ಬನ್ನಿಮಂಟಪ ಮೈದಾನಕ್ಕೆ ಹೊಸ ಸ್ಪರ್ಶ

7

ಬನ್ನಿಮಂಟಪ ಮೈದಾನಕ್ಕೆ ಹೊಸ ಸ್ಪರ್ಶ

Published:
Updated:
Deccan Herald

ಮತ್ತೊಂದು ನಾಡಹಬ್ಬ ಸ್ವಾಗತಿಸಲು ಮೈಸೂರು ಸಜ್ಜಾಗುತ್ತಿದೆ. ಚಟುವಟಿಕೆಗಳು ನಿಧಾನವಾಗಿ ಟಿಸಿಲೊಡೆಯುತ್ತಿವೆ. ದಸರಾ ಮಹೋತ್ಸವದ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾದ ಪಂಜಿನ ಕವಾಯತು ನಡೆಯುವ ಬನ್ನಿಮಂಟಪ ಮೈದಾನಕ್ಕೆ ಈಗ ಹೊಸ ಸ್ಪರ್ಶ ಲಭಿಸಿದೆ.

ಐತಿಹಾಸಿಕ ಮೈದಾನದ ಆಸನ ಸಾಮರ್ಥ್ಯ ಹೆಚ್ಚಿಸಲಾಗಿದೆ. ಹೀಗಾಗಿ, ಈ ಬಾರಿ ದಸರಾ ಮಹೋತ್ಸವದ ಪಂಜಿನ ಕವಾಯತು ವೀಕ್ಷಿಸಲು ಹೆಚ್ಚಿನ ಜನರು ಸೇರಬಹುದು. ಅದಕ್ಕೂ ಮೊದಲು ಈ ಮೈದಾನದಲ್ಲಿ ಆ.15ರಂದು ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ..

ಪಂಜಿನ ಕವಾಯತು ಮೈದಾನದಲ್ಲಿ ಈಗ ಸುಮಾರು 33,500 ಜನರು ಕುಳಿತು ವೀಕ್ಷಿಸಲು ಅನುವು ಮಾಡಿಕೊಡಲಾಗಿದೆ. ಈ ಹಿಂದೆ ಕೇವಲ 22 ಸಾವಿರ ಮಂದಿ ಕುಳಿತುಕೊಳ್ಳಲು ಇಲ್ಲಿ ಅವಕಾಶವಿತ್ತು. ಈ ಮೈದಾನದ ವಾರಸುದಾರರಾದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು (ಮುಡಾ) ಆಸನ ವಿಸ್ತರಿಸುವ ಅಭಿವೃದ್ಧಿ ಕಾರ್ಯವನ್ನು ಪೂರ್ಣಗೊಳಿಸಿದೆ.. ಒಟ್ಟು 11,500 ಆಸನಗಳನ್ನು ಹೆಚ್ಚಿಸಲಾಗಿದೆ ಎನ್ನುತ್ತಾರೆ ಮುಡಾ ಸೂಪರಿಂಟೆಂಡಿಂಗ್‌ ಎಂಜಿನಿಯರ್‌ ಸುರೇಶ್‌ ಬಾಬು.

ಆಸನ ಹೆಚ್ಚಿಸಬೇಕೆಂಬುದು ಹಲವು ವರ್ಷಗಳ ಬೇಡಿಕೆ. ಏಕೆಂದರೆ ಇಲ್ಲಿ ಕೇವಲ ಪಂಜಿನ ಕವಾಯತು ನಡೆಯುವುದಿಲ್ಲ. ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವದ ಜೊತೆಗೆ ಖಾಸಗಿ ಕಾರ್ಯಕ್ರಮಗಳನ್ನೂ ಆಯೋಜಿಸಲಾಗುತ್ತದೆ. ಏರ್‌ ಷೋ ಕೂಡ ನಡೆಯುತ್ತದೆ. ಆ ಸಂದರ್ಭಗಳಲ್ಲಿ ಆಸನಗಳ ಕೊರತೆಯ ದೂರು ಎದುರಾಗಿತ್ತು. ಅದರಲ್ಲೂ ಪಂಜಿನ ಕವಾಯತು ವೀಕ್ಷಿಸಲು ಪ್ರತಿ ವರ್ಷ ಭಾರಿ ಬೇಡಿಕೆ ಇರುತ್ತದೆ. ಇದು ದಸರೆಯ ಅಂತಿಮ ಹಾಗೂ ಜನಪ್ರಿಯ ಕಾರ್ಯಕ್ರಮವೂ ಹೌದು. ರಾಜ್ಯಪಾಲರು ಕವಾಯತು ವೀಕ್ಷಿಸಿ ಗೌರವ ವಂದನೆ ಸ್ವೀಕರಿಸುತ್ತಾರೆ. ಜೊತೆಗೆ ಮುಖ್ಯಮಂತ್ರಿ ಇರುತ್ತಾರೆ. ಪಂಜಿನ ಕವಾಯತು ಜೊತೆಗೆ ಮತ್ತಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳು, ಲೇಸರ್‌ ಷೋ, ಬೈಕ್ ಮತ್ತು ಕುದುರೆ ಸವಾರರ ರೋಮಾಂಚಕ ಪ್ರದರ್ಶನಗಳು, ನಯನ ಮನೋಹರ ಸಿಡಿಮದ್ದು (ಪಟಾಕಿ) ಕಾರ್ಯಕ್ರಮಗಳು ಗಮನ ಸೆಳೆಯುತ್ತವೆ. ಆಸನ ಕೊರತೆಯಿಂದಾಗಿ ಹಿಂದೆ ಕಡಿಮೆ ಟಿಕೆಟ್‌ ಮುದ್ರಿಸಲಾಗುತಿತ್ತು. ಇದಕ್ಕೆ ನೂಕುನುಗ್ಗಲು ಇರುತಿತ್ತು. ಈಗ ಆ ಸಮಸ್ಯೆ ತಪ್ಪಿದೆ.

ಆಸನ ಹೆಚ್ಚಳ ಕಾಮಗಾರಿಗೆ ₹ 6.5 ಕೋಟಿ ವೆಚ್ಚವಾಗಿದೆ. ಕಾಮಗಾರಿ ಪೂರ್ಣಗೊಳಿಸಲು ನಿಗದಿತ ಅವಧಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳಲಾಗಿದೆ. 2016ರ ಕೊನೆಯಲ್ಲಿ ಕೆಲಸ ಶುರುವಾಗಿತ್ತು. ಕಳೆದ ದಸರೆಯೊಳಗೆ ಪೂರ್ಣಗೊಳ್ಳಬೇಕಿತ್ತು. ಕಾಂಕ್ರೀಟ್‌ ಆಸನಗಳ 11 ಸಾಲುಗಳನ್ನು ಹೊಸದಾಗಿ ನಿರ್ಮಿಸಲಾಗಿದೆ. ಆಸನಗಳತ್ತ ಸಾಗಲು ಎತ್ತರಿಸಿದ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. 86 ಕಾಂಕ್ರೀಟ್‌ ಕಂಬಗಳನ್ನು ನಿಲ್ಲಿಸಲಾಗಿದೆ.

ಆಸನ ಹೆಚ್ಚಿಸುವುದರ ಜೊತೆಗೆ ಬ್ಯಾರಿಕೇಡ್‌ ನಿರ್ಮಾಣ, ಬಣ್ಣ ಬಳಿಯುವುದು, ಶಾಶ್ವತ ಚಾವಣಿ ನಿರ್ಮಾಣದಂಥ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ. ಖಾಸಗಿ ಕಾರ್ಯಕ್ರಮಗಳನ್ನು ಆಯೋಜಿಸಲು ಪ್ರಾಧಿಕಾರವು ಮೈದಾನವನ್ನು ಬಾಡಿಗೆಗೆ ಕೂಡ ನೀಡಲಿದೆ.

ಈ ಮೈದಾನಕ್ಕೆ ಐತಿಹಾಸಿಕ ಮಹತ್ವವಿದೆ. ಹೀಗಾಗಿ, ರಾಜಕೀಯ ಹಾಗೂ ಇತರ ಖಾಸಗಿ ಕಾರ್ಯಕ್ರಮಗಳಿಗೆ ಬಾಡಿಗೆ ನೀಡಲು ಕೆಲವರ ವಿರೋಧವೂ ಇದೆ. ಹಲವು ವರ್ಷಗಳ ಕಾಲ ಇದು ನಿರ್ಲಕ್ಷ್ಯಕ್ಕೆ ಒಳಗಾಗಿತ್ತು.

ಅರಮನೆ ಆವರಣದಿಂದ ಆರಂಭವಾಗುವ ಜಂಬೂಸವಾರಿ ರಾಜಪಥದಲ್ಲಿ ಸಾಗಿ 4.5 ಕಿ.ಮೀ ದೂರವಿರುವ ಬನ್ನಿಮಂಟಪದಲ್ಲಿ ಕೊನೆಗೊಳ್ಳುತ್ತದೆ. ಇಲ್ಲಿರುವ ಬನ್ನಿ ಮರಕ್ಕೆ ಈ ಹಿಂದೆ ವಿಜಯದಶಮಿ ಸಂದರ್ಭದಲ್ಲಿ ಮಹಾರಾಜರು ಮೆರವಣಿಗೆ ಮೂಲಕ ತೆರಳಿ ಪೂಜೆ ಸಲ್ಲಿಸುತ್ತಿದ್ದರು. ರಾಜ ಪರಂಪರೆ ಕೊನೆಗೊಂಡ ಮೇಲೆ ಅರಮನೆಯ ಆವರಣದಲ್ಲೇ ಪೂಜೆ ನಡೆಯುತ್ತದೆ.

ಅದೇನೇ ಇರಲಿ, ಪ್ರವಾಸಿಗಳ ನಗರಿಯ ಆಕರ್ಷಣೆಯನ್ನು ಪಂಜಿನ ಕವಾಯತು ಮೈದಾನ ಮತ್ತಷ್ಟು ಹೆಚ್ಚಿಸಿದೆ. ಪ್ರವಾಸಿಗಳ ಆಕರ್ಷಣೀಯ ಕೇಂದ್ರವೂ ಆಗಿದೆ.

 

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !