಜೆ 5ರವರೆಗೆ ನಿರಂತರವಾಗಿ ಹಾಡುಗಾರಿಕೆ, ಶಾಸ್ತ್ರೀಯ ಸಂಗೀತಾ, ದೇಶಭಕ್ತಗೀತೆಗಳ ಕಾರ್ಯಕ್ರಮ ಇರಲಿದೆ ಎಂದು ತಿಳಿಸಿದರು.

ಪಕ್ಷದ ಮುಖಂಡರಾದ ವಡಿವೇಲು, ಬಾಲಕೃಷ್ಣ, ನಾಗೇಶ್‌ಕುಮಾರ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು