ಗುರುವಾರ , ನವೆಂಬರ್ 14, 2019
19 °C
ಉಪಮುಖ್ಯಮಂತ್ರಿ ಹೇಳಿಕೆ

ಕಾಶ್ಮೀರದಲ್ಲಿ ಇನ್ನು ಮುಂದೆ ‘ಆಜಾದಿ’ ಮೊಳಗದು!: ಡಾ.ಸಿ.ಎನ್.ಅಶ್ವತ್ಥನಾರಾಯಣ

Published:
Updated:
Prajavani

ಮೈಸೂರು: ‘ಆಜಾದಿ’ ಎಂಬ ಪದ ಇನ್ನು ಮುಂದೆ ಜಮ್ಮು ಮತ್ತು ಕಾಶ್ಮೀರದಲ್ಲಿ ಮೊಳಗುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು.

‘ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶಗಳಾಗಿದ್ದು, ಕೇಂದ್ರದ ನೇರ ಹಿಡಿತದಲ್ಲಿವೆ. ಅಲ್ಲಿ ಇನ್ನು ಮುಂದೆ ಶಾಂತಿ ನೆಲೆಸಲಿದ್ದು, ಅಭಿವೃದ್ಧಿ ದಾಪುಗಾಲಿಡಲಿದೆ’ ಎಂದರು.

‘ಒಂದು ದೇಶ– ಒಂದು ಸಂವಿಧಾನ’ ಘೋಷಣೆಯಡಿ ಮೈಸೂರಿನಲ್ಲಿ ಶುಕ್ರವಾರ ಆಯೋಜಿಸಿದ್ದ ‘ರಾಷ್ಟ್ರೀಯ ಐಕ್ಯತಾ ಅಭಿಯಾನ’ದ ಜನಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ‘ದೇಶದ ಅಖಂಡತೆಯ ಸವಾಲು ಇದೀಗ ಬಗೆಹರಿದಿದ್ದು, ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂಬ ಸಂದೇಶ ಇಡೀ ವಿಶ್ವಕ್ಕೆ ರವಾನೆಯಾಗಿದೆ. ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಲಾಗಿದೆ’ ಎಂದರು.

‘ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವಿಕೆ, ರಾಮಮಂದಿರ ನಿರ್ಮಾಣ, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷಾಧಿಕಾರ ಒದಗಿಸಿದ್ದ 370ನೇ ವಿಧಿ ರದ್ದುಗೊಳಿಸುವುದು ಬಿಜೆಪಿಯ ಚುನಾವಣಾ ಪ್ರಣಾಳಿಕೆಯ ಪ್ರಮುಖ ಅಂಶಗಳಾಗಿದ್ದವು. ಇವು ಕಾರ್ಯರೂಪಕ್ಕೆ ಬರುವುದಿಲ್ಲ ಎಂಬುದೇ ಹಲವರ ಅನಿಸಿಕೆಯಾಗಿತ್ತು. ಇದೀಗ ಒಂದೊಂದೇ ಜಾರಿಗೊಳ್ಳುತ್ತಿವೆ. ಬಿಜೆಪಿ ಕಾರ್ಯಕರ್ತರು, ಮುಖಂಡರು ಎಲ್ಲೆಡೆ ಸಭೆ ನಡೆಸಿ ಈ ವಿಷಯವನ್ನು ಜನರಿಗೆ ಮನದಟ್ಟು ಮಾಡಿಕೊಡಬೇಕಿದೆ’ ಎಂದು ಹೇಳಿದರು.

ಮುಂದಿದೆ ಪಿಒಕೆ ವಿಮೋಚನೆ

‘370ನೇ ವಿಧಿ ರದ್ದಾಗಿದ್ದು ಆರಂಭ. ಪಾಕ್‌ ಆಕ್ರಮಿತ ಕಾಶ್ಮೀರ (ಪಿಒಕೆ) ವಿಮೋಚನೆ ಮುಂದಿದೆ’ ಎಂದು ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ರಮೇಶ್‌ ಹೇಳಿದರು.

‘ತಮಗೆ ಜನ ಮುಖ್ಯ ಎಂದು ರಾಹುಲ್‌ಗಾಂಧಿ ಹೇಳುತ್ತಾರೆ. ನಮಗೆ ನೆಲವೂ ಮುಖ್ಯ’ ಎಂದ ಅವರು, ‘ ಕ್ರಿಶ್ಚಿಯನ್ನರಿಗೆ ನೂರಾರು ದೇಶಗಳಿವೆ. ಮುಸ್ಲಿಮರಿಗೆ 54 ದೇಶಗಳಿವೆ. ನಮ್ಮ ನೆಲವನ್ನು ಕಳೆದುಕೊಂಡರೆ ನೀ ಎಲ್ಲಿಗ್ಹೋಗ್ತೀಯೋ ಮಾರಾಯ?’ ಎಂದು ಗೇಲಿ ಮಾಡಿದರು.

ಪ್ರತಿಕ್ರಿಯಿಸಿ (+)