ಸೋಮವಾರ, ನವೆಂಬರ್ 18, 2019
28 °C
ಮೋದಿ ಜನ್ಮದಿನ; ಡಿಎಲ್‌ಗಾಗಿ ಅರ್ಜಿ ಸ್ವೀಕಾರ

ಲಕ್ಷ ಲಕ್ಷ ಚಾಲಕರಿಗೆ ಅನುಕೂಲ: ತೇಜಸ್ವಿನಿ

Published:
Updated:
Prajavani

ಮೈಸೂರು: ‘ಚಾಲನಾ ಪರವಾನಗಿ ಪಡೆಯಲಿದ್ದ ಕನಿಷ್ಠ ವಿದ್ಯಾರ್ಹತೆ ನಿಯಮವನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸರಳೀಕರಣಗೊಳಿಸಿದ್ದರಿಂದ ಲಕ್ಷ, ಲಕ್ಷ ಸಂಖ್ಯೆಯ ಚಾಲಕರ ಬಾಳಿಗೆ ಬೆಳಕು ಸಿಕ್ಕಂತಾಗಿದೆ’ ಎಂದು ತೇಜಸ್ವಿನಿ ಅನಂತ್‌ಕುಮಾರ್‌ ಹೇಳಿದರು.

ನಗರದಲ್ಲಿ ಶಾಸಕ ಎಸ್‌.ಎ.ರಾಮದಾಸ್‌ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ವತಿಯಿಂದ ಮಂಗಳವಾರ ಆಯೋಜಿಸಿದ್ದ ‘ಭಾರತದ ವಿಕಾಸ ದಿನ’ ಸಮಾರಂಭದಲ್ಲಿ ಮಾತನಾಡಿದ ಅವರು ‘ಇದು ಅನಂತ್‌ಕುಮಾರ್‌ ಕನಸಾಗಿತ್ತು. ಅವರೀಗ ಇದ್ದಿದ್ದರೆ ಖುಷಿಯಲ್ಲಿ ತೇಲುತ್ತಿದ್ದರು. ರಾಮದಾಸ್‌ ಹೋರಾಟದ ಫಲವಾಗಿ ಸಾಕಾರಗೊಂಡಿದೆ’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಮಾತನಾಡಿ, ‘ಚಾಲನಾ ಪರವಾನಗಿ ಪಡೆಯಲು ಅಡ್ಡಿಯಾಗಿದ್ದ ಶೈಕ್ಷಣಿಕ ಅರ್ಹತೆ ದಿ.ಅನಂತ್‌ಕುಮಾರ್ ಹಾಗೂ ರಾಮದಾಸ್‌ ಹೋರಾಟದ ಫಲವಾಗಿ ನಿವಾರಣೆಯಾಗಿದೆ. ಇದರ ಬೆನ್ನಿಗೆ ಉಚಿತವಾಗಿ ಡಿಎಲ್‌ ಕೊಡಿಸಲು ಶಾಸಕರು ನಡೆಸಿರುವ ಯತ್ನ ಶ್ಲಾಘನಾರ್ಹವಾದುದು’ ಎಂದು ಹೇಳಿದರು.

ಶಾಸಕ ಎಸ್.ಎ.ರಾಮದಾಸ್ ಮಾತನಾಡಿ ‘ಮೋದಿಯವರ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಗುವುದು. ದೇಶದ ಕಟ್ಟ ಕಡೆಯ ಶ್ರಮಿಕನ ಬದುಕಿನಲ್ಲೂ ನೆಮ್ಮದಿ ತರುವ ಪ್ರಧಾನಿಯ ಆಶಯ ಈಡೇರಿಸಲು ಶ್ರಮಿಸುವೆ’ ಎಂದರು.

ಶಾಸಕ ಎಲ್‌.ನಾಗೇಂದ್ರ, ಮೇಯರ್ ಪುಷ್ಪಲತಾ ಜಗನ್ನಾಥ್, ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ, ಡಿಸಿಪಿ ಮುತ್ತುರಾಜ್‌, ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕ ಬಿ.ವಿ.ಮಂಜುನಾಥ್‌ ಸೇರಿದಂತೆ ಬಿಜೆಪಿ ಕಾರ್ಪೊರೇಟರ್‌ಗಳು ಸಭೆಯಲ್ಲಿ ಭಾಗಿಯಾಗಿದ್ದರು.

ಪ್ರತಿಕ್ರಿಯಿಸಿ (+)