ಪೌರತ್ವದಿಂದ ಕೈಬಿಟ್ಟಿರುವುದಕ್ಕೆ ಖಂಡನೆ

7

ಪೌರತ್ವದಿಂದ ಕೈಬಿಟ್ಟಿರುವುದಕ್ಕೆ ಖಂಡನೆ

Published:
Updated:
Deccan Herald

ಮೈಸೂರು: ಅಸ್ಸಾಮಿನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿ (ಎಸ್ಆರ್‌ಸಿ) ಯಲ್ಲಿ 40 ಲಕ್ಷ ಮತದಾರರ ಹೆಸರುಗಳನ್ನು ಕೈಬಿಟ್ಟಿರುವುದು ವಿರೋಧಿಸಿ ಎಡ ಮತ್ತು ಪ್ರಜಾಸತ್ತಾತ್ಮಕ ಪಕ್ಷಗಳ ವತಿಯಿಂದ ಬುಧವಾರ ಪ್ರತಿಭಟನೆ ನಡೆಯಿತು.

ಎಸ್‌ಯುಸಿಐ, ಸಿಪಿಐ, ಸಿಪಿಐಎಂ, ಸ್ವರಾಜ್‌ ಇಂಡಿಯಾ ಸೇರಿದಂತೆ ವಿವಿಧ ಸಂಘಟನೆಗಳು ನ್ಯಾಯಾಲಯ ಎದುರಿನ ಗಾಂಧಿ ಪುತ್ಥಳಿ ಮುಂದೆ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಕೇಂದ್ರ ಸರ್ಕಾರವು ಐದು ವರ್ಷಗಳಿಂದ ₹ 1,200 ಕೋಟಿ ವೆಚ್ಚದಲ್ಲಿ ಪೌರತ್ವ ನೋಂದಣಿ ಕಾರ್ಯ ನಡೆಸಿದೆ. ಈಗ ಅಂತಿಮ ಕರಡು ಪಟ್ಟಿಯಲ್ಲಿ 40 ಲಕ್ಷ ಜನರನ್ನು ಬಿಟ್ಟಿರುವುದಕ್ಕೆ ಹೇಗೆ ಸಮಜಾಯಿಷಿ ನೀಡುವುದು? ಅಸ್ಸಾಮಿನಲ್ಲಿ ಇದುವರೆಗೆ 1.29 ಕೋಟಿ ಜನರು ಇದಕ್ಕಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಆದರೆ, 40 ಲಕ್ಷ ಮಂದಿಯನ್ನು ಕೈಬಿಟ್ಟು ಇವರೆಲ್ಲ ಭಾರತೀಯರೇ ಅಲ್ಲ ಎಂದು ಸಂಭ್ರಮಿಸುತ್ತಿರುವುದು ಆತಂಕ ಮೂಡಿಸಿದೆ ಎಂದು ಸಿ‍ಪಿಐ ಜಿಲ್ಲಾ ಕಾರ್ಯದರ್ಶಿ ಎಚ್‌.ಆರ್.ಶೇಷಾದ್ರಿ ತಿಳಿಸಿದರು.

ಈ ಯೋಜನೆಗೆ ಹೆಸರು ನೋಂದಾಯಿಸಬೇಕಾದರೆ 1971ರ ಮಾರ್ಚ್‌ 25ಕ್ಕೆ ಮುನ್ನ ಭಾರತದಲ್ಲಿ ನೆಲೆಸಿರುವುದಾಗಿ ದಾಖಲೆ ಒದಗಿಸುವಂತೆ ಸರ್ಕಾರ ಕೋರಿತ್ತು. ಇದಕ್ಕೆ ಅವಕಾಶವನ್ನೇ ನೀಡದೇ ಏಕಾಏಕೀ ಪಟ್ಟಿಗೆ ಹೆಸರು ಸೇರಿಸದೇ ತೆಗೆದುಹಾಕಿರುವುದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ ಎಂದರು.

ಈವರೆಗೆ ಕೇವಲ 3.7 ಲಕ್ಷ ಮಂದಿಯನ್ನು ಮಾತ್ರ ಸಂಶಯಾಸ್ಪದ ಮತದಾರರು ಎಂದು ಗುರುತಿಸಲಾಗಿತ್ತು. ಇದೀಗ 40 ಲಕ್ಷಕ್ಕೆ ಏರಿರುವುದು ಹೇಗೆಂದು ತಿಳಿಯುತ್ತಿಲ್ಲ. ಅದೂ ಅಲ್ಲದೇ, 1947ರಲ್ಲಿ ಭಾರತ ಹಾಗೂ ಪಾಕಿಸ್ತಾನ ವಿಭಜನೆಗೊಂಡಾಗ ಅಸ್ಸಾಮಿಗಳು ಇಲ್ಲೇ ಉಳಿದುಕೊಂಡರು. 1971ರಲ್ಲಿ ಬಾಂಗ್ಲಾ ಹಾಗೂ ಪಾಕಿಸ್ತಾನ ವಿಭಜನೆಗೊಂಡಾಗ ಇವರು ಭಾರತದಲ್ಲೇ ಇದ್ದ ಕಾರಣ, ಭಾರತೀಯರೆಂದೇ ಗುರುತಿಸಬೇಕು ಎಂಬುದು ಪ್ರಜಾಪ್ರಭುತ್ವವಾದಿಗಳ ನಿಲುವಾಗಿತ್ತು ಎಂದು ಅವರು ಹೇಳಿದರು.

ಬಿಜೆಪಿ ಹಾಗೂ ಮಿತ್ರಪಕ್ಷಗಳು ಇದನ್ನು ಚುನಾವಣೆಯ ದೃಷ್ಟಿಯಿಂದ ಮಾಡಿರುವುದರಲ್ಲಿ ಅನುಮಾನ ಬೇಡ. ಜನರ ನಡುವೆ ದ್ವೇಷ ಬಿತ್ತುವ ಮೂಲಕ ಅಕ್ರಮ ಮಾರ್ಗದಲ್ಲಿ ಚುನಾವಣೆ ಎದುರಿಸಲು ಸಜ್ಜಾಗುತ್ತಿವೆ ಎಂದು ಟೀಕಿಸಿದರು.

ಸಿಪಿಐ ಮುಖಂಡ ವಿ.ಲಕ್ಷ್ಮಿನಾರಾಯಣ, ರತಿ ರಾವ್, ಎಸ್‌ಯುಸಿಐ ಜಿಲ್ಲಾ ಕಾರ್ಯದರ್ಶಿ ಬಿ.ರವಿ, ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಕೆ.ಬಸವರಾಜು, ಸಿಪಿಐಎಂಎಲ್‌ ಜಿಲ್ಲಾ ಕಾರ್ಯದರ್ಶಿ ಚೌಡಳ್ಳಿ ಜವರಯ್ಯ, ಸ್ವರಾಜ್‌ ಇಂಡಿಯಾ ಜಿಲ್ಲಾ ಸಂಚಾಲಕ ಪ್ರೊ.ಶಬ್ಬೀರ್‌ ಮುಸ್ತಫಾ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !