ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಕೂಲಿಗೂ ಹೋಗಲಾಗ್ತಿಲ್ಲ; ದಿನ ದೂಡಲಾಗ್ತಿಲ್ಲ

ಮಕ್ಕಳಿಬ್ಬರೂ ಹಾಲು ಎಂದೊಡನೆ ಜೀವವೇ ಹೋದಂತಾಗುತ್ತದೆ... ಬದುಕು ಭಾರವಾಗ್ತಿದೆ...
Last Updated 27 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಮೈಸೂರು: ಹೊಲ–ತೋಟ–ಮನೆ ಇಲ್ಲದಿದ್ದರೂ ಕೂಲಿ ಮಾಡ್ಕೊಂಡು ಬದುಕು ಕಟ್ಟಿಕೊಂಡಿದ್ವಿ. ಸಂಸಾರವೂ ನಡೆದಿತ್ತು. ಹುಟ್ಟಿದ ಮಕ್ಕಳಿಬ್ಬರೂ ವರ್ಷ ಗತಿಸುವುದರೊಳಗಾಗಿ ದೇಹದ ಸ್ವಾಧೀನ ಕಳೆದುಕೊಂಡರು. ಸರ್ಕಾರಿ–ಖಾಸಗಿ ಆಸ್ಪತ್ರೆಗಳಿಗೆ ಅಲೆದಾಡಿದೆ. ಕಿಂಚಿತ್ ಪ್ರಯೋಜನವಾಗಲಿಲ್ಲ... ₹ 7 ಲಕ್ಷದಿಂದ ₹ 8 ಲಕ್ಷ ಸಾಲವಾಯಿತಷ್ಟೇ...

ಕಾಲ ಗತಿಸಿದಂತೆ ಮಕ್ಕಳಿಬ್ಬರ ದೇಹದ ಬೆಳವಣಿಗೆಯಾಯ್ತು. ಇಬ್ಬರಿಗೂ ಮಾತು ಬರಲಿಲ್ಲ. ದೇಹದಲ್ಲಿ ಶಕ್ತಿ ಬಲವರ್ಧನೆಗೊಳ್ಳಲಿಲ್ಲ. ಇಂದಿಗೂ ಹಾಸಿಗೆಯಲ್ಲೇ ಎಲ್ಲ. ಮಗಳು ಸರಿತಾ ಪುಟ್ಟಿಗೆ ಇದೀಗ 18ರ ಹರೆಯ. ಮಗ ಸುನೀಲಕುಮಾರನಿಗೆ 16ರ ಪ್ರಾಯ. ಬೆಳಗಾದರೆ ಇದನ್ನೇ ನೋಡುವ ನಮಗೆ ಕರುಳು ಕಿತ್ತು ಬಂದಂತಾಗುತ್ತದೆ.

ಏನೇ ಆದರೂ ಇವರನ್ನು ನೋಡಿಕೊಳ್ಳೋದೇ ನಮ್ಮ ನಿತ್ಯದ ಕಾಯಕವಾಗಿದೆ. ಬೇಕು–ಬೇಡಗಳನ್ನು ಹೇಳಲ್ಲ. ಆಯಾ ಹೊತ್ತಿಗೆ ಊಟ–ತಿಂಡಿ–ನೀರು–ಹಾಲು ಕೊಡ್ತೀವಿ. ಅಪರೂಪಕ್ಕೊಮ್ಮೆ ಯಾವಾಗಲಾದರೂ ಹಾಲು ಬೇಕು ಎಂದು ಮಕ್ಕಳು ಸನ್ನೆ ಮಾಡುತ್ತಿದ್ದಂತೆ, ಜೀವವೇ ಹೋದಂತಾಗುತ್ತದೆ. ಹೆಚ್ಚಿಗೆ ಹಾಲು ಖರೀದಿಗೆ ನಮ್ಮ ಬಳಿ ನಯಾಪೈಸೆಯೂ ಇರಲ್ಲ ಎಂದು ಸರಗೂರು ತಾಲ್ಲೂಕಿನ ಮುಳ್ಳೂರು ಗ್ರಾಮದ ಸಿದ್ದರಾಜಾಚಾರಿ–ನಾಗಮ್ಮ ದಂಪತಿ ‘ಪ್ರಜಾವಾಣಿ’ ಬಳಿ ಗದ್ಗದಿತರಾದರು.

‘ಹಾಸಿಗೆಯಲ್ಲೇ ದಿನ ಕಳೆಯುವ ಮಕ್ಕಳನ್ನು ಬಿಟ್ಟು ಕೂಲಿಗೂ ಹೋಗಲಾಗ್ತಿಲ್ಲ. ಮನೆ ಬಳಿಯೇ ಸಿಗುವ ಕೂಲಿ ಕೆಲಸ ಮಾಡಿಕೊಂಡು ಬದುಕು ಕಳೆಯುತ್ತಿದ್ದೇವೆ. ಸೊಸೈಟಿ ಅಕ್ಕಿಯೇ ಆಸರೆಯಾಗಿದೆ. ಇದರ ಜೊತೆಗೆ ಮಕ್ಕಳಿಬ್ಬರಿಗೂ ತಿಂಗಳಿಗೊಮ್ಮೆ ಬರುವ ಅಂಗವಿಕಲರ ಪಿಂಚಣಿಯೇ (ತಲಾ ₹ 1200) ನಮ್ಮ ಜೀವನಕ್ಕಾಧಾರವಾಗಿದೆ. ಸ್ವಂತ ಮನೆಯೂ ಇಲ್ಲ. ಸರ್ಕಾರ ನೀಡಿದ ₹ 1.20 ಲಕ್ಷ ಅನುದಾನದಲ್ಲಿ ಅರ್ಧಂಬರ್ಧ ಕಟ್ಟಿದ್ದೇವೆ. ಇಂದಿಗೂ ಪ್ರತಿ ತಿಂಗಳು ₹ 1600 ಮನೆ ಬಾಡಿಗೆ ಹೊಂದಿಸಲು ಹರಸಾಹಸ ನಡೆಸಬೇಕಿದೆ’ ಎಂದು ಸಿದ್ದರಾಜಾಚಾರಿ ತಮ್ಮ ಕುಟುಂಬದ ಪರಿಸ್ಥಿತಿಯನ್ನು ಬಿಚ್ಚಿಟ್ಟರು.

‘ಅರ್ಧಂಬರ್ಧ ಆಗಿರುವ ಮನೆಯನ್ನು ಪೂರ್ಣಗೊಳಿಸಲು ಅನುದಾನ ಅಥವಾ ನೆರವು ದೊರೆತರೆ, ಪ್ರತಿ ತಿಂಗಳು ಬಾಡಿಗೆ ಕಟ್ಟುವುದಾದರೂ ತಪ್ಪುತ್ತೆ. ಇದ್ದಿದ್ದರಲ್ಲೇ ಮಕ್ಕಳನ್ನು ಸಾಕಿಕೊಂಡು ಬದುಕು ಕಳೆಯುತ್ತೇವೆ. ಸಾಲ ವಾಪಸ್ ಕೇಳುವವರಿಗೆ ಏನೆಂದು ಹೇಳಬೇಕು ಎಂಬುದೇ ತೋಚದಾಗಿದೆ. ನಿತ್ಯವೂ ಬದುಕು ಭಾರವಾಗ್ತಲೇ ಇದೆ. ದಿಕ್ಕು ತೋಚದ ಸ್ಥಿತಿ ನಮ್ಮದು’ ಎಂದು ದಂಪತಿ ಕಣ್ಣೀರಿಟ್ಟರು.

ನೆರವಿನ ಮೊರೆಗೆ ಸ್ಪಂದನೆಯೇ ಸಿಗ್ತಿಲ್ಲ: ಅಳಲು

‘ಸಿದ್ದರಾಮಯ್ಯ ಮುಖ್ಯಮಂತ್ರಿಯಿದ್ದಾಗ ಊರವರ ಮಾತು ಕೇಳಿಕೊಂಡು ಬಾಡಿಗೆ ಕಾರು ಮಾಡಿಕೊಂಡು, ಮೈಸೂರಿನಲ್ಲಿರುವ ಅವರ ಮನೆ ಬಾಗಿಲಿಗೆ ಹೋಗಿದ್ದೆ. ಪ್ರಯೋಜನವಾಗಲಿಲ್ಲ. ನಮ್ಮೂರ ಸಮೀಪದ ಚಿಕ್ಕದೇವಮ್ಮ ಬೆಟ್ಟಕ್ಕೆ ಶ್ರೀರಾಮುಲು, ಶೋಭಾ ಕರಂದ್ಲಾಜೆ ಬಂದಿದ್ದರು. ಅಲ್ಲಿಗೂ ಮಕ್ಕಳನ್ನು ಕರೆದೊಯ್ದು ನೆರವಿಗಾಗಿ ಅಂಗಲಾಚಿದೆ. ನೋಡೋಣ ಅಂದ್ರು ಅಷ್ಟೇ. ನನಗೆ ಚಿಕ್ಕಾಸಿನ ನೆರವು ದೊರಕಲಿಲ್ಲ’ ಎಂದು ಸಿದ್ದರಾಜಾಚಾರಿ ನೋವಿನಿಂದ ನುಡಿದರು.

‘ಕುಮಾರಸ್ವಾಮಿ ಒಮ್ಮೆ ಚಿಕ್ಕದೇವಮ್ಮ ಬೆಟ್ಟಕ್ಕೆ ಬಂದಿದ್ದರು. ಅವರಲ್ಲಿ ಮನವಿ ಮಾಡಿಕೊಂಡೆ. ನಾನು ಅಧಿಕಾರದಲ್ಲಿ ಇಲ್ಲಪ್ಪ. ಅಧಿಕಾರಕ್ಕೆ ಬಂದಾಗ ಖಂಡಿತಾ ಸಹಾಯ ಮಾಡುವೆ ಎಂದರು. ವೈಯಕ್ತಿಕವಾಗಿ ₹ 2 ಲಕ್ಷ ಕೊಡುವುದಾಗಿ ಹೇಳಿದರು. ಅದರಂತೆ ಮಂಡ್ಯದಲ್ಲಿ ತಮ್ಮ ಪುತ್ರ ನಿಖಿಲ್ ಅವರ ಜಾಗ್ವಾರ್ ಸಿನಿಮಾದ ಕಾರ್ಯಕ್ರಮಕ್ಕೆ ಕರೆಸಿಕೊಂಡು ದುಡ್ಡು ಕೊಟ್ಟರು. ಈ ಸುದ್ದಿ ತಿಳಿದ ಸಾಲಗಾರರು ಬೆಳಿಗ್ಗೆಯೇ ಮನೆಗೆ ಬಂದು ಎಲ್ಲವನ್ನೂ ಇಸ್ಕೊಂಡ್ರು. ನಾನು ₹ 15 ಸಾವಿರವನ್ನಷ್ಟೇ ಮಕ್ಕಳಿಗೆ ಖರ್ಚು ಮಾಡಿದೆ’ ಎಂದು ಅವರು ಗದ್ಗದಿತರಾದರು.

‘ಸಿದ್ದರಾಮಯ್ಯ ಮನೆಗೋಗಿದ್ದಾಗ ಕರ್ತವ್ಯದಲ್ಲಿದ್ದ ಪೊಲೀಸ್ ಇನ್‌ಸ್ಪೆಕ್ಟರ್‌ ಪೂವಯ್ಯ ನನ್ನ ಸ್ಥಿತಿ ನೋಡಲಾಗದೆ ₹ 2 ಸಾವಿರ ಕೊಟ್ಟರು. ಗೌರಿ ಹಬ್ಬದ ಸಮಯದಲ್ಲಿ ಕರೆಸಿಕೊಂಡು ಮಕ್ಕಳಿಗೆ ಬಟ್ಟೆ ಕೊಡಿಸಿದ್ದರು. ಹಬ್ಬ ಮಾಡು ಎಂದು ₹ 5 ಸಾವಿರ ಕೊಟ್ಟರು. ಆಗಷ್ಟೇ ನಮ್ಮನೆಯಲ್ಲಿ ಹಬ್ಬ ನಡೆದಿದ್ದು. ಮನೆ ಅರ್ಧಕ್ಕೆ ನಿಂತಿದ್ದು ಗೊತ್ತಾಗಿ ಶೀಟ್‌ ಕೊಡಿಸಿದರು. ಬೆಂಗಳೂರಿನ ಅಶೋಕ ರೆಡ್ಡಿ ಎಂಬುವವರು ಎಲೆಕ್ಟ್ರಿಕ್‌ ವೈರಿಂಗ್ ಸಾಮಗ್ರಿ ಕೊಡಿಸಿದ್ದಾರೆ. ಅವನ್ನು ಹಾಕಿಸಲು ನನಗೆ ಶಕ್ತಿ
ಇಲ್ಲವಾಗಿದೆ’ ಎಂದು ಸಿದ್ದರಾಜಾಚಾರಿ ಅಳಲು ತೋಡಿಕೊಂಡರು.

ಮಾಹಿತಿಗಾಗಿ: ಖಾತೆದಾರರ ಹೆಸರು–ಸಿದ್ದರಾಜಾಚಾರಿ, ಉಳಿತಾಯ ಖಾತೆ–4343101009154, ಐಎಫ್‌ಎಸ್‌ಸಿ ಕೋಡ್‌–ಸಿಎನ್‌ಆರ್‌ಬಿ 0004343, ಕೆನರಾ ಬ್ಯಾಂಕ್‌, ಸರಗೂರು ಶಾಖೆ. ಸಂಪರ್ಕ ಸಂಖ್ಯೆ–8197221531.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT