ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಡ್ಕರ್ ಭವನವೇನು ಶ್ರೀಕಂಠೇಗೌಡ ಅವರ ಮನೆಯೇ– ನಾರಾಯಣಗೌಡ ಪ್ರಶ್ನೆ

Last Updated 26 ಏಪ್ರಿಲ್ 2020, 16:40 IST
ಅಕ್ಷರ ಗಾತ್ರ

ಮೈಸೂರು: ‘ಕೋವಿಡ್’ ಪರೀಕ್ಷೆಗೆ ತಡೆಯೊಡ್ಡಲು ಅಂಬೇಡ್ಕರ್ ಭವನವೇನು ವಿಧಾನಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅವರ ಮನೆಯೇ’‌ ಎಂದು ಸಚಿವ ನಾರಾಯಣಗೌಡ ಪ್ರಶ್ನಿಸಿದರು.

ಅವರು ಭಾನುವಾರ ಇಲ್ಲಿನ ಆಸ್ಪತ್ರೆಗೆ ಭೇಟಿ ನೀಡಿ ಆತ್ಮಹತ್ಯೆಗೆ ಯತ್ನಿಸಿದ ಆಶಾ ಕಾರ್ಯಕರ್ತೆಯ ಆರೋಗ್ಯ ವಿಚಾರಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಶ್ರೀಕಂಠೇಗೌಡರ ಮನೆಯಲ್ಲಿ ತಪಾಸಣಾ ಕಾರ್ಯ ನಡೆಯುತ್ತಿರಲಿಲ್ಲ ಅಥವಾ ಅಂಬೇಡ್ಕರ್ ಭವನವೇನೂ ಅವರ ಮನೆಯಲ್ಲ. ಸರ್ಕಾರಿ ಭವನದಲ್ಲಿ ನಡೆಯುತ್ತಿದ್ದ ಪರೀಕ್ಷಾ ಕಾರ್ಯಕ್ಕೆ ತಡೆಯೊಡ್ಡಿದ ಪುತ್ರನಿಗೆ ಬುದ್ದಿವಾದ ಹೇಳಬೇಕಿತ್ತು. ಅದನ್ನು ಬಿಟ್ಟು ಅವರಿಗೆ ಬೆಂಬಲ ನೀಡಿದ್ದಕ್ಕೆ ಇಡೀ ರಾಜ್ಯವೇ ಅವರಿಗೆ ಛೀಮಾರಿ ಹಾಕುತ್ತಿದೆ ಎಂದು ಭಾನುವಾರ ಇಲ್ಲಿ ಹರಿಹಾಯ್ದರು.

ಶ್ರೀಕಂಠೇಗೌಡ ಅವರದ್ದು ಪ್ರಚಾರಪ್ರಿಯತೆ. ಮಾಧ್ಯಮದವರು ಅವರನ್ನು ನಿರ್ಲಕ್ಷಿಸಿದ್ದರು. ಮಾಧ್ಯಮದಲ್ಲಿ ಮಿಂಚಬೇಕು ಎಂದು ಈ ಕೆಲಸ ಮಾಡಿದ್ದಾರೆ. ಈಗ ಅವರಿಗೆ ರಾಜ್ಯಮಟ್ಟದ ಪ್ರಚಾರ ಸಿಕ್ಕಿದೆ ಎಂದು ವ್ಯಂಗ್ಯವಾಡಿದರು.

ಶ್ರೀರಂಗಪಟ್ಟಣದ ಆಶಾ ಕಾರ್ಯಕರ್ತೆಯೊಬ್ಬರ ಆತ್ಮಹತ್ಯೆ ಯತ್ನ ಪ್ರಕರಣವು ಜೆಡಿಎಸ್ ಮತ್ತು ಕಾಂಗ್ರೆಸ್ ರಾಜಕಾರಣದಿಂದಲೇ ನಡೆದಿದೆ ಎಂದು ಆರೋಪಿಸಿದರು.

‘ಕಾರ್ಯಕರ್ತೆಯನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಆದರೆ, ಊರಿನಲ್ಲಿ ಮತ್ತೆ ಹಲ್ಲೆ ನಡೆಯಬಹುದು ಎಂಬ ಭಯ ಅವರಿಗೆ ಇರುವುದರಿಂದ ಅವರು ಆಸ್ಪತ್ರೆಯಲ್ಲೇ ಇದ್ದಾರೆ. ನಾನು ಅವರಿಗೆ ಪೊಲೀಸ್ ರಕ್ಷಣೆ ಕೊಡಿಸುತ್ತೇನೆ’ ಎಂದು ಭರವಸೆ ನೀಡಿದರು.

ಜಿಲ್ಲಾಧಿಕಾರಿ ಬಂದು ಹೋಗಿದ್ದಾರೆ. ತಹಶೀಲ್ದಾರ್ ನಿಯಮಿತವಾಗಿ ಬಂದು ಯೋಗಕ್ಷೇಮ ವಿಚಾರಿಸುತ್ತಿದ್ದಾರೆ. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ ಎಂದರು.

ಆರೋಪಿಗಳಿಗೆ ಜಾಮೀನು ನೀಡಲಾಗಿದೆ ಎಂದು ಆಶಾ ಕಾರ್ಯಕರ್ತೆ ಹೇಳುತ್ತಿದ್ದಾರೆ. ಇದಕ್ಕಿಂತಲೂ ದೊಡ್ಡ ಕೃತ್ಯ ಎಸಗಿದ ಶ್ರೀಕಂಠೇಗೌಡ ಅವರಿಗೆ ಜಾಮೀನು ಸಿಕ್ಕಿದೆ. ಇದೇ ರೀತಿ ಆರೋಪಿಗಳಿಗೂ ಜಾಮೀನು ನೀಡಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT