ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನ ರಾಜಕಾರಣ ಜಾದು, ಮೋದಿ ಜಾದುಗಾರ: ದೇವನೂರ ಮಹಾದೇವ ವ್ಯಂಗ್ಯ

Last Updated 15 ಫೆಬ್ರುವರಿ 2019, 9:19 IST
ಅಕ್ಷರ ಗಾತ್ರ

ಮೈಸೂರು: ಇಂದಿನ ರಾಜಕಾರಣ ಜಾದು, ಕಣ್ಕಟ್ಟು ವಿದ್ಯೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಜಾದುಗಾರ ಎನಿಸುತ್ತಿದೆ ಎಂದು ಸಾಹಿತಿ ದೇವನೂರ ಮಹಾದೇವ ಇಲ್ಲಿ ವ್ಯಂಗ್ಯವಾಡಿದರು.

ಆಲ್‌ ಇಂಡಿಯಾ ಡೆಮಾಕ್ರಟಿಕ್‌ ಯೂತ್‌ ಆರ್ಗನೈಜೇಷನ್‌ (ಎಐಡಿವೈಒ) ವತಿಯಿಂದ ನಿರುದ್ಯೋಗದ ವಿರುದ್ಧ ಸಂಸತ್‌ ಚಲೋ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ‘ರಾಜ್ಯಮಟ್ಟದ ಯುವಜನ ಸಮಾವೇಶ’ದಲ್ಲಿ ಅವರು ಮಾತನಾಡಿದರು.

ಜಾದುಗೆ ಸಮ್ಮೋಹನ ಎನ್ನುತ್ತಾರೆ. ಇರೋದನ್ನು ಇಲ್ಲದಂತೆ, ಇಲ್ಲದಿರುವುದನ್ನು ಇದ್ದಂತೆ ಸೃಷ್ಟಿ ಮಾಡಬಹುದು. ಕೆಲ ಜಾದುಗಾರರು ವಿಮಾನವನ್ನೂ ಮಾಯ ಮಾಡುತ್ತಾರಂತೆ. ಖಾಲಿ ಪಾತ್ರೆಗೆ ಕೈಯಾಡಿಸಿ ಮೃಷ್ಟಾನ್ನವನ್ನು ಸೃಷ್ಟಿ ಮಾಡುತ್ತಾರಂತೆ. ಇದನ್ನು ನೋಡಿ ಜನ ಮರುಳಾಗುತ್ತಾರೆ. ಅವರಿಗೆ ಮಾನಸಿಕ ಸಂತೃಪ್ತಿ ಸಿಗುತ್ತದೆಯಾದರೂ ವಾಸ್ತವದಲ್ಲಿ ನರಕವಾಗುತ್ತದೆ. ಜಾದು ವಂಚನೆಯಲ್ಲ; ಕಣ್ಕಟ್ಟು ವಿದ್ಯೆ. ಆದರೆ, ರಾಜಕಾರಣವು ಜಾದುವಾದರೆ ಮಹಾಕ್ರೂರ, ವಂಚನೆಯಾಗುತ್ತದೆ. ಅಚ್ಛೇ ದಿನ್ ಎಂದು ಜಪ ಮಾಡುತ್ತಾ ದಿನವೂ ಸಾಯಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ವಿಧಾನ ಪರಿಷತ್‌ ಮಾಜಿ ಸದಸ್ಯ ಡಿ.ಎಸ್‌.ವೀರಯ್ಯ ಸಂಪಾದಕರಾಗಿರುವ ಪತ್ರಿಕೆಯಲ್ಲಿ ಮೋದಿ ಅವರನ್ನು ಜಾದುಗಾರ ಎಂದು ಅಭಿಮಾನದಿಂದ ಕರೆದಿದ್ದಾರೆ. ಜಾದುವಿಗೆ ಕನ್ನಡದಲ್ಲಿ ಮೋಡಿ ವಿದ್ಯೆ ಎನ್ನುತ್ತಾರೆ. ವೀರಯ್ಯ ಅವರು ಮೋದಿ ಅವರನ್ನು ಜಾದುಗಾರ ಎಂದು ಕರೆದದ್ದು ನನಗೂ ಏಕೋ ನಿಜ ಅನಿಸಲು ಶುರುವಾಯಿತು. ವಿದೇಶದಲ್ಲಿ ಇರುವ ಕಪ್ಪುಹಣ ತಂದು ದೇಶದಲ್ಲಿರುವ ಎಲ್ಲರ ಖಾತೆಗಳಿಗೆ ₹15 ಲಕ್ಷ ಹಾಕುವುದಾಗಿ ಮೋದಿ ಹೇಳಿದ್ದರು. ನಮ್ಮ ಖಾತೆಗೆ ಹಾಕುವ ₹15 ಲಕ್ಷವನ್ನು ಯಾವ ರೀತಿ ಖರ್ಚು ಮಾಡಬೇಕು, ಏನು ಮಾಡಬೇಕು ಎಂದು ಖಾತೆದಾರರು ಲೆಕ್ಕಾಚಾರ ಹಾಕುತ್ತಿದ್ದಾರೆ. ಎಷ್ಟೋ ಕನಸುಗಳನ್ನು ಕಟ್ಟಿಕೊಂಡಿದ್ದಾರೆ. ಇದಕ್ಕೆ ಸ್ವಪ್ನಸುಖ ಎನ್ನಬಹುದು. ಆದರೆ, ಖಾತೆಗಳಿಗೆ 1 ಪೈಸೆ ಬೀಳಲಿಲ್ಲ. ಇದು ಜಾದುವಲ್ಲವೇ ಎಂದು ಪ್ರಶ್ನಿಸಿದರು.

ವರ್ಷಕ್ಕೆ 1 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಮೋದಿ ಕಣ್ಕಟ್ಟು ಮಾಡಿದ್ದರು. ಆದರೆ, ಈವರೆಗೂ ಕಾಪಾಡಿಕೊಂಡು ಬಂದ ಉದ್ಯೋಗಗಳು ಕಡಿತವಾಗಿವೆ. ಯಥಾಸ್ಥಿತಿಯನ್ನು ಕಾಪಾಡುವ ಸಾಮರ್ಥ್ಯವೂ ಮೋದಿಗೆ ಇಲ್ಲ. ಆದರೆ, ಈ ರೀತಿ ಆಯ್ತಲ್ಲಾ ಎಂಬ ವಿಷಾದ, ನೋವು ಅವರಲ್ಲಿ ಕಾಣುತ್ತಿಲ್ಲ. ಈಗ, ಉದ್ಯೋಗದ ಅಂಕಿ–ಅಂಶಗಳನ್ನು ತಿರುಚುತ್ತಾ ಕೂತಿದ್ದಾರೆ. ಇತ್ತೀಚೆಗೆ ಮಂಡಿಸಿದ ಬಜೆಟ್‌ನಲ್ಲಿ ಮತ್ತೆ ಅದೇ ಕಾಮನಬಿಲ್ಲಿನ ಕಣ್ಕಟ್ಟನ್ನು ಜನರ ಮುಂದಿಟ್ಟಿದ್ದಾರೆ. ಇದು ಮರಳುಗಾಡಿನ ಮರೀಚಿಕೆಯಾಗಿದೆ ಎಂದು ವಿಶ್ಲೇಷಿಸಿದರು.

ಎಐಡಿವೈಒ ರಾಷ್ಟ್ರೀಯ ಅಧ್ಯಕ್ಷ ರಾಮಾಂಜನಪ್ಪ ಆಲ್ದಳ್ಳಿ ಮಾತನಾಡಿ, ‘ದೇಶದಲ್ಲಿ 70 ಕೋಟಿ ಯುವ ಜನರಿದ್ದು, ಅವರಿಗೆ ಉದ್ಯೋಗ ನೀಡಲು ಕೇಂದ್ರ ಸರ್ಕಾರ ವಿಫಲವಾಗಿದೆ. ಈ ನಿರುದ್ಯೋಗ ಸಮಸ್ಯೆಗಳಿಗೆ ರಾಜಕೀಯ ಹಾಗೂ ಆರ್ಥಿಕ ನೀತಿಗಳೇ ಕಾರಣ’ ಎಂದು ದೂರಿದರು.

ದಿನವೂ ವಚನಪಾಲಕ ರಾಮನ ಹತ್ಯೆ:
ಭಾರತದ ಮಹಾಕಾವ್ಯ ರಾಮಾಯಣದಲ್ಲಿ ವಚನಪಾಲಕ ರಾಮ ಇದ್ದಾನೆ. ಆದರೆ, ರಾಮನನ್ನು ದಿನನಿತ್ಯ ಕೊಲ್ಲುತ್ತಿದ್ದಾರೆ. ಆತನನ್ನು ವಚನ ಭ್ರಷ್ಟರನ್ನಾಗಿ ಮಾಡುತ್ತಿದ್ದಾರೆ. ಇನ್ನೆರಡು ತಿಂಗಳಲ್ಲಿ ಲೋಕಸಭಾ ಚುನಾವಣೆ ಬರುತ್ತದೆ. ಭಾರತದ ಭವಿಷ್ಯವನ್ನು ನಿರ್ಧಾರ ಮಾಡುವ ಹೊಣೆ ಯುವ ಸಮುದಾಯದ ಮೇಲಿದೆ. ಮಾತಿನಲ್ಲೇ ಮನೆಕಟ್ಟುವ ರಾಜಕಾರಣದ ಮುಖಕ್ಕೆ ವಾಸ್ತವವನ್ನು ಮುಖಾಮುಖಿಯಾಗಿಸುವ ಹೊಣೆಗಾರಿಕೆ ಯುವ ಪೀಳಿಗೆ ಮುಂದಿದೆ. ಜಾತಿ, ಮತ, ಭಾಷೆಯ ಭಾವನಾತ್ಮಕ ವಿಷಯಗಳಿಗೆ ಬಲಿ ಆಗಬಾರದು. ರಾಜಕಾರಣ ಎಷ್ಟೇ ಜಾದು, ಮರುಳು ಮಾಡಿದರೂ ಅದಕ್ಕೆ ಬಲಿ ಆಗಬಾರದು ಎಂದು ದೇವನೂರ ಮಹಾದೇವ ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT