ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಕಂಠೇಶ್ವರ ದರ್ಶನಕ್ಕೆ ಹರಿದುಬಂದ ಭಕ್ತಸಾಗರ

ಕಾರ್ತೀಕ ಮಾಸದ ಹುಣ್ಣಿಮೆ; ಕಪಿಲಾ ನದಿಯಲ್ಲಿ ಪುಣ್ಯಸ್ನಾನ ಮಾಡಿದ ಭಕ್ತರು
Last Updated 12 ನವೆಂಬರ್ 2019, 16:41 IST
ಅಕ್ಷರ ಗಾತ್ರ

ನಂಜನಗೂಡು: ಇಲ್ಲಿನ ಪುರಾಣ ಪ್ರಸಿದ್ಧ ಶ್ರೀಕಂಠೇಶ್ವರ ಸ್ವಾಮಿಯ ದೇವಾಲಯದಲ್ಲಿ ಮಂಗಳವಾರ ಕಾರ್ತೀಕ ಹುಣ್ಣಿಮೆ ಪ್ರಯುಕ್ತ ದೇವರ ದರ್ಶನ ಪಡೆಯಲು ರಾಜ್ಯದ ವಿವಿಧ ಭಾಗಗಳಿಂದ ಜನ ಸಾಗರ ಹರಿದು ಬಂದಿತ್ತು.

ದೂರದ ಊರುಗಳಿಂದ ಭಕ್ತರು ಸೋಮವಾರ ರಾತ್ರಿಯೇ ಬಂದು ದೇವಾಲಯದ ಕೈಸಾಲೆ ಹಾಗೂ ಆವರಣದಲ್ಲಿ ತಂಗಿದ್ದರು. ಮಂಗಳವಾರ ಬೆಳಿಗ್ಗೆ 4.30ರಿಂದಲೇ ಕಪಿಲಾ ನದಿಯಲ್ಲಿ ಪುಣ್ಯಸ್ನಾನ ಮಾಡಿ ದೇವಾಲಯದ ಮುಂದೆ ಸರತಿ ಸಾಲಿನಲ್ಲಿ ನಿಂತರು. ದೇವಾಲಯದ ಆಗಮಿಕರಾದ ನಾಗಚಂದ್ರ ದೀಕ್ಷಿತ್ ನೇತೃತ್ವದಲ್ಲಿ ಸ್ವಾಮಿಗೆ ವಿಶೇಷ ಪೂಜೆ, ಮಹಾಮಂಗಳಾರತಿ ಸೇವೆಯ ನಂತರ ಭಕ್ತರ ದರ್ಶನಕ್ಕೆ ಅನುವು ಮಾಡಲಾಯಿತು.

ದೇವಾಲಯದ ಮುಂಭಾಗ ಭಕ್ತರು ಉರುಳು ಸೇವೆ, ಧೂಪ, ದೀಪದ ಸೇವೆ, ತುಲಾಭಾರ ಸೇವೆಗಳಲ್ಲಿ ನಿರತರಾಗಿದ್ದರು, ಹರಕೆ ಮುಡಿ ಸಲ್ಲಿಸಲು ಮುಡಿಕಟ್ಟೆಯಲ್ಲಿ ಭಕ್ತರ ಸಂದಣಿ ಏರ್ಪಟ್ಟಿತ್ತು. ಕಾರ್ತೀಕ ಮಾಸದ ಹುಣ್ಣಿಮೆ ಪ್ರಯುಕ್ತ ಪಾರ್ವತಿ ಸಮೇತ ಶ್ರೀಕಂಠೇಶ್ವರ ಸ್ವಾಮಿಯ ಮೂರ್ತಿಗಳನ್ನು ಚಿಕ್ಕ ತೇರಿನಲ್ಲಿ ಪ್ರತಿಷ್ಠಾಪಿಸಿ ದೇವಾಲಯದ ಸುತ್ತ ಎಳೆಯಲಾಯಿತು.

ಬಹಳಷ್ಟು ಭಕ್ತರು ₹100 ಹಾಗೂ ₹30 ಟಿಕೆಟ್ ಪಡೆದು ವಿಶೇಷ ದರ್ಶನ ಪಡೆದರು. ಪ್ರಸಾದದ ಕೌಂಟರ್‌ನಲ್ಲೂ ಭಕ್ತರ ಸಂಖ್ಯೆ ಹೆಚ್ಚಿತ್ತು.

ದಾಸೋಹ ಭವನದಲ್ಲಿ ಸೋಮವಾರ ರಾತ್ರಿ ಹಾಗೂ ಮಂಗಳವಾರ ಭಕ್ತರಿಗೆ ಅನ್ನ ದಾಸೋಹದ ವ್ಯವಸ್ಥೆ ಮಾಡಲಾಗಿತ್ತು. ತಿ.ನರಸೀಪುರದ ಅಕ್ಕಿ ಗಿರಣಿ ಮಾಲೀಕರಾದ ಸತೀಶ್ ಮತ್ತು ಮಧು ಅವರು ಕಾರ್ತೀಕ ಮಾಸದ ಪ್ರಯುಕ್ತ 10 ಸಾವಿರ ಭಕ್ತರಿಗೆ ಲಾಡು, ಕೋಸಂಬರಿ, ರೈಸ್‌ಭಾತ್, ಪಾಯಸ ಮಾಡಿಸಿದ್ದರು ಎಂದು ದೇವಾಲಯದ ಎಇಒ ಗಂಗಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ನಗರದ ರೈಲು ನಿಲ್ದಾಣ ಹಾಗೂ ಬಸ್ ನಿಲ್ದಾಣಗಳಲ್ಲಿ ಹೆಚ್ಚಿನ ಜನ ಸಂದಣಿ ಕಂಡುಬಂತು.ಸಿ.ಪಿ.ಐ. ರಾಜಶೇಖರ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT