ಮುಳುಗಿದ ಬಡವರ ಮನೆ; ಜೀವನ ಕಂಗಾಲು

7
ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಪ್ರವಾಹ ಹಿನ್ನೆಲೆ; ಸಚಿವರ ಭೇಟಿ, ಪರಿಶೀಲನೆ

ಮುಳುಗಿದ ಬಡವರ ಮನೆ; ಜೀವನ ಕಂಗಾಲು

Published:
Updated:
Deccan Herald

ಮೈಸೂರು: ‘ನಾವು ಕೂಲಿ ಮಾಡಿ ಜೀವನ ಸಾಗಿಸುವ ಜನರು. ನೀರು ಮನೆಯೊಳಗೆ ನುಗ್ಗಿದೆ, ಗೋಡೆ ಕುಸಿದಿದೆ. ಸಚಿವರು ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಆ ಪರಿಹಾರ ಯಾವಾಗ ಸಿಗುವುದೋ ಏನೋ...’

ಹೀಗೆ, ‘ಪ್ರಜಾವಾಣಿ’ ಜತೆ ಬೇಸರ ತೋಡಿಕೊಂಡವರು ನಂಜನಗೂಡಿನ ಹಳ್ಳದಕೇರಿಯ ನಿವಾಸಿ ಶಿವಮ್ಮ. ಕಪಿಲಾ ನದಿಯ ನೀರಿನ ಪ್ರಮಾಣ ಹೆಚ್ಚಾಗಿ ಮನೆಗೆ ನೀರು ನುಗ್ಗಿ ಮೂರ್ನಾಲ್ಕು ದಿನಗಳೇ ಆಗಿವೆ. ಆಗಿಂದಲೂ ಮೊಣಕಾಲುದ್ದ ನೀರಿನಲ್ಲೇ ಕಾಲ ಕಳೆಯುವಂತೆ ಆಗಿದೆ. ಗಂಜಿಕೇಂದ್ರದ ಊಟವೇನೋ ಉತ್ತಮವಾಗಿದೆ. ಸಮಸ್ಯೆ ಆಲಿಸಲು ಬಂದವರು ಹರಿಸಿರುವ ಭರವಸೆಗಳು ಯಾವಾಗ ಕೈ ಸೇರುವುದೊ ಇವರಿಗೆ ತಿಳಿಯದಾಗಿದೆ.

ಕಬಿನಿ ಜಲಾಶಯದಿಂದ ನಿತ್ಯ 75 ಸಾವಿರ ಕ್ಯುಸೆಕ್ ನೀರು ಹೊರಬಿಡಲಾಗುತ್ತಿದೆ. ಅಲ್ಲದೇ ನುಗು ಹಾಗೂ ತಾರಕ ಜಲಾಶಯಗಳಿಂದದಲೂ 5 ಸಾವಿರ ಕ್ಯುಸೆಕ್‌ ನೀರು ಹರಿಯುತ್ತಿದೆ. ಹಾಗಾಗಿ, ನದಿಯ ಪ್ರವಾಹ ಹೆಚ್ಚಿದೆ. ಈ ಕಾರಣದಿಂದ ದಕ್ಷಿಣ ಕಾಶಿ ನಂಜನಗೂಡು ನೀರಿನಿಂದ ಆವೃತವಾಗಿದೆ.

ಇಲ್ಲಿನ ಶ್ರೀಕಂಠೇಶ್ವರ ದೇವಸ್ಥಾನ ಎದುರಿನ ರಸ್ತೆ, ದೇವಸ್ಥಾನದ ಸ್ನಾನಘಟ್ಟ, ಮುಡಿಕಟ್ಟೆ, ಪರಶುರಾಮ ದೇವಸ್ಥಾನ, ಅಯ್ಯಪ್ಪಸ್ವಾಮಿ ದೇವಸ್ಥಾನ, ಸತ್ಯನಾರಾಯಣ ಸ್ವಾಮಿ ದೇಗುಲ, ಹದಿನಾರುಕಾಲು ಮಂಟಪ, ಹೆಜ್ಜಿಗೆ ಸಂಪರ್ಕಿಸುವ ಸೇತುವೆಯನ್ನೂ ನೀರು ಆವರಿಸಿದೆ.

ಪಟ್ಟಣದ ಹಳ್ಳದಕೇರಿ, ಸರಸ್ವತಿ ಕಾಲೊನಿ, ಒಕ್ಕಲಗೇರಿ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ. ಇಲ್ಲಿನ ಮಲ್ಲನಮೂಲೆ ಮಠಕ್ಕೆ ನೀರು ನುಗ್ಗಿದೆ. ಮುಡಿಕಟ್ಟೆ, ತೋಪಿನ ಬೀದಿ, ತೇರಿನ ಬೀದಿಗಳಲ್ಲಿ ನೀರಿನಲ್ಲೇ ಕಾಲ ಕಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಪ್ರವಾಹದ ಹಿನ್ನೆಲೆಯಲ್ಲಿ ಕಂದಾಯ ಮತ್ತು ಕೌಶಲಾಭಿವೃದ್ಧಿ ಸಚಿವ ಆರ್‌.ವಿ.ದೇಶಪಾಂಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸಂತ್ರಸ್ತರೊಂದಿಗೆ ಮಾತುಕತೆ ನಡೆಸಿ ಪರಿಹಾರ ನೀಡುವ ಭರವಸೆ ನೀಡಿದರು.

ನೆರೆಪೀಡಿತ ಪ್ರದೇಶಗಳನ್ನು ಡ್ರೋಣ್ ಕ್ಯಾಮೆರಾ ಬಳಸಿ ಚಿತ್ರೀಕರಿಸಿ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕಾಂಗ್ರೆಸ್ ಮತ್ತು ಜೆಡಿಎಸ್‌ ಮೈತ್ರಿ ಸರ್ಕಾರ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಮಧ್ಯಾಹ್ನ ನಂಜನಗೂಡಿಗೆ ಭೇಟಿ ಪರಿಶೀಲನೆ ನಡೆಸಿದರು. ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ಒತ್ತಾಯಿಸುವುದಾಗಿ ತಿಳಿಸಿದರು.

ಪರಿಹಾರ ನೀಡುವುದು ಆದ್ಯತೆ

 ‘ನೆರೆ ಪೀಡಿತ ಪ್ರದೇಶಗಳಿಗೆ ಪರಿಹಾರ ನೀಡುವುದು ನಮ್ಮ ಆದ್ಯತೆ. ಈ ನಿಟ್ಟಿನಲ್ಲಿ ಕೊಡಗು ಜಿಲ್ಲಾಧಿಕಾರಿಗೆ ₹ 30 ಕೋಟಿ, ಮೈಸೂರು, ಹಾಸನ ಜಿಲ್ಲಾಧಿಕಾರಿಗಳಿಗೆ ₹ 5 ಕೋಟಿಯನ್ನು ನೀಡಲಾಗಿದೆ’ ಎಂದು ಕಂದಾಯ ಮತ್ತು ಕೌಶಲಾಭಿವೃದ್ಧಿ ಸಚಿವ ಆರ್‌.ವಿ.ದೇಶಪಾಂಡೆ ತಿಳಿಸಿದರು.

‘ಈ ಹಿನ್ನೆಲೆಯಲ್ಲಿ ಸಹಾಯ ಕೋರಿ ಕೇಂದ್ರ ಸರ್ಕಾರಕ್ಕೂ ಪತ್ರ ಬರೆಯುತ್ತೇವೆ. ಕೊಡಗಿನಲ್ಲಿ ವಿವಿಧ ರಕ್ಷಣಾ ತಂಡಗಳಲ್ಲಿ 140 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಹಾರ, ಔಷಧಿ ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ಮೈಸೂರಿನಿಂದ ಪೂರೈಸಲಾಗಿದೆ’ ಎಂದರು.

‘ಮೈಸೂರು ಆಸುಪಾಸು ಪ್ರವಾಹದಲ್ಲಿ ಮುಳುಗಿರುವ ಗ್ರಾಮಗಳ ಜನರ ರಕ್ಷಣೆ ನಮ್ಮ ಆದ್ಯತೆ. ನೆರೆ ಸಂತ್ರಸ್ತರಿಗೆ ನಂಜನಗೂಡು ದೇವಾಲಯದ ದಾಸೋಹ ಭವನದಲ್ಲಿ ಗಂಜಿ ಕೇಂದ್ರ ತೆರೆಯಲಾಗಿದೆ’ ಎಂದು ತಿಳಿಸಿದರು.

ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಮಾತನಾಡಿ, ‘ಮೈಸೂರಿನಲ್ಲಿ ಪ್ರವಾಹ ಎದುರಿಸಲು ಅಧಿಕಾರಿಗಳು ಸಜ್ಜಾಗಿದ್ದಾರೆ. ನೆರೆ ಜಿಲ್ಲೆಗಳ ಸಮಸ್ಯೆಯನ್ನೂ ಪರಿಹರಿಸಲು ಸಿದ್ಧವಾಗಿದ್ದಾರೆ’ ಎಂದು ಹೇಳಿದರು.

ನಮಗೆ ತಾತ್ಕಾಲಿಕ ಪರಿಹಾರ ಬೇಡ. ಎರಡು ಮೂರು ಸಾವಿರ ರೂಪಾಯಿಗಳಲ್ಲಿ ಮನೆ ದುರಸ್ತಿ ಸಾಧ್ಯವೇ? ಶಾಶ್ವತ ಪರಿಹಾರ ಬೇಕು
- ನಂಜಮ್ಮ, ಸರಸ್ವತಿ ಕಾಲೊನಿ ನಿವಾಸಿ

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !