ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ದಸರಾ ಮೆರವಣಿಗೆ ವೈಭವ

ನಗರದ ಪ್ರಮುಖ ಬೀದಿಗಳಲ್ಲಿ ಸಾಗಿದ ಮೆರವಣಿಗೆ; ಜನಪದ ಕಲಾ ತಂಡಗಳ ಮೆರುಗು
Last Updated 15 ಅಕ್ಟೋಬರ್ 2018, 19:19 IST
ಅಕ್ಷರ ಗಾತ್ರ

ನಂಜನಗೂಡು: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ತಾಲ್ಲೂಕು ಆಡಳಿತ ಆಯೋಜಿಸಿದ್ದ ಗ್ರಾಮೀಣ ದಸರಾ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.

ನಗರದ ಜೂನಿಯರ್ ಕಾಲೇಜು ಮೈದಾನದಿಂದ ವಿವಿಧ ಹೂವುಗಳಿಂದ ಅಲಂಕೃತಗೊಂಡ ವಾಹನದಲ್ಲಿ ನಾಡದೇವತೆ ಚಾಮುಂಡೇಶ್ವರಿಯ ಭಾವಚಿತ್ರವನ್ನು ಇಟ್ಟು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ಪೂರ್ಣಕುಂಭ ಹೊತ್ತ ಮಹಿಳೆಯರು, ಕಂಸಾಳೆ, ಪೂಜಾ ಕುಣಿತ, ಗೊರವರ ಕುಣಿತ, ಗಾರುಡಿ ಗೊಂಬೆ, ಹುಲಿವೇಷ, ಕೀಲು ಕುದುರೆ, ಮರಗಾಲು ತಂಡಗಳ ಪ್ರದರ್ಶನ ಮೆರವಣಿಗೆಗೆ ಮೆರುಗು ನೀಡಿತು.

ಶ್ರೀಕಂಠೇಶ್ವರ ಕಲಾ ಮಂದಿರದಲ್ಲಿ ಗ್ರಾಮೀಣ ದಸರಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಬಿ.ಹರ್ಷವರ್ಧನ್,
‘ನಗರದಲ್ಲಿ ನಾಡಹಬ್ಬ ಗ್ರಾಮೀಣ ದಸರಾವನ್ನು ಗ್ರಾಮೀಣ ಭಾಗದ ಕಲೆ, ನೃತ್ಯಗಳನ್ನು ಬಳಸಿಕೊಂಡು ಅಚ್ಚುಕಟ್ಟಾಗಿ ನಡೆಸಲಾಗುತ್ತಿದೆ. ನಮ್ಮ ಪರಂಪರೆ ಉಳಿಸಿಕೊಳ್ಳಲು ದಸರಾ ಆಚರಣೆ ಅತಿ ಮುಖ್ಯ’ ಎಂದು ಹೇಳಿದರು.

‘ಯುವ ದಸರಾದ ಹೆಸರಿನಲ್ಲಿ ಪಾಶ್ಚಾತ್ಯ ಸಂಗೀತಕ್ಕೆ ಹುಚ್ಚೆದ್ದು ಕುಣಿಯುವ ಯುವಕ–ಯುವತಿಯರನ್ನು ಕಂಡಾಗ, ನಮ್ಮ ಹೆಮ್ಮೆಯ ದಸರಾ ತನ್ನ ಮಹತ್ವ ಕಳೆದುಕೊಳ್ಳುತ್ತಿದೆ ಎನಿಸಿತು. ಮೈಸೂರಿನ ದಸರಾ ಕಾರ್ಯಕ್ರಮಗಳನ್ನು ಕಾಂಗ್ರೆಸ್ ಪಕ್ಷದ ನಾಯಕರು ಬಹಿಷ್ಕರಿಸಿದ್ದಾರೆ. ದಸರಾ ಕಾರ್ಯಕ್ರಮದ ಆಯೋಜಕರಿಗೆ ಸಮಯ ಪ್ರಜ್ಞೆ ಇಲ್ಲ. ದಸರಾದ ಸಂಪ್ರದಾಯಿಕ ಉದ್ಘಾಟನೆಯೂ ಸರಿಯಾಗಿ ನಡೆಯಲಿಲ್ಲ’ ಎಂದು ದೂರಿದರು.

ಅಂಗನವಾಡಿ ಕಾರ್ಯಕರ್ತೆಯರು ಸಾಂಪ್ರದಾಯಿಕ ಹಾಗೂ ಜನಪದ ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟರು. ಮ್ಯಾಜಿಕ್ ಷೋ ಹಾಗೂ ಮಾತನಾಡುವ ಗೊಂಬೆ ಪ್ರದರ್ಶನ ಪೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ಕಾರ್ಯಕ್ರಮದಲ್ಲಿ ನಗರಸಭೆ ಜಿ.ಪಂ.ಸದಸ್ಯ ಸದಾನಂದ, ಮಂಗಳಾ ಸೋಮಶೇಖರ್, ನಗರಸಭೆ ಅಧ್ಯಕ್ಷೆ ಪುಷ್ಪಲತಾ, ಸ್ಥಾಯಿ ಸಮಿತಿ ಅಧ್ಯಕ್ಷ ರಾಮಕೃಷ್ಣ, ತಾ.ಪಂ. ಉಪಾಧ್ಯಕ್ಷ ಗೋವಿಂದರಾಜನ್, ಸದಸ್ಯರಾದ ಹುಲ್ಲಹಳ್ಳಿ ಶಿವಣ್ಣ, ಬಿ.ಎಸ್.ರಾಮು, ತಾ.ಪಂ. ಇಒ ಶ್ರೀಕಂಠರಾಜೇ ಅರಸ್, ತಹಶೀಲ್ದಾರ್ ದಯಾನಂದ್, ದೈಹಿಕ ಪರಿವೀಕ್ಷಕ ಮಧುರದಾಸ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT