ಪರ್ಯಾಯ ಕಾಯ್ದೆ ತಂದರೆ ಹೋರಾಟ

7
ಆದಿವಾಸಿಗಳ ಹಕ್ಕು ಕಸಿದುಕೊಳ್ಳಲು ಸರ್ಕಾರದಿಂದಲೇ ಪ್ರಯತ್ನ–ಬಸವರಾಜ್‌ ಕೌತಾಳ್‌ ಆರೋಪ

ಪರ್ಯಾಯ ಕಾಯ್ದೆ ತಂದರೆ ಹೋರಾಟ

Published:
Updated:

 ಮೈಸೂರು: ‘ಈಗಿರುವ ಅರಣ್ಯ ಹಕ್ಕು ಕಾಯ್ದೆಯೇ ಪರಿಣಾಮಕಾರಿಯಾಗಿದೆ. ಅದಕ್ಕೆ ಪರ್ಯಾಯವಾಗಿ ಇನ್ನೊಂದು ಹಕ್ಕು ಅಗತ್ಯವಿಲ್ಲ. ಹಾಗೇನಾದರೂ ಮಾಡಿದರೆ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ’ ಎಂದು ಆದಿವಾಸಿ ದಲಿತ ಭೂ ಹಕ್ಕು ಹೋರಾಟ ವೇದಿಕೆ ಅಧ್ಯಕ್ಷ ಬಸವರಾಜ್‌ ಕೌತಾಳ್‌ ಎಚ್ಚರಿಸಿದರು.

ರಾಜ್ಯ ಮೂಲ ಆದಿವಾಸಿಗಳ ರಕ್ಷಣಾ ವೇದಿಕೆ ವತಿಯಿಂದ ಭಾನುವಾರ ಇಲ್ಲಿ ಆಯೋಜಿಸಿದ್ದ ಆದಿವಾಸಿ ದಲಿತ ಭೂ ಹಕ್ಕು ಆಂದೋಲನ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ‘ಅರಣ್ಯ ಹಕ್ಕು 2006 ಹಾಗೂ 2008 ಕಾಯ್ದೆ ಪರಿಣಾಮಕಾರಿಯಾಗಿವೆ. ಸುಪ್ರೀಂ ಕೋರ್ಟ್‌ ಕೂಡ ಈ ಕಾಯ್ದೆಯನ್ನು ಯಥಾವತ್ತಾಗಿ ಅನುಷ್ಠಾನಕ್ಕೆ ನಿರ್ದೇಶನ ನೀಡಿದೆ. ಆದರೆ, ಇಂಥ ಕಾಯ್ದೆಗಳನ್ನು ದುರ್ಬಳಗೊಳಿಸುವ ಪ್ರಯತ್ನಗಳು ಆಳುವ ಸರ್ಕಾರಗಳಿಂದಲೇ ನಡೆಯುತ್ತಿದೆ. ಆದಿವಾಸಿಗಳ ಹಕ್ಕನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ’ ಎಂದು ವಿಷಾದ ವ್ಯಕ್ತಪಡಿಸಿದರು.

‘ಕ್ಯಾಂಪಾ ಕಾಯ್ದೆ ಹಾಗೂ ಇತರ ಪರ್ಯಾಯ ಕಾಯ್ದೆ ತಂದು ಆದಿವಾಸಿಗಳನ್ನು ಒಕ್ಕಲೆಬ್ಬಿಸುವ ಕೆಲಸಗಳನು ನಡೆಯುತ್ತಿವೆ. ಕಾಡಿನ ಸಂರಕ್ಷಣೆ ಹೆಸರಿನಲ್ಲಿ ಕಾಡಿನಿಂದಾಚೆಗೆ ತಳ್ಳುತ್ತಿದ್ದಾರೆ. ಕಾಯ್ದೆ ತಂದು, ಅದೇ ಕಾಯ್ದೆಯನ್ನು ದುರ್ಬಲಗೊಳಿಸುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ’ ಎಂದು ಆರೋಪಿಸಿದರು.

‘ಆದಿವಾಸಿ ಸಮುದಾಯದವರು ಇಂಥ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಬಗ್ಗೆ ಚರ್ಚೆಗಳು, ಸಮಾಲೋಚನೆ ನಡೆಸಬೇಕು. 9 ಜಿಲ್ಲೆಗಳಲ್ಲಿ ಆದಿವಾಸಿಗಳು ಇದ್ದಾರೆ. ತಮ್ಮ ಹಕ್ಕನ್ನು ರಕ್ಷಿಸಿಕೊಳ್ಳಲು, ಬದುಕು ಕಟ್ಟಿಕೊಳ್ಳಲು ಬೇಕಾಗಿರುವ ಹೋರಾಟ ನಡೆಸಬೇಕು. ಸರ್ಕಾರದ ಮೇಲೆ ಒತ್ತಡ ಹೇರಬೇಕು. ಕಾನೂನು ರೂಪಿಸುವ ಜಾಗದಲ್ಲಿ ಸಮುದಾಯದ ಪ್ರತಿನಿಧಿಗಳು ಇರುವಂತೆ ನೋಡಿಕೊಳ್ಳಬೇಕು’ ಎಂದು ಕರೆ ನೀಡಿದರು.

ಡೀಡ್ಸ್‌ ಸಂಸ್ಥೆ ಮುಖ್ಯಸ್ಥ ಶ್ರೀಕಾಂತ್‌ ಮಾತನಾಡಿ, ‘ಆದಿವಾಸಿಗಳ ಪರವಾಗಿ ಯಾರೂ ಮಾತನಾಡುವವರು ಇಲ್ಲ. ಹೀಗಾಗಿ, ಆದಿವಾಸಿಗಳಿಗೆ ಮಾರಕವಾಗುವಂಥ ಕಾಯ್ದೆ ತರಲು ಪ್ರಯತ್ನಗಳು ನಡೆಯುತ್ತಿವೆ. ಅರಣ್ಯ ಸಂರಕ್ಷಣೆ ಕಾಯ್ದೆ ಹಾಗೂ ವನ್ಯ ಜೀವಿ ಕಾಯ್ದೆಗಳು ಆದಿವಾಸಿಗಳ ವಿರುದ್ಧವಾಗಿವೆ’ ಎಂದರು.

‘ಅರಣ್ಯ ಇಲಾಖೆ ಅಧಿಕಾರಿಗಳು ರಾಕ್ಷಸ ಪ್ರವೃತ್ತಿ ಮೈಗೂಡಿಸಿಕೊಂಡಿದ್ದಾರೆ. ಅರಣ್ಯಾಧಿಕಾರಿಗಳನ್ನು ಆದಿವಾಸಿಗಳು ಚಾಟಿ ತೆಗೆದುಕೊಂಡಿ ಓಡಾಡಿಸಬೇಕು. ಆಗ ಮಾತ್ರ ತಮ್ಮ ಹಕ್ಕು ಪ್ರತಿಪಾದಿಸಬಹುದು’ ಎಂದು ನುಡಿದರು. ಒಂದು ದಿನದ ಕಾರ್ಯಾಗಾರದಲ್ಲಿ ಏಳು ಜಿಲ್ಲೆಗಳ ಸುಮಾರು 150 ಆದಿವಾಸಿಗಳು ಪಾಲ್ಗೊಂಡಿದ್ದರು. ವಿವಿಧ ಆದಿವಾಸಿಗಳ ವಿರುದ್ಧ ಜಾರಿಯಾಗಿರುವ ಕ್ಯಾಂಪಾ ಕಾಯ್ದೆ ಬಗ್ಗೆ ಹಾಗೂ ಡಾ.ಮುಜಾಫರ್ ಅಸಾದಿ ವರದಿ ಶಿಫಾರಸಿನ ಬಗ್ಗೆ ಚರ್ಚಿಸಲಾಯಿತು.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !