ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರದಲ್ಲಿ ಸಮನ್ವಯತೆಯ ಕೊರತೆ: ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಟೀಕೆ

Last Updated 26 ಆಗಸ್ಟ್ 2021, 9:05 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ನಗರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಮುಖ್ಯಮಂತ್ರಿ, ಗೃಹಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಅಧಿಕಾರಿಗಳ ಮಧ್ಯೆ ಸಮನ್ವಯತೆಯೇ ಇಲ್ಲ. ಎಸ್‌.ಟಿ.ಸೋಮಶೇಖರ್‌ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಲು ಅಸಮರ್ಥ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ಇಲ್ಲಿ ದೂರಿದರು.

ಸುದ್ದಿಗೋಷ್ಠಿಯಲ್ಲಿ ಗುರುವಾರ ಮಾತನಾಡಿದ ಅವರು, ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರಕ್ಕೆ ಸಂಬಂಧಿಸಿ ಸಂತ್ರಸ್ತೆಯ ಹೇಳಿಕೆ ಆಧರಿಸಿ ತನಿಖೆ ಆರಂಭಿಸಲಾಗಿದೆ ಎಂದು ಮುಖ್ಯಮಂತ್ರಿ ಅವರು ನವದೆಹಲಿಯಲ್ಲಿ ಹೇಳಿಕೆ ನೀಡಿದ್ದಾರೆ. ಸಂತ್ರಸ್ತೆಯ ಸ್ನೇಹಿತನ ಹೇಳಿಕೆ ಆಧರಿಸಿ ತನಿಖೆ ಆರಂಭಿಸಲಾಗಿದೆ ಎಂದು ನಗರ ಪೊಲೀಸ್‌ ಕಮಿಷನರ್‌ ಹೇಳಿದ್ದಾರೆ. ಈ ಹೇಳಿಕೆ ಮಧ್ಯೆ ಭಿನ್ನತೆ ಇರುವುದೇ ಸಮನ್ವಯತೆಯೆ ಕೊರತೆಗೆ ಉದಾಹರಣೆ ಎಂದರು.

ಯಾವ ಆಧಾರದಲ್ಲಿ ತನಿಖೆ ಆರಂಭಿಸಿದ್ದಾರೆ ಎನ್ನುವುದನ್ನು ಸ್ಪಷ್ಟಪಡಿಸಬೇಕು. ಎಸ್‌.ಟಿ.ಸೋಮಶೇಖರ್ ಅವರು, ಮೈಸೂರಿಗೆ ಬಂದು ಕಾರ್ಯಕ್ರಮ ಉದ್ಘಾಟಿಸಿ, ಫೋಟೊ ತೆಗೆಸಿಕೊಂಡು ಹೋಗುತ್ತಾರೆ. ಅಧಿಕಾರಿಗಳೊಂದಿಗೆ ಬುಧವಾರ ನಡೆದಿರುವ ಸಭೆಯಲ್ಲಿ ಗಂಭೀರತೆಯೇ ಇರಲಿಲ್ಲ ಎಂದರು.

ಬಿಜೆಪಿಯ ನಾಯಕಿಯರು ಸಣ್ಣ ವಿಚಾರಕ್ಕೂ ಮಾಧ್ಯಮಗಳಲ್ಲಿ ಬೊಬ್ಬೆ ಹೊಡೆಯುತ್ತಿದ್ದರು. ಆದರೆ, ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿ ಹೇಳಿಕೆಯನ್ನೂ ನೀಡಿಲ್ಲ. ಮಹಿಳಾ ಆಯೋಗದ ಅಧ್ಯಕ್ಷರು ಯಾರೆಂಬುದೇ ಗೊತ್ತಿಲ್ಲ. ಮೈಸೂರಿನ ಮೇಯರ್‌ ಕೂಡ ಖಂಡಿಸಿಲ್ಲ. ಹಣ ಪಡೆದು ವರ್ಗಾವಣೆ ಮಾಡುವಲ್ಲಿ ರಾಜ್ಯ ಸರ್ಕಾರ ತೊಡಗಿದೆ. ಕಾಂಗ್ರೆಸ್‌ ಇದರ ವಿರುದ್ಧ ಹೋರಾಟ ನಡೆಸಲಿದೆ ಎಂದು ಅವರು ಹೇಳಿದರು.

ನಗರದಲ್ಲಿರುವ ಶೇ 50ರಷ್ಟು ಪೊಲೀಸರು ಕೋವಿಡ್‌ ಕರ್ತವ್ಯದಲ್ಲಿದ್ದು, ಅವರನ್ನು ಕಾನೂನು ಸುವ್ಯವಸ್ಥೆಗೇ ನೇಮಿಸಬೇಕು. ಕೋವಿಡ್‌ ಕರ್ತವ್ಯಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಪೊಲೀಸರು ಜನರ ಸುರಕ್ಷತೆಗೆ ಇರುವುದು ಎಂಬುದನ್ನು ಸರ್ಕಾರ ಸಾಬೀತುಪಡಿಬೇಕು ಎಂದು ಆಗ್ರಹಿಸಿದರು.

ಜೆಡಿಎಸ್‌ನ ಇಬ್ಬಗೆ ನೀತಿ: ‘ರಾಜ್ಯದ ಜನರು ಜೆಡಿಎಸ್‌ನ ಇಬ್ಬಗೆ ನೀತಿ, ಇನ್ನೊಂದು ಮುಖವನ್ನು ಅರ್ಥ ಮಾಡಿಕೊಳ್ಳಬೇಕು. ಜಾತ್ಯತೀತ ಎನ್ನುವುದು ಆ ಪಕ್ಷದ ಹೆಸರಿಗೆ ಸರಿ ಕಾಣುವುದಿಲ್ಲ. ಜೆಡಿಎಸ್‌ ಬಿಜೆಪಿಯ ‘ಬಿ ಟೀಂ’ ಎಂಬುದನ್ನು ಎಚ್‌.ಡಿ.ಕುಮಾರಸ್ವಾಮಿ ಸಾಬೀತು ಮಾಡಿದ್ದಾರೆ. ಎಚ್‌.ಡಿ.ದೇವೇಗೌಡರ ನಿಲುವೂ ಕೋಮುವಾದಿಗಳ ಪರವೇ ಇದ್ದು, ಜಾತ್ಯತೀತ ಮನೋಭಾವ ಹೇಳಿಕೆಗೆ ಮಾತ್ರ ಸೀಮಿತವಾಗಿದೆ. ಪಾಲಿಕೆ ಚುನಾವಣೆಗೆ ಸಂಬಂಧಿಸಿ ಎಚ್‌.ಡಿ.ಕುಮಾರಸ್ವಾಮಿ ಮತ್ತೊಮ್ಮೆ ವಚನ ಭ್ರಷ್ಟರಾಗಿದ್ದಾರೆ’ ಎಂದು ಟೀಕಿಸಿದರು.

ಒಳ ಒಪ್ಪಂದ ಮಾಡಿಕೊಂಡ ಜೆಡಿಎಸ್‌ ಪಕ್ಷವು ಬಿಜೆಪಿಯನ್ನು ಗೆಲ್ಲುವಂತೆ ನೋಡಿಕೊಂಡಿತು. ರಾಜ್ಯದಲ್ಲಿ ಬಿಜೆಪಿ ಆಡಳಿತಕ್ಕೆ ಬರಲು, ಪಾಲಿಕೆಯಲ್ಲಿ ಅಧಿಕಾರದ ಖಾತೆ ತೆರೆಯಲು ಜೆಡಿಎಸ್‌ ಕಾರಣ. ಜೆಡಿಎಸ್‌ ಜತೆಗೆ ಕಾಂಗ್ರೆಸ್‌ ಸಖ್ಯ ಮುಗಿದ ಅಧ್ಯಾಯ. ಜೆಡಿಎಸ್‌ ಬಿಜೆಪಿಗಿಂತ ಅಪಾಯಕಾರಿ ಎಂದು ಅವರು ಹೇಳಿದರು.

ಸುಳ್ಳು ಹೇಳುವುದನ್ನು ಬಿಡಲಿ: ‘ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿ ಸುಳ್ಳು ಹೇಳುವುದನ್ನು ಸಂಸದ ಪ್ರತಾಪ ಸಿಂಹ ಅವರು ನಿಲ್ಲಿಸಬೇಕು. ದಶಪಥ ಕಾಮಗಾರಿಗೆ ಮಾಜಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರು 8 ಪೈಸೆ ಕೊಟ್ಟಿದ್ದರೂ ಅವರ ಹೆಸರು ಹೇಳುವೆ ಎಂದು ಸಂಸದ ಹೇಳಿದ್ದಾರೆ. ಮಹದೇವಪ್ಪ ಅಥವಾ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏಕೆ ಹಣ ನೀಡಬೇಕು. ಅದು ಜನರ ತೆರಿಗೆ ಹಣ. ನಿಮ್ಮ ಕೈಯಿಂದ ಎಷ್ಟು ಹಣ ನೀಡಿದ್ದೀರಿ ಎಂಬುದನ್ನು ಸ್ಪಷ್ಟಪಡಿಸಿ’ ಎಂದು ಆಗ್ರಹಿಸಿದರು.

‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭ ಮಹದೇವಪ್ಪ ಅವರು ಲೋಕೋಪಯೋಗಿ ಸಚಿವರಾಗಿದ್ದಾಗ (2014ರಿಂದ 2016) 7,651 ಕಿ.ಮೀ. ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಮೇಲ್ದರ್ಜೆಗೇರಿಸಲಾಗಿದೆ. ಬೆಂಗಳೂರು –ಮೈಸೂರು ಹೆದ್ದಾರಿ ಕಾಮಗಾರಿಗೆ 2014ರ ಮಾರ್ಚ್‌ 4ರಂದು ಒಪ್ಪಿಗೆ ಸಿಕ್ಕಿದೆ. ಆ ಸಂದರ್ಭದಲ್ಲಿ ಪ್ರತಾಪಸಿಂಹ ಅವರು ಎಲ್ಲಿ ಮಲಗಿದ್ದರು? 2014ರ ಮೇ 26ರಂದು ಅವರು ಸಂಸದರಾದದ್ದು. ಹೆದ್ದಾರಿಯ ಶ್ರೇಯಸ್ಸು ಸಿದ್ದರಾಮಯ್ಯ ಮತ್ತು ಮಹದೇವಪ್ಪ ಅವರಿಗೆ ಸಲ್ಲಬೇಕು. ಕೇಂದ್ರ ಸಚಿವರಾಗಿದ್ದ ಆಸ್ಕರ್ ಫರ್ನಾಂಡಿಸ್‌ ಅವರ ಜತೆ 15 ಸಭೆ ನಡೆಸಿ ಮಂಜೂರು ಮಾಡಿಸಿಕೊಂಡಿದ್ದಾರೆ’ ಎಂದು ದಾಖಲೆ ಬಿಡುಗಡೆ ಮಾಡಿದರು.

‘ಪ್ರತಾಪಸಿಂಹ ಅವರು ಈ ಹೆದ್ದಾರಿಗೆ ಸಂಬಂಧಿಸಿ ಎಷ್ಟು ಸಭೆ ನಡೆಸಿದ್ದೀರಿ? ನಿಮ್ಮ ಕೊಡುಗೆ ಬಗ್ಗೆ ನಾಳೆಯೇ ಸಭೆ ಮಾಡಿ ದಾಖಲೆ ನೀಡಿ. ನಿಮ್ಮ ಕೊಡುಗೆ ಮೈಸೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಸಿದ್ಧಲಿಂಗಪುರದಿಂದ ಕೊಲಂಬಿಯಾ ಏಷ್ಯಾದವರೆಗಿನ ಹೆದ್ದಾರಿಗೆ ಸಂಬಂಧಿಸಿ ಇರಬಹುದು. ನಿಮ್ಮನ್ನು ಇದುವರೆಗೆ ಯಾವ ಸಭೆಗೂ ಕರೆದಿಲ್ಲ’ ಎಂದರು.

ಈ ಬಗ್ಗೆ ಮುಕ್ತ ಚರ್ಚೆಯನ್ನು ಸೆ.5ರಂದು ಬೆಳಿಗ್ಗೆ 11ಕ್ಕೆ ಪತ್ರಿಕಾ ಭವನದಲ್ಲಿ ನಿಗದಿ ಮಾಡಿದ್ದೇವೆ. ಮಹದೇವಪ್ಪ ಅವರನ್ನೂ ಕರೆದುಕೊಂಡು ಬರಲಿದ್ದು, ದಾಖಲೆಗಳೊಂದಿಗೆ ಚರ್ಚೆ ಮಾಡೋಣ. ಪ್ರತಾಪಸಿಂಹ ಅವರೂ ದಾಖಲೆ ಹಿಡಿದುಕೊಂಡು ಬರಬೇಕು. ಆ ದಿನ ಆಗದೆ ಇದ್ದರೆ ಬೇರೆ ದಿನವನ್ನು ಅವರೇ ನಿಗದಿ ಮಾಡಲಿ. ನಾವು ಬರುತ್ತೇವೆ. ಅವರ ಕೊಡುಗೆ ಇದ್ದರೆ ನಾವೇ ಗೌರವಿಸುತ್ತೇವೆ ಎಂದರು.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ದೇಶವನ್ನೇ ಮಾರುತ್ತಿದ್ದಾರೆ. 137 ಸಾರ್ವಜನಿಕ ಉದ್ದಿಮೆಗಳ ಪೈಕಿ 36ನ್ನು ಮಾರಾಟ ಮಾಡಿದ್ದಾರೆ. ಈ ವರ್ಷದೊಳಗೆ ಉಳಿದ 100 ಉದ್ದಿಮೆಗಳನ್ನು ಮಾರಾಟ ಮಾಡುತ್ತಾರೆ ಎಂದು ಟೀಕಿಸಿದರು.

ಆತ್ಮಸ್ಥೈರ್ಯ ತುಂಬಿ: 30 ಗಂಟೆಗಳ ಅಂತರದಲ್ಲಿ ಎರಡು ದೊಡ್ಡ ಅಪರಾಧ ಪ್ರಕರಣಗಳು ಮೈಸೂರು ನಗರದಲ್ಲಿ ನಡೆದಿದ್ದು, ಪ್ರವಾಸಿ ತಾಣವಾಗಿರುವ ಮೈಸೂರು ಈಗ ಅಪರಾಧ ಪ್ರಕರಣಗಳ ನಗರವಾಗಿದೆ. ಇದಕ್ಕೆ ಸರ್ಕಾರ, ಗೃಹಸಚಿವರೇ ನೇರ ಹೊಣೆ. ಸಾರ್ವಜನಿಕರಲ್ಲಿ, ವ್ಯಾಪಾರಿಗಳಲ್ಲಿ ಪೊಲೀಸ್‌ ಇಲಾಖೆ ಆತ್ಮಸ್ಥೈರ್ಯ ತುಂಬಬೇಕು ಎಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್‌ ಆಗ್ರಹಿಸಿದರು.‌

ಪಾಲಿಕೆ ಸದಸ್ಯ ಆಯೂಬ್ ಖಾನ್‌ ಮಾತನಾಡಿ, ಜೆಡಿಎಸ್‌ – ಕಾಂಗ್ರೆಸ್‌ ಜಗಳದಿಂದ ಬಿಜೆಪಿ ಪಾಲಿಕೆಯಲ್ಲಿ ಅಧಿಕಾರಕ್ಕೆ ಬಂದಿದ್ದಲ್ಲ. ಬುಧವಾರದ ಘಟನೆಗೆ ಜೆಡಿಎಸ್‌ನ ಒಳ ಒಪ್ಪಂದವೇ ಕಾರಣ. ಜೆಡಿಎಸ್‌ ಜನರಿಗೆ ಮೋಸ ಮಾಡುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT