ಮಂಗಳವಾರ, ನವೆಂಬರ್ 12, 2019
20 °C

ಕಾರು ಚಾಲನೆ ಮಾಡುವಾಗ ಹೃದಯಾಘಾತ; ಸಾವು

Published:
Updated:

ಮೈಸೂರು: ಕಾರು ಚಾಲನೆ ಮಾಡುವಾಗ ಹೃದಯಾಘಾತಕ್ಕೆ ಒಳಗಾದ ಇಲ್ಲಿನ ಟ್ರೈಟಾನ್ ವಾಲ್ವ್ಸ್ ಕಂಪನಿಯ ಕ್ವಾಲಿಟಿ ವಿಭಾಗದ ಮುಖ್ಯಸ್ಥ ಬಿ.ಎಸ್.ವಲ್ಲೀಶ್ (58) ಸೋಮವಾರ ಸಂಜೆ ನಿಧನ ಹೊಂದಿದರು.

ಇವರು ಬೆಳವಾಡಿ ಕೈಗಾರಿಕಾ ಪ್ರದೇಶದಲ್ಲಿರುವ ತಮ್ಮ ಕಾರ್ಖಾನೆಯಿಂದ ಜೆ.ಪಿ.ನಗರದಲ್ಲಿರುವ ತಮ್ಮ ನಿವಾಸಕ್ಕೆ ತೆರಳುವ ಸಂದರ್ಭದಲ್ಲಿ ಬೋಗಾದಿ ರಿಂಗ್‌ರಸ್ತೆಯಲ್ಲಿ ಹೃದಯಾಘಾತಕ್ಕೆ ಒಳಗಾಗಿದ್ದಾರೆ. ಕಾರು ಪಕ್ಕಕ್ಕೆ ನಿಲ್ಲಿಸಿ ಎದೆ ನೋವಿನಿಂದ ಒದ್ದಾಡುತ್ತಿದ್ದ ಇವರನ್ನು ಸಾರ್ವಜನಿಕರು ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಆದರೆ, ಅಷ್ಟೊತ್ತಿಗೆ ಇವರು ಮೃತಪಟ್ಟಿದ್ದರು.

ಇವರಿಗೆ ಪತ್ನಿ ಡಾ.ಅನಿತಾ, ಪುತ್ರ ಹಾಗೂ ಪುತ್ರಿ ಇದ್ದಾರೆ. ಇವರ ಪುತ್ರಿ ಮಂಗಳವಾರವಷ್ಟೇ ಇಂಗ್ಲೆಂಡಿಗೆ ತೆರಳಬೇಕಿತ್ತು. ಇವರ ಅಂತ್ಯಕ್ರಿಯೆಯು ಚಾಮುಂಡಿಬೆಟ್ಟದ ತಪ್ಪಲಿನ ಸ್ಮಶಾನದಲ್ಲಿ ಮಂಗಳವಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಮೈಸೂರು ಕೈಗಾರಿಕೆಗಳ ಸಂಘದ ಅಧ್ಯಕ್ಷ ವಾಸು ಹಾಗೂ ಇತರ ಕೈಗಾರಿಕೋದ್ಯಮಿಗಳು ವಲ್ಲೀಶ್ ಅವರ ಮನೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದರು.

ಪ್ರತಿಕ್ರಿಯಿಸಿ (+)