ರಾತ್ರಿ ಸಂಚಾರ ನಿಷೇಧ ತೆರವು ಇಲ್ಲ

7
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ: ಅರಣ್ಯ ಸಚಿವ ಶಂಕರ್‌ ಸ್ಪಷ್ಟನೆ

ರಾತ್ರಿ ಸಂಚಾರ ನಿಷೇಧ ತೆರವು ಇಲ್ಲ

Published:
Updated:
Deccan Herald

ಮೈಸೂರು: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯ ರಾತ್ರಿ ಸಂಚಾರ ನಿಷೇಧ ತೆರವುಗೊಳಿಸುವುದಿಲ್ಲ ಎಂದು ಅರಣ್ಯ ಮತ್ತು ಪರಿಸರ ಸಚಿವ ಆರ್‌.ಶಂಕರ್‌ ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವಾಲಯವು ರಾತ್ರಿ ಸಂಚಾರಕ್ಕೆ ಅನುವು ನೀಡುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುತ್ತಿದೆ ಎಂಬ ಮಾತುಗಳು ಕೇಳಿಬಂದಿರುವ ಬೆನ್ನಲ್ಲೇ ಸಚಿವರು ಈ ಹೇಳಿಕೆ ನೀಡಿದ್ದಾರೆ.

ಮೈಸೂರಿನಲ್ಲಿ ಶುಕ್ರವಾರ ಸುದ್ದಿಗಾರರ ಜತೆ ಮಾತನಾಡಿ, ರಾತ್ರಿ ಸಂಚಾರಕ್ಕೆ ಅನುವು ನೀಡುವುದನ್ನು ಪರಿಶೀಲಿಸುವಂತೆ ಕೋರಿ ಕೇಂದ್ರ ಸರ್ಕಾರದಿಂದ ಪ್ರಸ್ತಾವನೆ ಬಂದಿತ್ತು. ಅದನ್ನು ತಿರಸ್ಕರಿಸಿ ವಾಪಸ್‌ ಕಳುಹಿಸಿದ್ದೇವೆ ಎಂದರು.

ಕೇರಳ ಸರ್ಕಾರದ ಮನವಿಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರಲ್ಲವೇ ಎಂಬ ಪ್ರಶ್ನೆಗೆ, ಕೇರಳ ಸರ್ಕಾರ ಹಲವು ವರ್ಷಗಳಿಂದ ಒತ್ತಡ ಹಾಕುತ್ತಿದೆ. ಅವರ ಮನವಿಗೆ ಮುಖ್ಯಮಂತ್ರಿ ನೋಡೋಣ ಎಂದಷ್ಟೇ ಹೇಳಿರಬಹುದು ಎಂದು ಉತ್ತರಿಸಿದರು.

‘ಬಂಡೀಪುರ ಹೆದ್ದಾರಿಯಲ್ಲಿ ಮೇಲ್ಸೇತುವೆ ನಿರ್ಮಿಸುವುದಕ್ಕೆ ವಿರೋಧವಿದೆ. ಸರ್ಕಾರವು ಹುಣಸೂರು–ಗೋಣಿಕೊಪ್ಪ– ಕುಟ್ಟ ಮಾರ್ಗವಾಗಿ ₹ 75 ಕೋಟಿ ವ್ಯಯಿಸಿ ಪರ್ಯಾಯ ರಸ್ತೆ ಅಭಿವೃದ್ಧಿಪಡಿಸಿದೆ. ಆದ್ದರಿಂದ ಮೇಲ್ಸೇತುವೆ ಅಗತ್ಯವಿಲ್ಲ ಎಂಬುದು ನನ್ನ ಅನಿಸಿಕೆ’ ಎಂದರು.

ಮೇಲ್ಸೇತುವೆ ಕಾಮಗಾರಿ ಕೈಗೆತ್ತಿಕೊಂಡರೆ ಅದು ಪೂರ್ಣಗೊಳ್ಳಲು 2–3 ವರ್ಷಗಳು ಬೇಕು. ಈ ಅವಧಿಯಲ್ಲಿ ಪ್ರಾಣಿಗಳಿಗೆ ಸಾಕಷ್ಟು ತೊಂದರೆಯಾಗುತ್ತದೆ ಎಂದು ಹೇಳಿದರು.

ಬಂಡೀಪುರ ಮೂಲಕ ಹಾದು ಹೋಗುವ ಹೆದ್ದಾರಿಯಲ್ಲಿ ಮೇಲ್ಸೇತುವೆ ನಿರ್ಮಿಸುವ ಕುರಿತು ಚಿಂತಿಸಲಾಗುತ್ತಿದೆ ಎಂದು ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಇತ್ತೀಚೆಗೆ ಹೇಳಿದ್ದರು.

Tags: 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !