ಸೋಮವಾರ, ಆಗಸ್ಟ್ 26, 2019
20 °C

24 ಗಂಟೆಗಳ ಕಾಲ ಪ್ರವಾಹದ ಮಧ್ಯೆ ಕಾಲ ಕಳೆದ ಸಾಹಸಿ: ಆಶ್ಚರ್ಯಕರ ರೀತಿಯಲ್ಲಿ ಪಾರು

Published:
Updated:
Prajavani

ನಂಜನಗೂಡು: ಸಾಹಸ ಮೆರೆಯಲು ಕಬಿನಿ ನದಿಯಲ್ಲಿ ಭಾನುವಾರ ಧುಮುಕಿ ನಾಪತ್ತೆಯಾಗಿದ್ದ ಪೂಜಾರಿ ವೆಂಕಟೇಶ್ (55) ಆಶ್ಚರ್ಯಕರ ರೀತಿಯಲ್ಲಿ ಅಪಾಯದಿಂದ ಪಾರಾಗಿ ಸೋಮವಾರ ಈಜಿ ದಡ ಸೇರಿದ್ದಾರೆ.

ಇವರು ಭಾನುವಾರ ಮಧ್ಯಾಹ್ನ ಸ್ನೇಹಿತರೊಂದಿಗೆ ಅರ್ಧಗಂಟೆಯಲ್ಲಿ ದೇವಸ್ಥಾನದ ಬಳಿ ಈಜಿಕೊಂಡು ಬರುವುದಾಗಿ ಹೇಳಿ ಚಾಲೆಂಜ್ ಮಾಡಿ ಹೆಜ್ಜೆಗೆ ಸೇತುವೆ ಮೇಲಿಂದ ನೀರಿಗೆ ಧುಮುಕಿದ್ದರು. ಆದರೆ, ಸೇತುವೆಯ ಒಂದು ಬದಿಯಿಂದ ಮತ್ತೊಂದು ಬದಿಗೆ ಇವರು ಬಂದಿರಲಿಲ್ಲ.‌

ನೀರಿನ ಸೆಳೆತ ಅಗಾಧವಾಗಿದ್ದುದ್ದರಿಂದ ಸ್ನೇಹಿತರು ಇವರು ನೀರಿನಲ್ಲಿ ಕೊಚ್ಚಿಕೊಂಡು ಹೋದರು ಎಂದೇ ಭಾವಿಸಿದ್ದರು. ರಕ್ಷಣಾ ಪಡೆ ಹುಡುಕಾಟವನ್ನೂ ನಡೆಸಿತ್ತು. ಈ ಸಂಬಂಧ ಸಂಬಂಧಿಕರು ನಾಪತ್ತೆ ಪ್ರಕರಣ ದಾಖಲಿಸಿದ್ದರು. ಸೋಮವಾರ ನೀರಿನ ಸೆಳೆತ ಕಡಿಮೆಯಾಗುತ್ತಿದ್ದಂತೆ ಇವರು ಹೊರ ಬಂದರು.

ಈ ಕುರಿತು ‘ಪ್ರಜಾವಾಣಿ’‌ಗೆ ಪ್ರತಿಕ್ರಿಯಿಸಿದ ಅವರು, ‘ಸೇತುವೆಯ ತೂಬುಗಳ ತುಂಬ ನೀರು ಹರಿಯುತ್ತಿತ್ತು. ಪ್ರಾಣಾಯಾಮದಿಂದ ಉಸಿರುಗಟ್ಟಿ ಹಿಡಿದು ಸೇತುವೆಯಡಿ ನೀರಿನಲ್ಲಿ ಮುಳುಗಿಯೇ ಈಜಬಹುದು ಎಂದು ಭಾವಿಸಿದ್ದೆ. ಆದರೆ, ಅರ್ಧಕ್ಕೆ ಬರುವಷ್ಟರಲ್ಲಿ ಉಸಿರುಗಟ್ಟಲು ಆಗಲಿಲ್ಲ. ಆಗ ಮೇಲೆ ತಲೆ ಹಾಕಿದೆ. ಸೇತುವೆ ಕೆಳಭಾಗದಲ್ಲಿ ಅಲ್ಲೊಂದು ಸಣ್ಣ ಜಾಗ ಕಂಡಿತು. ಕಂಬಿ ಹಿಡಿದು ಹತ್ತಿ ಆ ಸಣ್ಣ ಜಾಗದಲ್ಲೇ ಇಡೀ ರಾತ್ರಿ ಕಳೆದೆ. ಚಳಿ, ಜ್ವರ ಬಂದಿತು. ನಂತರ, ನೀರು ಕಡಿಮೆಯಾಗಿದ್ದನ್ನು ಕಂಡು ನೀರಿನಲ್ಲಿ ಧುಮುಕಿ ಸೇತುವೆಯ ಮತ್ತೊಂದು ಬದಿಗೆ ಬಂದು ಜನರನ್ನು ಕೂಗಿದೆ. ಆಗ ಜನರು ರಕ್ಷಿಸಿದರು’ ಎಂದು ಅವರು ತಿಳಿಸಿದ್ದಾರೆ.

ಇವರು ಈ ಹಿಂದೆ ಸೈಕಲ್‌ನಲ್ಲಿ ದೇಶ ಪರ್ಯಟಣೆ ನಡೆಸಿದ್ದರು. ಬೀಚನಹಳ್ಳಿಯಿಂದ ಹುಲ್ಲಹಳ್ಳಿಯವರೆಗೆ ಕಬಿನಿ ನದಿಯನ್ನು 10 ಗಂಟೆಗಳ ಅವಧಿಯಲ್ಲಿ ಈಜಿ ಸಾಹಸ ಮೆರೆದಿದ್ದರು. ಪ್ರಾಣಾಯಾಮ, ಯೋಗ ಕಲಿತು ಸಾಹಸ ಪ್ರವೃತ್ತಿಯನ್ನು ಮೈಗೂಡಿಸಿಕೊಂಡಿದ್ದರು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.

Post Comments (+)