ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂಜನಗೂಡು: ಶ್ರೀಕಂಠೇಶ್ವರನ ದರ್ಶನಕ್ಕೆ ಹರಿದುಬಂದ ಭಕ್ತಸಾಗರ

ನಂಜನಗೂಡು ದೇವಾಲಯದಲ್ಲಿ ಭಾನುವಾರ ಹುಣ್ಣಿಮೆ ಪೂಜೆ: ಭಕ್ತರ ನಿಯಂತ್ರಿಸಲು ಲಘು ಲಾಠಿ ಪ್ರಹಾರ
Last Updated 10 ಫೆಬ್ರುವರಿ 2020, 11:31 IST
ಅಕ್ಷರ ಗಾತ್ರ

ನಂಜನಗೂಡು: ನಗರದ ಪುರಾಣ ಪ್ರಸಿದ್ಧ ಶ್ರೀಕಂಠೇಶ್ವರನ ದೇವಾಲಯದಲ್ಲಿ ಭಾನುವಾರ ವರ್ಷದ ಮೊದಲ ಹುಣ್ಣಿಮೆ ಪ್ರಯುಕ್ತ ದೇವರ ದರ್ಶನ ಪಡೆಯಲು ರಾಜ್ಯದ ನಾನಾ ಭಾಗಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು.

ಬೆಳಿಗ್ಗೆ 4 ಗಂಟೆಗೆ ಕಪಿಲಾ ನದಿಯಲ್ಲಿ ಪುಣ್ಯಸ್ನಾನ ಮಾಡಿಕೊಂಡು, ದೇವರ ದರ್ಶನ ಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದರು. ದೇವಾಲಯ ಆಗಮಿಕ ನಾಗಚಂದ್ರ ದೀಕ್ಷಿತ್‌ ನೇತೃತ್ವದಲ್ಲಿ ಬೆಳಗ್ಗಿನ ಜಾವ ಶ್ರೀಕಂಠೇಶ್ವರ ಸ್ವಾಮಿಗೆ ಪಂಚತೀರ್ಥಗಳ ಅಭಿಷೇಕ, ರುದ್ರಾಭಿಷೇಕ, ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ, ಬಿಲ್ವಪತ್ರ ಅರ್ಚನೆ, ನೈವೇದ್ಯ ನೆರವೇರಿಸಿದ ನಂತರ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು.

ಭಕ್ತರು ದೇವಾಲಯದ ಹೊರಭಾಗದಲ್ಲಿ ಧೂಪ, ದೀಪದ ಸೇವೆ, ಉರುಳು ಸೇವೆ, ತುಲಾಭಾರ, ಹರಕೆ ಮುಡಿ ಸೇವೆ ಸಲ್ಲಿಸಿದರು. ಚಿಕ್ಕರಥದಲ್ಲಿ ಸ್ವಾಮಿಯ ಉತ್ಸಮಮೂರ್ತಿಯನ್ನು ಇರಿಸಿ, ದೇವಾಲಯ ಪ್ರಾಂಗಣದ ಸುತ್ತ ಎಳೆಯಲಾಯಿತು.

ಲಾಠಿ ಪ್ರಹಾರ: ಬೆಳಗ್ಗಿನಿಂದ ದರ್ಶನಕ್ಕಾಗಿ ಕಾದಿದ್ದ ಭಕ್ತರು ಸಿಟ್ಟಿಗೆದ್ದು ಬ್ಯಾರಿಕೇಡ್‌ಗಳನ್ನು ದಾಟಲು ಯತ್ನಿಸಿದರು. ನೂಕುನುಗ್ಗಲು ಹೆಚ್ಚಾಗಿದ್ದರಿಂದ ಕಾಲ್ತುಳಿತ ಉಂಟಾಗುವ ಅಪಾಯ ಅರಿತ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ ಭಕ್ತರನ್ನು ನಿಯಂತ್ರಿಸಿದರು. ಈ ವೇಳೆ ಭಕ್ತರಿಗೆ ಸಣ್ಣಪುಟ್ಟ ಗಾಯಗಳಾದವು.

ವಿಶೇಷ ದರ್ಶನದ ₹ 100 ಹಾಗೂ ₹ 30 ಟಿಕೆಟ್‌ ಪಡೆಯಲು ಮುಗಿಬಿದ್ದರು. ಹೆಚ್ಚಿನ ಜನಸಂದಣಿಯಿಂದಾಗಿ ಕೌಂಟರ್‌ಗಳಲ್ಲಿ ಟಿಕೆಟ್‌ ವಿತರಿಸಲು ಸಿಬ್ಬಂದಿ ಪರದಾಡಿದರು.

ವಿವಿಧ ಸಂಘ-ಸಂಸ್ಥೆಗಳ ಸ್ವಯಂಸೇವಕರು ಭಕ್ತರಿಗೆ ಕುಡಿಯುವ ನೀರು ಹಾಗೂ ಪ್ರಸಾದ ವಿತರಣೆ ಮಾಡಿದರು. ದೇವಾಲಯದ ದಾಸೋಹ ಭವನದಲ್ಲಿ ಭಕ್ತರಿಗೆ ಶನಿವಾರ ರಾತ್ರಿಯಿಂದಲೇ ಭೋಜನದ ವ್ಯವಸ್ಥೆ ಕಲ್ಪಿಸಲಾಗಿತ್ತು. ದಾಸೋಹ ಭವನದಲ್ಲಿ ಪ್ರಸಾದ ಸ್ವೀಕರಿಸಲು ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದರು. ಭಕ್ತರಿಗೆ ಚಿತ್ರಾನ್ನ, ಪಾಯಸ, ಪಲ್ಯ, ಅನ್ನ, ಸಂಬಾರ್, ಮೊಸರನ್ನ ಬಡಿಸಲಾಯಿತು.

ದೇವಸ್ಥಾನದ ಇಒ ಶಿವಕುಮಾರಯ್ಯ, ಅರ್ಚಕರಾದ ಶ್ರೀಕಂಠ ಜೋಯಿಸ್, ಒಳಗುಡಿ ಶಿವಣ್ಣ, ದೇವಾಲಯದ ವ್ಯವಸ್ಥಾಪನ ಮಂಡಳಿ ಸದಸ್ಯರಾದ ಇಂಧನ್ ಬಾಬು, ಶ್ರೀಧರ್, ಗಿರೀಶ್, ಶಶಿರೇಖಾ, ಮಂಜುಳಾ, ಪುಟ್ಟರಂಗಶೆಟ್ಟಿ ಉಪಸ್ಥಿತರಿದ್ದು, ಭಕ್ತರಿಗೆ ನೆರವಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT