ರೈಲು ಸಂಗ್ರಹಾಲಯಕ್ಕೆ ಹೊಸ ರೂಪ

ಶನಿವಾರ, ಮಾರ್ಚ್ 23, 2019
21 °C
ಕೆಫೆಟೇರಿಯಾ, ಲ್ಯಾ‌ಂಡ್‌ಸ್ಕೇಪ್, ಶ್ರೀರಂಗಂ ಪೆವಿಲಿಯನ್ ವಿಶೇಷ

ರೈಲು ಸಂಗ್ರಹಾಲಯಕ್ಕೆ ಹೊಸ ರೂಪ

Published:
Updated:
Prajavani

ಮೈಸೂರಿನ ರೈಲು ಸಂಗ್ರಹಾಲಯವು ದೇಶದಲ್ಲೇ ಅತ್ಯಂತ ವಿಶೇಷವೂ ವಿಭಿನ್ನವೂ ಆಗಿದೆ. ಇದು ದೇಶದ ಎರಡನೇ ರೈಲು ಸಂಗ್ರಹಾಲಯ ಎಂಬ ಹೆಗ್ಗಳಿಕೆ ಹೊಂದಿದ್ದು, ಮೈಸೂರು ರಾಜವಂಶಸ್ಥರು ಬಳಸುತ್ತಿದ್ದ ‘ಮಹಾರಾಣಿ ಸಲೂನ್’ ರೈಲು ಸೇರಿದಂತೆ ವಿವಿಧ ರೈಲುಗಳು ಇಲ್ಲಿ ಪ್ರದರ್ಶನಕ್ಕೆ ಇರುವುದು ವಿಶೇಷ. ಈ ರೈಲು ಸಂಗ್ರಹಾಲಯಕ್ಕೆ ಮೇಲ್ದರ್ಜೆ ಭಾಗ್ಯ ದೊರೆತಿದೆ. ಹೊಸ ನೋಟದೊಂದಿಗೆ ಕಂಗೊಳಿಸಲು ಕಾಮಗಾರಿ ಭರದಿಂದ ನಡೆಯುತ್ತಿದೆ.

1979ರಲ್ಲಿ ಆರಂಭಗೊಂಡ ಈ ಸಂಗ್ರಹಾಲಯವು ಬ್ರಿಟಿಷರ ಕಾಲದ, ಇಂಗ್ಲೆಂಡಿನಲ್ಲಿ ನಿರ್ಮಾಣಗೊಂಡಿರುವ ರೈಲುಗಳನ್ನು ಪ್ರದರ್ಶನಕ್ಕಿಟ್ಟಿದೆ. ಅಲ್ಲದೇ, ಭಾರತದಲ್ಲಿ ರೈಲು ಸಂಚಾರದ ಇತಿಹಾಸವನ್ನು ಸಾರುವ ಛಾಯಾಚಿತ್ರಗಳ ಬೃಹತ್‌ ಸಂಗ್ರಹವೂ ಇಲ್ಲಿದೆ. ಆಷ್ಟೇ ಅಲ್ಲದೇ, ರೈಲ್ವೆ ಇಲಾಖೆಯ ಸಿಬ್ಬಂದಿಯು ರೈಲುಗಳ ಸಂಚಾರಕ್ಕೆ ಬಳಸುವ ತಂತ್ರಜ್ಞಾನ, ಅವುಗಳ ವಿವರಣೆಯನ್ನು ಇಲ್ಲಿ ಪ್ರಾತ್ಯಕ್ಷಿಕೆಯ ಮೂಲಕ ತೋರಿಸುವ ವ್ಯವಸ್ಥೆಯೂ ಇದೆ. ರೈಲ್ವೆ ಇಲಾಖೆ ಬಳಸುತ್ತಿದ್ದ ಕೀ ಕೊಡುವ ಬೃಹತ್‌ ಗಡಿಯಾರಗಳು, ರೈಲ್ವೆ ಕಾಯುವ ಕೊಠಡಿಗಳಲ್ಲಿ ಇಡುತ್ತಿದ್ದ ಬೀಟೆ ಮರದ ಕನ್ನಡಿ ಸ್ಟ್ಯಾಂಡ್‌ಗಳು ಇಲ್ಲಿ ಗಮನಸೆಳೆಯುತ್ತವೆ.

ಮೇಲ್ದರ್ಜೆಯ ರಂಗು: ಒಟ್ಟು ₹ 2 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆ ಕಾರ್ಯಗಳು ಆರಂಭವಾಗಿವೆ. ಸಂಗ್ರಹಾಲಯದ ಸೌಂದರ್ಯ ಹೆಚ್ಚಿಸುವುದು ಹಾಗೂ ಪ್ರವಾಸಿ ಪ್ರಿಯ ಸೌಕರ್ಯಗಳನ್ನು ಕಲ್ಪಿಸುವುದು ಈ ಮೇಲ್ದರ್ಜೆ ಕಾರ್ಯದ ಮುಖ್ಯ ಉದ್ದೇಶವಾಗಿದೆ. ಹಾಗಾಗಿ, ಸಂಗ್ರಹಾಲಯದ ಬಾಗಿಲ ಬಳಿ ‘ಲ್ಯಾಂಡ್‌ಸ್ಕೇಪ್‌’ ರಚನೆಯನ್ನು ಮಾಡಿ, ಅಲ್ಲಿ ಹಸಿರು ಹುಲ್ಲುಹಾಸನ್ನು ಹೊದಿಸಲಾಗುತ್ತಿದೆ. ಇದರ ಜತೆಗೆ, ಪ್ರಯಾಣಿಕರಿಗಾಗಿ ಒಂದು ಕೆಫೆಟೇರಿಯಾ, ವಿರಾಮ ಕೊಠಡಿ ಬರಲಿದೆ. ಮಕ್ಕಳಿಗೆ ಆಟಕ್ಕೆ ಇರುವ ಸೌಲಭ್ಯಗಳನ್ನು ಮೇಲ್ದರ್ಜೆಗೆ ಏರಿಸಲಾಗುತ್ತಿದೆ.

ಸಂಗ್ರಹಾಲಯದ ಆವರಣದಲ್ಲಿ ಒಂದು ವಿದ್ಯುತ್‌ ಚಾಲಿತ ಆಟದ ರೈಲಿದೆ. ಈಚಿನ ದಿನಗಳಲ್ಲಿ ಈ ರೈಲು ಕೆಟ್ಟಿದ್ದ ಕಾರಣ ಬಳಕೆಯಲ್ಲಿ ಇರಲಿಲ್ಲ. ಇದನ್ನು ದುರಸ್ತಿಗೊಳಿಸಿ ಮತ್ತೆ ಸಂಚಾರಕ್ಕೆ ಸಿದ್ಧಗೊಳಿಸುತ್ತಿರುವುದು ವಿಶೇಷವಾಗಿದೆ. ಸಂಗ್ರಹಾಲಯಕ್ಕೆ ಪ್ರತಿನಿತ್ಯ 200–300 ಪ್ರವಾಸಿಗರು ಬರುತ್ತಾರೆ. ವಾರಾಂತ್ಯಗಳಲ್ಲಿ ಇದು 1 ಸಾವಿರ ಮುಟ್ಟುತ್ತದೆ. ಈ ಮೇಲ್ದರ್ಜೆ ಕಾರ್ಯದಿಂದಾಗಿ ಪ್ರವಾಸಿಗರ ಸಂಖ್ಯೆ ಮತ್ತಷ್ಟು ಹೆಚ್ಚಲಿದೆ ಎಂದು ನೈರುತ್ಯ ಇಲಾಖೆ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿದವು.

ಮಾರ್ಚ್ 7ರಿಂದ ರೈಲು ಸಂಗ್ರಹಾಲಯದಲ್ಲಿ ಮೇಲ್ದರ್ಜೆ ಕಾರ್ಯ ಶುರುವಾಗಿದೆ. ಇದೇ ಕಾರಣಕ್ಕಾಗಿ ಸಂಗ್ರಹಾಲಯವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಮೇಲ್ದರ್ಜೆಯ ಬಳಿಕ ದೇಶದ ಅತಿ ಸುಂದರ ರೈಲು ಸಂಗ್ರಹಾಲಯವಾಗಿ ಇದು ರೂಪುಗೊಳ್ಳಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !