ಬುಧವಾರ, ಸೆಪ್ಟೆಂಬರ್ 22, 2021
23 °C
ಕೊರೊನಾ ಸೋಂಕು ಪ್ರಕರಣಗಳ ಹೆಚ್ಚಳ ಹಿನ್ನೆಲೆ l ಬಾವಲಿ ಚೆಕ್‌ಪೋಸ್ಟ್‌ನಲ್ಲಿ ಬಿಗಿಗೊಂಡ ತಪಾಸಣೆ

ಮೈಸೂರು: ಕೇರಳದಿಂದ ಬರುವವರ ಮೇಲೆ ಹದ್ದಿನ ಕಣ್ಣು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಕೇರಳ ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಕರಣಗಳು ಹೆಚ್ಚುತ್ತಿದ್ದಂತೆ ಗಡಿಭಾಗವಾದ ಎಚ್.ಡಿ.ಕೋಟೆ ತಾಲ್ಲೂಕಿನ ಬಾವಲಿ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆಯನ್ನು ಬಿಗಿಗೊಳಿಸಲಾಗಿದೆ.

ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ, ಸಬ್‌ಇನ್‌ಸ್ಪೆಕ್ಟರ್‌ ಸೇರಿದಂತೆ ಅಧಿಕಾರಿಗಳು ಪಾಳಿ ಆಧಾರದಲ್ಲಿ ನಿತ್ಯವೂ ಒಬ್ಬರು ಚೆಕ್‌ಪೋಸ್ಟ್‌ನ ಉಸ್ತುವಾರಿ ವಹಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಸೂಚಿಸಿದ್ದಾರೆ.

ಕೇರಳದಿಂದ ಬರುವ ಎಲ್ಲರಿಗೂ 2 ಡೋಸೆಜ್ ಕೋವಿಡ್‌ ಲಸಿಕೆ ಅಥವಾ 72 ಗಂಟೆಗಳಿಗೂ ಮುಂಚೆ ಮಾಡಿಸಿದ ಆರ್‌ಟಿಪಿಸಿಆರ್‌ ಪರೀಕ್ಷೆಯ ನೆಗೆಟಿವ್ ವರದಿ ಹೊಂದಿರುವುದನ್ನು ಕಡ್ಡಾಯಗೊಳಿಸಲಾಗಿದೆ. ತಪಾಸಣೆ ವೇಳೆ ಈ ಕುರಿತ ದಾಖಲಾತಿಗಳನ್ನು ಪರಿಶೀಲಿಸಿ ಗಡಿ ಪ್ರವೇಶಕ್ಕೆ ಪೊಲೀಸರು ಮತ್ತು ಆರೋಗ್ಯ ಇಲಾಖೆ ತಂಡ ಅನುಮತಿ ನೀಡುತ್ತಿದೆ.

ಆರೋಗ್ಯ ಇಲಾಖೆಯಿಂದ ಶುಶ್ರೂಷಕಿ, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಒಬ್ಬ ಶಿಕ್ಷಕರು, ನಾಲ್ವರು ಪೊಲೀಸರು ಮತ್ತು ನಾಲ್ವರು ಅರಣ್ಯ ಇಲಾಖೆ ಸಿಬ್ಬಂದಿ ಇರುವ ತಂಡವನ್ನು ಇಲ್ಲಿ ಎರಡು ಪಾಳಿಗಳಲ್ಲೂ
ನಿಯೋಜಿಸಲಾಗಿದೆ.

ಆರ್‌ಟಿಪಿಸಿಆರ್‌ ವರದಿ ಇಲ್ಲವೇ 2 ಡೋಸೆಜ್ ಕೋವಿಡ್ ಲಸಿಕೆ ಪಡೆದಿರುವವರನ್ನು ಮಾತ್ರವೇ ಬಸ್‌ಗೆ ಹತ್ತಿಸಿಕೊಳ್ಳಬೇಕು ಎಂದು ಖಾಸಗಿ ಬಸ್‌ ನಿರ್ವಾಹಕರಿಗೆ ಸೂಚಿಸಲಾಗಿದೆ.

ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿಯೂ ಇದೀಗ ಪ್ರಯಾಣಿಕರ ಸಂಖ್ಯೆ ಕುಸಿದಿರುವುದರಿಂದ ಸದ್ಯ ಮಾನಂದವಾಡಿಗೆ ಹೋಗುವ ಎಲ್ಲ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ನಿಲ್ಲಿಸಲಾಗಿದೆ.

ಈ ಕುರಿತು ‘ಪ್ರಜಾವಾಣಿ’ಗೆ ‍ಪ್ರತಿಕ್ರಿಯಿಸಿದ ಕೆಎಸ್‌ಆರ್‌ಟಿಸಿಯ ಗ್ರಾಮಾಂತರ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ್, ‘ಮೊದಲು 25 ಬಸ್‌ಗಳು ಕೇರಳಕ್ಕೆ ಸಂಚರಿಸುತ್ತಿದ್ದವು. ಪ್ರಯಾಣಿಕರ ಕೊರತೆ ಹಾಗೂ ಕೇರಳದಲ್ಲಿ ಕೋವಿಡ್ ಹೆಚ್ಚುತ್ತಿರುವುದರಿಂದ ಸದ್ಯ 2 ಬಸ್‌ಗಳು ಮಾತ್ರವೇ ಸುಲ್ತಾನ್‌ಬತೇರಿ ಮೂಲಕ ಹೋಗುತ್ತಿವೆ. ಮಾನಂದವಾಡಿಗೆ ತೆರಳುವ ಬಸ್‌ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.