ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾ.ಪಂ.ನಲ್ಲಿ ಅಭಿವೃದ್ಧಿಯೇ ಆಗಿಲ್ಲ

ಸಾಮಾನ್ಯ ಸಭೆಯಲ್ಲಿ ಸದಸ್ಯರಿಂದ ತೀವ್ರ ಆಕ್ಷೇಪ
Last Updated 20 ಜೂನ್ 2019, 4:33 IST
ಅಕ್ಷರ ಗಾತ್ರ

ಮೈಸೂರು: ಮೈಸೂರು ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವ ಅಭಿವೃದ್ಧಿ ಕಾರ್ಯವೂ ನಡೆದಿಲ್ಲ. ಈವರೆಗೆ ಸಾಕಷ್ಟು ಸಾಮಾನ್ಯಸಭೆ ನಡೆದಿವೆ. ತೆಗೆದುಕೊಂಡ ನಿರ್ಣಯಗಳು ಏಕೆ ಜಾರಿಯಾಗಿಲ್ಲ? ಐದು ವರ್ಷದ ಆಡಳಿತಾವಧಿಯಲ್ಲಿ ಮೂರು ವರ್ಷ ಮುಗಿದೇ ಹೋಯಿತು. ಹೀಗಾದರೆ ಜನರಿಗೆ ಮುಖತೋರುವುದು ಹೇಗೆ?

ಹೀಗೆ, ತಾಲ್ಲೂಕು ಪಂಚಾಯಿತಿ ಸದಸ್ಯರು ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ ಅವರಿಗೆ ಪ್ರಶ್ನೆಗಳ ಮಳೆ ಸುರಿಸಿದರು. ‘ಜನಪ್ರತಿನಿಧಿಗಳಾಗುವುದು ನೂರು ಜನ್ಮದ ಪುಣ್ಯ. ನಾವು ಕೆಲಸ ಮಾಡದೇ ಇದ್ದಲ್ಲಿ ಪಾಪ ಸುತ್ತಿಕೊಳ್ಳುತ್ತದೆ’ ಎಂದು ಕಾಳಮ್ಮ ಅವರ ವಿರುದ್ಧ ಕಿಡಿ ಕಾರಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕಾಳಮ್ಮ ಕೆಂಪರಾಮಯ್ಯ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಅಧ್ಯಕ್ಷರು ಹಾಗೂ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಕೆ.ಎನ್.ಲಿಂಗರಾಜಯ್ಯ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಇಲ್ಲವಾದಲ್ಲಿ ಜನಸಾಮಾನ್ಯರ ಬದುಕು ದುಸ್ತರವಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಸದಸ್ಯ ಶ್ರೀನಿವಾಸ ಮಾತನಾಡಿ, ‘ತಾಲ್ಲೂಕು ಪಂಚಾಯಿತಿ ವ್ಯಾಪ್ತಿಗೆ ಬರುವ 38 ಗ್ರಾಮ ಪಂಚಾಯಿತಿಗಳು ಅವ್ಯವಸ್ಥೆಯ ಆಗರವಾಗಿವೆ. ವಿವಿಧ ಕಾಮಗಾರಿ ಜಾರಿಯಲ್ಲಿ ಸರ್ಕಾರದ ನಿಯಮಗಳನ್ನು ಪಾಲಿಸುತ್ತಿಲ್ಲ. ಅಲ್ಲದೇ, ಕಾಮಗಾರಿಗಳನ್ನು ಶುರುಮಾಡದೇ ಕಾಲಹರಣ ಮಾಡುತ್ತಿರುವುದೇ ಹೆಚ್ಚಾಗಿದೆ. ರಸ್ತೆಗಳು ಗುಂಡಿ ಬಿದ್ದಿವೆ. ಕಳಪೆ ಕಾಮಗಾರಿ ಮಾಡುತ್ತಿರುವ ಕಾರಣ ಪ್ರತಿ ವರ್ಷ ಹಾಳಾಗುತ್ತಿವೆ. ಸಂಬಂಧಿಕರಿಗೇ ಗುತ್ತಿಗೆ ನೀಡು‌ತ್ತಿರುವುದು ಇದಕ್ಕೆ ಕಾರಣ’ ಎಂದು ಗಂಭೀರವಾಗಿ ಆರೋಪಿಸಿದರು.

ಇದಕ್ಕೆ ಪೂರಕವಾಗಿ ಮಾತನಾಡಿದ ಸದಸ್ಯ ಮಹದೇವು, ಗ್ರಾಮ ಪಂಚಾಯಿತಿಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಪಿಡಿಒಗಳು ಕರ್ತವ್ಯ ಮರೆತಿದ್ದಾರೆ. ಜನಪ್ರತಿನಿಧಿಗಳು ನಿಯಮ ಗಾಳಿಗೆ ತೂರುತ್ತಿದ್ದಾರೆ. ರಸ್ತೆ ಕಾಮಗಾರಿ, ಒಳಚರಂಡಿ ವ್ಯವಸ್ಥೆ, ಕುಡಿಯುವ ನೀರಿನ ಜಾಲ ನಿರ್ಮಾಣ ಕಳಪೆಯಿಂದ ಕೂಡಿವೆ ಎಂದು ಕಿಡಿ ಕಾರಿದರು.

ಮೂರು ವರ್ಷಗಳಲ್ಲಿ ತಾ.ಪಂ.ನಲ್ಲಿ 20ಕ್ಕೂ ಹೆಚ್ಚು ಸಭೆ ನಡೆದಿದೆ. ಅಧ್ಯಕ್ಷ ಸ್ಥಾನದ ಗುದ್ದಾಟದಿಂದ 13ಕ್ಕೂ ಸಭೆ ನಡೆದಿಲ್ಲ. 11 ಸಭೆಗಳಲ್ಲಿ ಚರ್ಚೆಯಾದ ಸಮಸ್ಯೆಗಳಿಗೆ ಪರಿಹಾರ ನೀಡಿಲ್ಲ ಎಂದು ಸದಸ್ಯರಾದ ಕನ್ನೇಗೌಡ, ರೇವಣ್ಣ, ಹನುಮಂತು, ಶ್ರೀನಿವಾಸ್, ಮಹದೇವು, ರಜನಿ, ರಾಣಿ ಸತೀಶ್, ನೇತ್ರ ವೆಂಕಟೇಶ್ ಎಂದು ಅಳಲು ತೋಡಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಕಾಳಮ್ಮ, ‘ಹಿಂದಿನ ಸಭೆಗಳಲ್ಲಿ ಕೈಗೊಂಡ ಎಲ್ಲ ನಿರ್ಣಯಗಳನ್ನು ಜಾರಿಗೊಳಿಸಲಾಗಿದೆ’ ಎಂದು ಸಮರ್ಥಿಸಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಶ್ರೀನಿವಾಸ, ‘ಇದು ನಿಜವೇ ಆಗಿದ್ದಲ್ಲಿ, ಇಲ್ಲಿರುವ ಸದಸ್ಯರೆಲ್ಲರೂ ಹೌದು ಎಂದು ಒಪ್ಪಿಕೊಳ್ಳಲಿ’ ಎಂದು ಆಗ್ರಹಿಸಿದರು. ಬಹುತೇಕ ಸದಸ್ಯರು ಯಾವುದೇ ಕೆಲಸಗಳಾಗಿಲ್ಲ ಎಂದು ಆಕ್ಷೇಪ ದಾಖಲಿಸಿದರು.

ಕಾರ್ಯನಿರ್ವಹಣಾಧಿಕಾರಿ ಲಿಂಗರಾಜಯ್ಯ, ಅಧ್ಯಕ್ಷೆ ಕಾಳಮ್ಮ, ಉಪಾಧ್ಯಕ್ಷ ಎನ್‌.ಬಿ.ಮಂಜು, ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಶಂಕರ್ ಹಾಗೂ ಸದಸ್ಯರೊಡನೆ ಚರ್ಚಿಸಿ, ಗ್ರಾ.ಪಂ ಕಚೇರಿಗಳಿಗೆ ಮೂರು ಸಮಿತಿಗಳು ಭೇಟಿ ನೀಡಿ ಪರಿಶೀಲನೆ ಮಾಡುವಂತೆ ನಿರ್ಧರಿಸಲಾಯಿತು. ಎಲ್ಲ 38 ಗ್ರಾಮಗಳಿಗೆ ಭೇಟಿ ನೀಡಿ ‍‍‍ಪರಿಶೀಲನೆನಡೆಸುವಂತೆ ತೀರ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT