ಜೆಡಿಎಸ್ ಮೇಲಿನ ಸಂಶಯದಿಂದಲೇ ರಾಹುಲ್‌ ಕೇರಳದಿಂದ ಸ್ಪರ್ಧೆ: ನರೇಂದ್ರ ಮೋದಿ

ಶನಿವಾರ, ಏಪ್ರಿಲ್ 20, 2019
29 °C

ಜೆಡಿಎಸ್ ಮೇಲಿನ ಸಂಶಯದಿಂದಲೇ ರಾಹುಲ್‌ ಕೇರಳದಿಂದ ಸ್ಪರ್ಧೆ: ನರೇಂದ್ರ ಮೋದಿ

Published:
Updated:

ಮೈಸೂರು: ‘ಬಿಜೆಪಿ ಪ್ರಣಾಳಿಕೆ ಮತ್ತು ಕಾಂಗ್ರೆಸ್‌ನ ಡಕೋಟ ಪ್ರಣಾಳಿಕೆ ಎರಡನ್ನು ತುಲನೆ ಮಾಡಿ ನೋಡಿ. ಎಲ್ಲೇ ಹೋದರು ಅವರದ್ದು ಒಂದೇ ಮಾತು ಮೋದಿ ಹಠಾವ್. ನಿಮ್ಮ ಪ್ರೀತಿ ಅವರನ್ನು ನಿದ್ದೆ ಮಾಡಲು ಬಿಡುತ್ತಿಲ್ಲ’ ಎಂದು ಪ್ರಧಾನಿ ನರೇಂದ್ರ ಮೋದಿ ಟೀಕಿಸಿದರು.

ಮಂಗಳವಾರ ಇಲ್ಲಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ರ್‍ಯಾಲಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ಕನ್ನಡದಲ್ಲಿ ಭಾಷಣ ಆರಂಭಿಸಿದ ಮೋದಿ, ‘ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನದ ಜನತೆಗೆ ಚೌಕಿದಾರ್‌ ನರೇಂದ್ರ ಮೋದಿಯ ನಮಸ್ಕಾರಗಳು’ ಎಂದರು.

‘ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ನಿಮಗೆ 2ಜಿ ಹಗರಣವನ್ನು ನೀಡಿತು. ನೆನಪಿದೆ ಅಲ್ವಾ 2ಜಿ ಹಗರಣ.. ಅದೇ ನಮ್ಮ ಸರ್ಕಾರ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ ಹಾಗೂ ಡಾಟಾ ನೀಡಿದ್ದೇವೆ’ ಎಂದು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

‘ಕಾಂಗ್ರೆಸ್‌ ನಾಯಕರು ಕರ್ನಾಟಕದ ಮುಖ್ಯಮಂತ್ರಿಯನ್ನು ಪಂಚಿಂಗ್‌ ಬ್ಯಾಗ್‌ ರೀತಿ ಬಳಸುತ್ತಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್‌–ಜೆಡಿಎಸ್‌ ಸಮ್ಮಿಶ್ರ ಸರ್ಕಾರವೇ ಇದೆ. ಹಾಗಿದ್ದರೂ ರಾಹುಲ್‌ ಗಾಂಧಿ ಅವರು ಕೇರಳದಲ್ಲಿ ಕಣಕ್ಕಿಳಿದಿದ್ದಾರೆ. ಅವರಿಗೆ ಇಲ್ಲಿಯೂ ಗೆಲ್ಲುವ ವಿಶ್ವಾಸವಿಲ್ಲ’ ಎಂದು ವ್ಯಂಗ್ಯವಾಡಿದರು.

ಮೊದಲ ಬಾರಿಗೆ ಮತ ಹಾಕುವವರನ್ನು ಗುರಿಯಾಗಿಸಿಕೊಂಡೇ ಮಾತನಾಡಿದ ಮೋದಿ ಅವರು, ‘ನಿಮ್ಮ ಮೊದಲ ಮತ ಐತಿಹಾಸಿಕವಾಗಿರಲಿ. ಈ ಚೌಕಿದಾರನ ಬಗ್ಗೆ ನಿಮಗೆ ನಂಬಿಕೆ ಇದೆಯೇ? ನನ್ನ ಜೊತೆ ನೀವಿದ್ದೀರಲ್ಲವೇ? ನನಗೆ ಮತ ಹಾಕಿ ಇನ್ನಷ್ಟು ಬಲಗೊಳಿಸಿ’ ಎಂದರು.

ಪಕ್ಷೇತರ ಅಭ್ಯರ್ಥಿ ಸುಮಲತಾ ಗೆಲ್ಲಿಸಿ ಎಂದು ಮೋದಿ ಮನವಿ ಮಾಡಿದರು. ಜೊತೆಗೆ ಮಂಡ್ಯದ ಜನರ ಪ್ರೀತಿಯ ನಟ ಅಂಬರೀಷ್ ಸಾಧನೆ ಬಗ್ಗೆ ಗುಣಗಾನ ಮಾಡಿದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ‘ಕಾಂಗ್ರಸ್ ಜೆಡಿಎಸ್ ಒಡೆದ ಮನೆಯಂತಾಗಿದೆ. ಇದು 20 ಪರ್ಸೆಂಟ್‌ ಸರ್ಕಾರ. ದೇಶದಲ್ಲಿ ಈ ಬಾರಿ ಬಿಜೆಪಿ 300 ಕ್ಕೂ ಹೆಚ್ಚು ಸ್ಥಾನ ಬಿಜೆಪಿ ಗೆಲ್ಲುತ್ತದೆ’ ಎಂದು ಭರವಸೆ ವ್ಯಕ್ತಪಡಿಸಿದರು. 

ಈ ರ್‍ಯಾಲಿ ಮೂಲಕ ಮೈಸೂರು ಭಾಗದಲ್ಲಿ ಬಿಜೆಪಿ ತನ್ನ ಶಕ್ತಿ ಪ್ರದರ್ಶನ ನಡೆಸಿತು. ಮೈಸೂರು–ಕೊಡಗು ಕ್ಷೇತ್ರದ ಅಭ್ಯರ್ಥಿ ಪ್ರತಾಪ ಸಿಂಹ ಮತ್ತು ಚಾಮರಾಜನಗರ ಕ್ಷೇತ್ರದ ಅಭ್ಯರ್ಥಿ ವಿ.ಶ್ರೀನಿವಾಸಪ್ರಸಾದ್‌ ಪರ ಮೋದಿ ಮತಯಾಚಿಸಿದರು. ರ್‍ಯಾಲಿಯಲ್ಲಿ ಪ್ರಧಾನಿ ಮೋದಿ ಅವರ ಭಾವಚಿತ್ರವಿರುವ ಪೇಂಟಿಂಗ್‌ ಅನ್ನು ಉಡುಗೊರೆ ನೀಡಲಾಯಿತು.

ಮೋದಿ ಅವರು ಪ್ರಧಾನಿಯಾದ ಬಳಿಕ ಮೈಸೂರಿಗೆ ಭೇಟಿ ನೀಡಿರುವುದು ಇದು ಮೂರನೇ ಬಾರಿ. 2016ರ ಜನವರಿಯಲ್ಲಿ ಮೈಸೂರು ವಿಶ್ವವಿದ್ಯಾಲಯದ ಆಶ್ರಯದಲ್ಲಿ ನಡೆದಿದ್ದ ಭಾರತೀಯ ವಿಜ್ಞಾನ ಕಾಂಗ್ರೆಸ್‌ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ವಿಧಾನಸಭೆ ಚುನಾವಣೆಗೂ ಮುನ್ನ 2018ರ ಫೆಬ್ರುವರಿಯಲ್ಲಿ ಪಕ್ಷದ ಸಮಾವೇಶದಲ್ಲಿ ಭಾಗವಹಿಸಿದ್ದರು.

ಬಿ.ಎಸ್.‌ ಯಡಿಯೂರಪ್ಪ, ಎಸ್.ಎಂ ಕೃಷ್ಣ, ಅರವಿಂದ ಲಿಂಬಾವಳಿ ಒಳಗೊಂಡಂತೆ ಪಕ್ಷದ ಪ್ರಮುಖ ನಾಯಕರು ಸಮಾವೇಶದಲ್ಲಿ ಇದ್ದರು.

ಬರಹ ಇಷ್ಟವಾಯಿತೆ?

 • 10

  Happy
 • 1

  Amused
 • 1

  Sad
 • 0

  Frustrated
 • 11

  Angry

Comments:

0 comments

Write the first review for this !