ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸೋದ್ಯಮ ಕೇಂದ್ರವಾಗಲಿದೆ ನಂಜನಗೂಡು

ಬಿಎಸ್‌ವೈ ಬೆಂಬಲದಿಂದ ಪ್ರಸಾದ್‌ ಗೆಲುವು ಸಾಧ್ಯವಾಗಿದೆ: ಶಾಸಕ ಬಿ.ಹರ್ಷವರ್ಧನ್‌
Last Updated 25 ಮೇ 2019, 19:58 IST
ಅಕ್ಷರ ಗಾತ್ರ

ನಂಜನಗೂಡು: ನಗರವನ್ನು ಮುಂದಿನ ದಿನಗಳಲ್ಲಿ ಮೈಸೂರಿನ ಸ್ಯಾಟಲೈಟ್‌ ಟೌನ್ ಹಾಗೂ ಪ್ರವಾಸೋದ್ಯಮದ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕ ಬಿ.ಹರ್ಷವರ್ಧನ್ ತಿಳಿಸಿದರು.

ನಗರಸಭೆ ಚುನಾವಣೆ ಹಿನ್ನಲೆಯಲ್ಲಿ ನಗರದ ಬಿಜೆಪಿ ಕಚೇರಿಯಲ್ಲಿ ಶನಿವಾರ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ನಗರದಲ್ಲಿ ಕಳೆದ 15 ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಒಳಚರಂಡಿ ಯೋಜನೆಯನ್ನು ಸಾಕಾರಗೊಳಿಸಲು ಹೆಚ್ಚುವರಿಯಾಗಿ ₹138 ಕೋಟಿ ಹಣ ಬಿಡುಗಡೆಯಾಗಿದೆ. ಶೀಘ್ರದಲ್ಲೇ ಅಭಿವೃದ್ಧಿ ಕಾರ್ಯಕ್ರಮಗಳು ಕಾರ್ಯರೂಪಕ್ಕೆ ಬರಲಿವೆ ಎಂದರು.

ಮುಂದಿನ ದಿನಗಳಲ್ಲಿ ಸಮ್ಮಿಶ್ರ ಸರ್ಕಾರ ಪತನಗೊಳ್ಳಲಿದೆ. ಮತ್ತೆ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ. ಆದ್ದರಿಂದ ನಗರಾಭಿವೃದ್ಧಿಯ ಸ್ಪಷ್ಟ ಕಲ್ಪನೆ ಹೊಂದಿರುವ ಬಿಜೆಪಿ ಅಭ್ಯರ್ಥಿಗೆ ಮತ ನೀಡಬೇಕು ಮನವಿ ಮಾಡಿದರು.

ಕೆಲವರ ರಾಜಕೀಯ ಕುತಂತ್ರದಿಂದ ಬೇಸರಗೊಂಡಿದ್ದ ವಿ.ಶ್ರೀನಿವಾಸಪ್ರಸಾದ್ ಅವರಿಗೆ ಜನತೆ ಮತ ನೀಡುವ ಮೂಲಕ ಸಂಸದರನ್ನಾಗಿಸಿದ್ದಾರೆ. ಅವರಿಗೆ ನಾನು ಚಿರಋಣಿಯಾಗಿರುತ್ತೇನೆ ಎಂದರು.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಲೋಕಸಭಾ ಕ್ಷೇತ್ರದಲ್ಲಿನ 8 ಕ್ಷೇತ್ರಗಳಲ್ಲಿ ಬಿಜೆಪಿ ಗಿಂತ 3.60 ಲಕ್ಷ ಹೆಚ್ಚುವರಿ ಮತಗಳನ್ನು ಪಡೆದಿತ್ತು. ಆದರೆ ಪಕ್ಷದ ವರಿಷ್ಠರ ಒತ್ತಡಕ್ಕೆ ಮಣಿದು ಮತ್ತೆ ಸ್ಪರ್ಧೆ ಮಾಡಿದ ಪ್ರಸಾದ್ ಅವರಿಗೆ ಪಕ್ಷಾತೀತವಾಗಿ ಬೆಂಬಲಿಸಿರುವುದು ನನ್ನಲ್ಲಿ ಅಚ್ಚರಿ ಮೂಡಿಸಿತು. ಯಡಿಯೂರಪ್ಪ ಅವರ ಬೆಂಬಲದಿಂದ ಈ ಗೆಲುವು ಸಾಧ್ಯವಾಗಿದೆ ಎಂದರು.

‘ಮಾಜಿ ಸಂಸದ ಆರ್.ಧ್ರುವನಾರಾಯಣ ಅವರ ಮೇಲೆ ನನಗೆ ವಯಕ್ತಿಕ ದ್ವೇಷವಿಲ್ಲ. ಕೆಲವು ಸಭೆಗಳಲ್ಲಿ ನಾನು ಅವರ ಎದುರಿನಲ್ಲೇ ಟೀಕೆ ಮಾಡಿದರೂ, ಅವರು ನನ್ನ ವಿರುದ್ಧ ಮಾತನಾಡಲಿಲ್ಲ. ಇದು ಅವರ ಸಜ್ಜನಿಕೆಯನ್ನು ತೋರಿಸುತ್ತದೆ. ಅವರು ತಮ್ಮ ರಾಜಕೀಯ ಜೀವನದಲ್ಲಿ ಒಂದು ಕಪ್ಪುಚುಕ್ಕೆಯಿಲ್ಲದಂತೆ ಕೆಲಸಮಾಡಿದ್ದಾರೆ’ ಎಂದು ಶ್ಲಾಘಿಸಿದರು.

ಆದರೆ, ‘ನಮ್ಮನ್ನು ರಾಜಕೀಯವಾಗಿ ಬೆಳೆಸಿದ ಗುರು ಪ್ರಸಾದ್‌ ಅವರನ್ನು ರಾಜ್ಯ ಸಚಿವ ಸಂಪುಟದಿಂದ ಕೈಬಿಟ್ಟಾಗ ನಡೆದುಕೊಂಡ ರೀತಿ ಹಾಗೂ ನಂತರ ನಡೆದ ಉಪ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರ ಕುಮ್ಮಕ್ಕಿನಿಂದ ಹಣದ ಹೊಳೆ ಹರಿಸಿ ಸೋಲುವಂತೆ ಮಾಡಿದ್ದರು. ಈ ಗುರು ಶಾಪದಿಂದ ಈ ಬಾರಿ ಪರಾಜಯಗೊಂಡಿದ್ದಾರೆ’ ಎಂದು ಟೀಕಿಸಿದರು.

ಸಭೆಯಲ್ಲಿ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಕೆಂಡಗಣ್ಣಪ್ಪ, ನಗರ ಘಟಕದ ಅಧ್ಯಕ್ಷ ಬಾಲಚಂದ್ರ, ಮುಖಂಡರಾದ ಎನ್.ಆರ್.ಕೃಷ್ಣಪ್ಪಗೌಡ, ವಿನಯ್ ಕುಮಾರ್, ರಂಗಸ್ವಾಮಿ, ಎ.ಚಂದ್ರಶೇಖರ್, ಸಂಜಯ್ ಶರ್ಮ, ರಜಾಕ್ ಅಹಮ್ಮದ್, ಸುಧಾ ಮಹೇಶ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT