ಶುಕ್ರವಾರ, ಆಗಸ್ಟ್ 12, 2022
20 °C
ಕೋವಿಡ್‌ನಿಂದಾಗಿ ಪ್ರವಾಸಿಗರ ಸಂಖ್ಯೆ ಇಳಿಕೆ

ದಿನಕ್ಕೆ ಒಂದೂ ರೂಂ ಬುಕ್‌ ಆಗ್ತಿಲ್ಲ: ಮೈಸೂರು ನಗರದ ಹೋಟೆಲ್‌ ಮಾಲೀಕರ ಅಳಲು

ರಮೇಶ ಕೆ. Updated:

ಅಕ್ಷರ ಗಾತ್ರ : | |

ಮೈಸೂರು: ನಾಡಹಬ್ಬ ದಸರಾಕ್ಕೆ ದಿನಗಣನೆ ಶುರುವಾಗಿದೆ. ಈ ವೇಳೆಗಾಗಲೇ ನಗರದ ಹೋಟೆಲ್‌ಗಳ ಬಹುತೇಕ ರೂಂಗಳು ಬುಕ್‌ ಆಗಿರ ಬೇಕಿತ್ತು. ಆದರೆ, ಕೊರೊನಾ ಹಾಗೂ ಸರಳ ದಸರಾ ಆಚರಣೆ ಹಿನ್ನೆಲೆಯಲ್ಲಿ ಗ್ರಾಹಕರಿಲ್ಲದೇ ಖಾಲಿಖಾಲಿಯಾಗಿವೆ.

ಮೈಸೂರು ದಸರಾಕ್ಕೆ ಮೂರು ತಿಂಗಳು ಇರುವಾಗಲೇ ವಿದೇಶಿಗರು ರೂಂಗಳನ್ನು ಕಾಯ್ದಿರಿಸುತ್ತಿದ್ದರು. ಇತರೆ ಜಿಲ್ಲೆ ಹಾಗೂ ಹೊರ ರಾಜ್ಯದವರು ಹತ್ತು, ಹದಿನೈದು ದಿನಗಳ ಕಾಲ ಕೊಠಡಿ ಬುಕ್‌ ಮಾಡುತ್ತಿದ್ದರು. ಆದರೆ, ಈ ಬಾರಿ ಕೋವಿಡ್‌ ಕಾರಣದಿಂದ ಪ್ರವಾಸಿಗರ ಸಂಖ್ಯೆ ಕ್ಷೀಣವಾಗಿದೆ.

‘ಪ್ರತಿ ವರ್ಷ ಈ ವೇಳೆಗೆ ಸುಮಾರು ಶೇ 80ರಷ್ಟು ರೂಂಗಳು ಬುಕ್‌ ಆಗಿರುತ್ತಿದ್ದವು. ಈಗ ದಿನಕ್ಕೆ ಒಂದು ರೂಂ ಕಾಯ್ದಿರಿಸಿದರೆ ದೊಡ್ಡದು ಎನ್ನುವಂತಾಗಿದೆ. ವಿಚಾರಣೆಗೆ ಕರೆ ಮಾಡುವವರೂ ಇಲ್ಲದಂತಾಗಿದೆ’ ಎಂದು ಪ್ರೀತಿ ಇಂಟರ್‌ ನ್ಯಾಷನಲ್‌ ಹೋಟೆಲ್‌ನ ವ್ಯವಸ್ಥಾಪಕ ಶಿವರಾಂ ಬೇಸರ ವ್ಯಕ್ತಪಡಿಸಿದರು.

‘ವರ್ಷದಿಂದ ವರ್ಷಕ್ಕೆ ದಸರಾಕ್ಕೆ ಬರುವ ಪ್ರವಾಸಿಗರ ಸಂಖ್ಯೆಯೂ ಕಡಿಮೆಯಾಗುತ್ತಿದೆ. ತೆರಿಗೆ, ಪ್ರವಾಸಿ ತಾಣಗಳ ಪ್ರವೇಶ ಶುಲ್ಕ ಹೆಚ್ಚಳ ಇದಕ್ಕೆ ಕಾರಣ. ಕೊರೊನಾದಿಂದ ಬಾಡಿಗೆ ಜಾಗದಲ್ಲಿ ಹೋಟೆಲ್‌ ನಡೆಸುತ್ತಿದ್ದವರೂ ಬಾಗಿಲು ಮುಚ್ಚುವ ಪರಿಸ್ಥಿತಿ ಬಂದಿದೆ. ಇದುವರೆಗೂ ಆರಂಭ ಮಾಡುವ ಸಾಹಸಕ್ಕೆ ಕೈಹಾಕಿಲ್ಲ. ಬಹಳಷ್ಟು ಸಿಬ್ಬಂದಿ ಕಡಿತ ಮಾಡಿದ್ದಾರೆ. ನಮ್ಮಲ್ಲೂ 90 ಸಿಬ್ಬಂದಿ ಇದ್ದ ಜಾಗದಲ್ಲಿ 15 ಜನ ಮಾತ್ರ ಕೆಲಸ ಮಾಡುತ್ತಿದ್ದಾರೆ. ಇದು ಎಲ್ಲರ ಸಮಸ್ಯೆಯೂ ಆಗಿದೆ’ ಎಂದು ಹೋಟೆಲ್‌ ಉದ್ಯಮದ ಸಂಕಷ್ಟವನ್ನು ವಿವರಿಸುತ್ತಾರೆ ಅವರು.

‘ಕೋವಿಡ್‌ನಿಂದಾಗಿ ತುಂಬಾ ನಷ್ಟವಾಗಿದೆ. ಕಳೆದ ವರ್ಷ ಈ ವೇಳೆಗೆ ಶೇ 80ರಷ್ಟು ಕೊಠಡಿಗಳು ಬುಕ್‌ ಆಗಿದ್ದವು. ಈ ದಸರಾದಲ್ಲಿ ಸುಮಾರು ₹45 ಲಕ್ಷ ನಷ್ಟವಾದರೂ ಆಶ್ಚರ್ಯವಿಲ್ಲ’ ಎಂದು ಮೇಟಗಳ್ಳಿಯ ಜೆ.ಕೆ.ಗೋಲ್ಡನ್‌ ಎಂಬೆಸ್ಸಿ ಹೋಟೆಲ್‌ನ ಆಡಳಿತ ಮಂಡಳಿಯವರು ತಿಳಿಸಿದರು.

‘ಕೋವಿಡ್‌ನಿಂದಾಗಿ ಶೇ 10ರಷ್ಟು ಮಾತ್ರ ಆನ್‌ಲೈನ್‌ ಬುಕ್ಕಿಂಗ್‌ ಆಗುತ್ತಿದೆ. 100 ರೂಂಗಳಿದ್ದರೆ 10 ರೂಂಗಳಷ್ಟೇ ಬುಕ್‌ ಆಗಿವೆ. ಕಚೇರಿ ಕೆಲಸಕ್ಕೆ ಬರುವ ಅಕ್ಕಪಕ್ಕದ ಜಿಲ್ಲೆಯವರು ಮಾತ್ರ ಇದ್ದಾರೆ. ಹೊರಗಿನವರ ಸಂಖ್ಯೆ ತೀರಾ ಕಡಿಮೆಯಾಗಿದೆ. ಪ್ರವಾಸೋದ್ಯಮ ದಿನದ (ಸೆ.27) ಒಳಗಾಗಿ ಉದ್ಯಮ ಚೇತರಿಕೆಗಾಗಿ ವಿಶೇಷ ಕಾರ್ಯಕ್ರಮ ರೂಪಿಸಲು ಯೋಜಿಸಿದ್ದೇವೆ’ ಎಂದು ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ‘‍ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು