ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನುಷ್ಯರಿಗೆ ಏಕೆ ಬಾಲ ಇಲ್ಲ..?

ಮೈಸೂರು ವಿ.ವಿ ವಿಜ್ಞಾನ ಅಭಿವೃದ್ಧಿ ಸಮಿತಿಯಿಂದ ಮಕ್ಕಳೊಂದಿಗೆ ಸಂವಾದ
Last Updated 2 ಜೂನ್ 2019, 9:51 IST
ಅಕ್ಷರ ಗಾತ್ರ

ಮೈಸೂರು: ಪ್ರಾಣಿಗಳೂ ಮನುಷ್ಯರಂತೆ ಯೋಚನೆ ಮಾಡುತ್ತವೆಯೇ..? ‌ಮನು ಷ್ಯರಿಗೆ ಏಕೆ ಬಾಲ ಇಲ್ಲ..? ಬೆಕ್ಕುಗಳು ದ್ರಾವಣದ ರೀತಿಯೇ..? ಬೆಳಕಿನ ಕಿರಣಗಳೇಕೇ ನೇರವಾಗಿರುತ್ತವೆ..?

–ಮೈಸೂರು ವಿಶ್ವವಿದ್ಯಾಲಯ ಸ್ಥಾಪಿ ಸಿರುವ ‘ಶಾಲೆಗಳಲ್ಲಿ ವಿಜ್ಞಾನ ಅಭಿವೃದ್ಧಿ ಸಮಿತಿ’ಯು ಶನಿವಾರ ವಿಜ್ಞಾನ ಭವನದಲ್ಲಿ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳು ಎತ್ತಿದ ಪ್ರಶ್ನೆಗಳು ಇವು. ಅದಕ್ಕೆ ನಿವೃತ್ತ ಹಾಗೂ ಹಾಲಿ ಪ್ರಾಧ್ಯಾ ಪಕರು ಉದಾಹರಣೆಗಳೊಂದಿಗೆ ಅರ್ಥ ವಾಗುವ ರೀತಿಯಲ್ಲಿ ವಿವರಿಸಿದರು.

‘ಮನುಷ್ಯರಿಗೆ ಏಕೆ ಬಾಲ ಇಲ್ಲ’ ಎಂಬ ವಿದ್ಯಾರ್ಥಿಯ ಪ್ರಶ್ನೆಗೆ ‘ಮನು ಷ್ಯರಿಗೂ ಸಣ್ಣದಾಗಿ ಬಾಲದ ಮೂಳೆ ಇದೆ. ಆದರೆ, ಪ್ರಾಣಿಗಳಂತೆ ಇಲ್ಲ. ತೀರಾ ಸಣ್ಣದು. ನೀರಿನಿಂದ ಜೀವ ಉಗಮವಾಗಿ ಭೂಮಿ ಮೇಲೆ ಬರುವ ಹಂತದ ಜೀವ ವಿಕಾಸ ಪ್ರಕ್ರಿಯೆಯಲ್ಲಿ ಈ ಬದಲಾವಣೆ ಆಗಿದೆ’ ಎಂದು ನಿವೃತ್ತ ಪ್ರಾಧ್ಯಾಪಕ ಡಾ.ರಮೇಶ್‌ ರಾಮ್‌ ಉತ್ತರಿಸಿದರು.

‘ಪ್ರಾಣಿಗಳೂ ಮನುಷ್ಯರಂತೆ ಯೋಚನೆ ಮಾಡುತ್ತವೆಯೇ’ ಎಂಬ ಪ್ರಶ್ನೆಗೆ, ‘ಪ್ರಾಣಿಗಳು ಕೂಡ ಯೋಚನೆ ಮಾಡುತ್ತವೆ, ಹೊಸ ವಿಚಾರ ಕಲಿಯುತ್ತವೆ. ಅದಕ್ಕೊಂದು ಉದಾಹರಣೆ ಚಿಂಪಾಂಜಿ. ಆದರೆ, ಮನುಷ್ಯನಂತೆ ಯೋಚನೆ ಮಾಡುವ ಸಾಮರ್ಥ್ಯವನ್ನು ಪ್ರಾಣಿಗಳು ಹೊಂದಿಲ್ಲ. ದಿನಗಳು ಕಳೆದಂತೆ ಮನುಷ್ಯನ ಯೋಚಿಸುವ ಸಾಮರ್ಥ್ಯ ವೃದ್ಧಿಯಾಗುತ್ತಿದೆ’ ಎಂದರು.

‌‘ಬೆಕ್ಕುಗಳು ದ್ರಾವಣದ ರೀತಿಯೇ’ ಎಂದು ವಿದ್ಯಾರ್ಥಿನಿ ಕೇಳಿದ ಪ್ರಶ್ನೆ ತಜ್ಞರನ್ನೇ ಕೆಲಕಾಲ ದಂಗಾಗಿಸಿತು. ವಿದ್ಯಾರ್ಥಿನಿಯೇ ತಪ್ಪಾಗಿ ಪ್ರಶ್ನೆ ಕೇಳಿರಬಹುದೆಂದು ಭಾವಿಸಿ ಮತ್ತೊಮ್ಮೆ ಸ್ಪಷ್ಟವಾಗಿ ಹೇಳುವಂತೆ ಕೋರಿದರು. ಆ ಬಾಲಕಿ ಮತ್ತೆ ಅದೇ ಪ್ರಶ್ನೆ ಕೇಳಿದಳು.

ಉತ್ತರ ಯಾರಿಗೂ ಗೊತ್ತಾಗಲಿಲ್ಲ. ಗೂಗಲ್‌ ಸರ್ಚ್‌ನಲ್ಲಿ ನೋಡಿದಾಗ ಅದು ನಿಜ! ದೇಹದ ಸ್ವರೂಪ ದ್ರಾವಣದ ರೀತಿ ಹೊಂದಿಕೊಳ್ಳುವ ಸ್ವಭಾವ ಹೊಂದಿರುತ್ತದೆ. ಉದಾಹರಣೆಗೆ ಯಾವುದೇ ಬಟ್ಟಲು, ಬಾಟಲಿ, ಲೋಟಕ್ಕೆ ಸುರಿದಾಗ ಅವುಗಳ ಆಕಾರವನ್ನು ದ್ರಾವಣ ಪಡೆದುಕೊಳ್ಳುತ್ತದೆ. ಹಾಗೆಯೇ, ಬೆಕ್ಕುಗಳು ಕೂಡ ಬಟ್ಟಲಿನೊಳಗೆ ಕೂರಬಲ್ಲವು. ಅದರ ಆಕಾರಕ್ಕೆ ಹೊಂದಿಕೊಳ್ಳಬಲ್ಲವು.

‘ಬೆಳಕಿನ ಕಿರಣಗಳೇಕೇ ನೇರವಾಗಿರುತ್ತವೆ’ ಎಂಬ ಪ್ರಶ್ನೆಗೆ ಇದಕ್ಕಿನ್ನೂ ನಿಖರವಾದ ಉತ್ತರ ಸಿಕ್ಕಿಲ್ಲ. ಬೆಳಕು ವಕ್ರವಾಗಿಯೂ ಚಲಿಸಬಲ್ಲದು. ಆದರೆ, ಈ ಸಂಬಂಧ ಸಂಶೋಧನೆ ಮಾಡಲು ಇನ್ನೂ ಅವಕಾಶವಿದೆ ಎಂದು ಹೇಳಿದರು.

ಮಕ್ಕಳಲ್ಲಿ ವಿಜ್ಞಾನ ಹಾಗೂ ಗಣಿತ ವಿಷಯಗಳಲ್ಲಿ ಆಸಕ್ತಿ ಮೂಡಿಸಲು ಪ್ರತಿ ತಿಂಗಳ ಮೊದಲನೇ ಶನಿವಾರ ಈ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ವಿಜ್ಞಾನ ಕ್ಷೇತ್ರದ ತಜ್ಞರು ಮಕ್ಕಳಿಗೆ ವಿವಿಧ ವಿಷಯಗಳ ಬಗ್ಗೆ ತಿಳಿಸಿಕೊಡುತ್ತಾರೆ. ಕ್ರೈಸ್ಟ್‌ ಪಬ್ಲಿಕ್‌ ಶಾಲೆ, ಕೇಂದ್ರೀಯ ವಿದ್ಯಾಲಯ, ಮಹಾಜನ ಶಾಲೆಯ ಮಕ್ಕಳು ಪಾಲ್ಗೊಂಡಿದ್ದರು.

ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ಎ.ವಿ.ಗೋಪಾಲರಾವ್‌, ಡಾ.ರಮೇಶ್‌ ರಾಮ್‌, ಡಾ.ಪಿ.ವೆಂಕಟರಾಮಯ್ಯ, ಪ್ರಾಧ್ಯಾಪಕರಾದ ಡಾ.ಚಂದ್ರಶೇಖರ್‌, ಡಾ.ಕೆ.ವಿ.ಮಲ್ಲೇಶ್‌, ವಿಜ್ಞಾನಿ ಡಾ.ಭಾಗ್ಯಲಕ್ಷ್ಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT