ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀರಿನ ಮೇಲೆ ನಿಗಾ ಇಡಲು ಬರಲಿದೆ ‘ಸ್ಕಾಡಾ’

ಹೊಸ ತಂತ್ರಜ್ಞಾನದ ಕುರಿತು ಮಾಹಿತಿ ನೀಡಿದ ಸಂಸದ ಪ್ರತಾಪಸಿಂಹ
Last Updated 11 ಸೆಪ್ಟೆಂಬರ್ 2020, 3:07 IST
ಅಕ್ಷರ ಗಾತ್ರ

ಮೈಸೂರು: ನಗರದಲ್ಲಿ ಸರಬರಾಜಾಗುವ ನೀರಿನ ಮೇಲೆ ನಿಗಾ ಇಡಲು ‘ಸ್ಕಾಡಾ’ (ಸೂಪರ್‌ವೈಸರಿ ಕಂಟ್ರೋಲ್ ಅಂಡ್ ಡೇಟಾ ಅನಾಲಿಟಿಕ್ಸ್ ಆಕ್ವಿಜಿಷನ್) ಎಂಬ ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಇಲ್ಲಿನ ವಾಣಿವಿಲಾಸ ನೀರು ಸರಬರಾಜು ಕೇಂದ್ರವು ಮುಂದಾಗಿದೆ.

ಈ ಕುರಿತು ಗುರುವಾರ ಮಾಹಿತಿ ನೀಡಿದ ಸಂಸದ ಪ್ರತಾಪಸಿಂಹ, ‘ನೀರು ಎಲ್ಲೆಲ್ಲಿ ಪೋಲಾಗುತ್ತಿದೆ, ಏನೇನು ಅವ್ಯವಹಾರ ನಡೆಯುತ್ತಿದೆ ಎಂಬ ವಿಚಾರ ಹೊಸ ತಂತ್ರಜ್ಞಾನದಿಂದ ಗೊತ್ತಾಗಲಿದೆ. ಸುಮಾರು ₹50 ಕೋಟಿ ವೆಚ್ಚದ ಬೃಹತ್ ಯೋಜನೆ ಇದಾಗಿದ್ದು, ಇದರಿಂದ ನೀರಿನ ಅಪವ್ಯಯವನ್ನು ಯಶಸ್ವಿಯಾಗಿ ತಡೆಯಬಹುದು’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಗರಕ್ಕೆ 170 ಎಂಎಲ್‌ಡಿ ನೀರು ಮಾತ್ರವೇ ಬೇಕಿದೆ. ಆದರೆ, 260 ಎಂಎಲ್‌ಡಿ ನೀರು ಪೂರೈಕೆಯಾಗುತ್ತಿದೆ. ಆದಾಗ್ಯೂ, ಬಹಳಷ್ಟು ಕಡೆಗಳಲ್ಲಿ ನೀರಿನ ಸಮಸ್ಯೆ ತಾಂಡವವಾಡುತ್ತಿದೆ. ಇದನ್ನು ಸರಿಪಡಿಸಲು ನೂತನ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗುತ್ತಿದೆ ಎಂದರು.

ಮುಂದಿನ 24 ತಿಂಗಳೊಳಗೆ ಈ ತಂತ್ರಜ್ಞಾನ ಬಳಕೆಗೆ ಸಿಗಲಿದೆ. ಮುಂದೆ ರಚನೆಯಾಗಲಿರುವ ಬೃಹತ್ ಮೈಸೂರು ಮಹಾನಗರ ಪಾಲಿಕೆಗೂ ಇದರಿಂದ ಅನುಕೂಲವಾಗಲಿದೆ ಎಂದು ಹೇಳಿದರು.

ಕಾರ್ಯನಿರ್ವಹಣೆ ಹೇಗೆ?: ‘ಸ್ಕಾಡಾ’ ಕಾರ್ಯನಿರ್ವಹಣೆ ಕುರಿತು ವಿವರಿಸಿದ ವಾಣಿವಿಲಾಸ ನೀರು ಸರಬರಾಜು ಕೇಂದ್ರದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಆಸಿಫ್, ‘ಈ ತಂತ್ರಜ್ಞಾನದಿಂದ ನೀರು ಸೋರಿಕೆಯಾಗುತ್ತಿರುವುದು ಹಾಗೂ ಕಳ್ಳತನವಾಗುತ್ತಿರುವುದನ್ನು ಸುಲಭವಾಗಿ ಪತ್ತೆ ಹಚ್ಚಬಹುದು’ ಎಂದರು.

ನಿಯಂತ್ರಣ ಕೊಠಡಿ ಸ್ಥಾಪಿಸಿ ಸೋಲಾರ್ ಮತ್ತು ಎಲೆಕ್ಟ್ರಿಕಲ್ ಆ್ಯಕ್ಚುಯೇಟರ್‌ಗಳು, ಫ್ಲೋ ಮೀಟರ್, ಕ್ಯಾಮೆರಾಗಳು, ಸೆನ್ಸಾರ್‌ಗಳ ಮೂಲಕ ನೀರು ಸರಬರಾಜಿನ ಮೇಲೆ ನಿಗಾ ವಹಿಸಲಾಗುತ್ತದೆ. ಇದರಿಂದ ನೀರಿನಲ್ಲಿರುವ ಪಿ.ಎಚ್, ಕ್ಲೋರಿನ್ ಮತ್ತಿತರ ಅಂಶಗಳ ಪ್ರಮಾಣವನ್ನು ತಿಳಿಯಬಹುದು. ಎಲ್ಲವೂ ಆನ್‌ಲೈನ್ ಮೂಲಕ ಆಗಲಿದೆ. ನೀರು ಸರಬರಾಜಿನ ಮೇಲ್ವಿಚಾರಣೆ, ನಿಯಂತ್ರಣ ಎರಡನ್ನೂ ಇದರಿಂದ ಮಾಡಬಹುದು. ಇಂತಹ ವ್ಯವಸ್ಥೆ ಬೆಂಗಳೂರಿನಲ್ಲಿದೆ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT