ಶನಿವಾರ, ಸೆಪ್ಟೆಂಬರ್ 25, 2021
29 °C
ಪ್ರತಿಭಟನೆಗೆ ವಿಶ್ವವಿದ್ಯಾನಿಲಯದ ಸಂಶೋಧಕರ ಸಂಘ ಬೆಂಬಲ

ಎನ್‌ಟಿಎಂ: ಮುಂದುವರಿದ ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಇಲ್ಲಿನ ಎನ್‌ಟಿಎಂ ಶಾಲೆ ಉಳಿಸಲು ಆಗ್ರಹಿಸಿ ಮಹಾರಾಣಿ ಮಾದರಿ (ಎನ್‌ಟಿಎಂ) ಶಾಲೆ ಉಳಿಸಿ ಹೋರಾಟ ಒಕ್ಕೂಟದ ಸದಸ್ಯರು ನಡೆಸುತ್ತಿರುವ ಪ್ರತಿಭಟನೆಗೆ ಮೈಸೂರು ವಿಶ್ವವಿದ್ಯಾನಿಲಯದ ಸಂಶೋಧಕರ ಸಂಘವು ಬೆಂಬಲ ಸೂಚಿಸಿದೆ.

ಉಭಯ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಶಾಲೆ ಉಳಿಸಬೇಕು ಎಂದು ಆಗ್ರಹಿಸಿ ಧರಣಿ ನಡೆಸಿದರು. ಪ್ರತಿಭಟನಾಕಾರರು, ಹೋರಾಟಗೀತೆಗಳನ್ನು ಹಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಸಂಘದ ಅಧ್ಯಕ್ಷ ಮಹೇಶ್‍ಸೋಸಲೆ, ಉಪಾಧ್ಯಕ್ಷ ಡಿ.ಕೆ.ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಸಂದೀಪ್ ಎಸ್.ರಾವಣೀ
ಕರ್, ಹೋರಾಟಗಾರರಾದ ಪ.ಮಲ್ಲೇಶ್, ಸ.ರ.ಸುದರ್ಶನ್, ಪುರುಷೋತ್ತಮ್, ತಾಯೂರು ವಿಠ್ಠಲಮೂರ್ತಿ, ಮಾಳವಿಕ ಗುಬ್ಬಿವಾಣಿ ಇದ್ದರು.

ನಿರಂಜನ ಮಠಕ್ಕಾಗಿ ದೇಶವ್ಯಾಪಿ ಹೋರಾಟಕ್ಕೆ ಕರೆ: ನಿರಂಜನ ಮಠವನ್ನು ವೀರಶೈವ ಲಿಂಗಾಯತ ಸಮುದಾಯಕ್ಕೆ ಬಿಟ್ಟು ಕೊಡದಿದ್ದರೆ ದೇಶವ್ಯಾಪಿ ಪ್ರತಿಭಟನೆ ನಡೆಸಲಾಗುವುದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ
ಸಭಾದ ರಾಷ್ಟ್ರೀಯ ಯುವ ಘಟಕದ ಮಹಾತೇಂಶ್ ಪಾಟೇಲ್ ಎಚ್ಚರಿಕೆ ನೀಡಿದರು.

ಮಠದ ಆವರಣಕ್ಕೆ ಗುರುವಾರ ಭೇಟಿ ನೀಡಿದ ಅವರು ‘ಒಂದು ಮಠ ಮತ್ತೊಂದು ಮಠವಾಗಿ ಪರಿವರ್ತನೆಯಾಗುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

ವೀರಶೈವ ಲಿಂಗಾಯತ ಸಮುದಾ
ಯದ ಮೇಲಿನ ಈ ದೌರ್ಜನ್ಯದ ವಿರುದ್ಧ ಉಳಿದ ಸಮುದಾಯದವರು ದನಿ ಎತ್ತ
ಬೇಕು. ವಿವೇಕಾನಂದ ಅವರು ಎಲ್ಲೆಲ್ಲಿ ಉಳಿದುಕೊಂಡಿದ್ದರೋ ಅಲ್ಲೆಲ್ಲ ಇಂತಹ ಸಮಸ್ಯೆ ತಲೆದೋರುತ್ತದೆ ಎಂದರು.

ಮಹಾಸಭಾ ಜಿಲ್ಲಾ ಕಾರ್ಯಕಾರಿ ಸಮಿತಿಯ ಲೋಕೇಶ್ ತುಂಬಲ ಅವರು ಮಾತನಾಡಿ, ನಿರಂಜನಮಠದ ಖಾಲಿ ಜಾಗದಲ್ಲಿ ಅವಶೇಷಗಳನ್ನು ಪುನರ್‌ನಿರ್ಮಾಣ ಮಾಡಿಕೊಂಡು ಹೊಸದಾಗಿ ಸ್ಮಾರಕ ನಿರ್ಮಿಸುತ್ತೇವೆ ಎಂದು ಪ್ರತಿಪಾದಿಸಿದರು.

ಮುಖಂಡರಾಧ ಕೆ.ವಿ.ಬಸವರಾಜು, ಶಿವಕುಮಾರ್,  ಮಹದೇವಪ್ಪ
ಇದ್ದರು.

ವಿವೇಕ ಸ್ಮಾರಕಕ್ಕೆ ವಿರೋಧ; ಮೈಸೂರಿಗೆ ಕಪ್ಪು ಚುಕ್ಕೆ– ಡಾ.ಕೆ.ಚಿದಾನಂದ ಗೌಡ

ಮೈಸೂರು: ವಿವೇಕ ಸ್ಮಾರಕ ನಿರ್ಮಾಣ ಕಾರ್ಯ ಆರಂಭವಾಗದೇ ಇರುವುದು ಮೈಸೂರಿಗೆ ಒಂದು ಕಪ್ಪುಚುಕ್ಕೆ ಎಂದು ಕುವೆಂಪು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಕೆ.ಚಿದಾನಂದಗೌಡ ಬೇಸರ ವ್ಯಕ್ತಪಡಿಸಿದ್ದಾರೆ.

ಇಂತಹ ಯೋಜನೆ ಚೆನ್ನೈ, ಬರೋಡಾ, ಪೋರಬಂದರ್ ಹಾಗೂ ಖೇತ್ರಿಗಳಲ್ಲಿ ಸಂಪೂರ್ಣಗೊಂಡಿದೆ. ಮೈಸೂರಿನಲ್ಲಿ ಮಾತ್ರ ಇದಕ್ಕೆ ವಿರೋಧ ವ್ಯಕ್ತವಾಗಿರುವುದು ಸರಿಯಲ್ಲ ಎಂದು ಖಂಡಿಸಿದ್ದಾರೆ.

2013ರಲ್ಲಿ ನಡೆದ ಸ್ವಾಮಿ ವಿವೇಕಾನಂದರ 150ನೇ ಜನ್ಮವರ್ಷಾಚರಣೆಯ ವೇಳೆ ಅಂದಿನ ಪ್ರಧಾನಮಂತ್ರಿ ಡಾ.ಮನಮೋಹನಸಿಂಗ್‍ ಹಾಗೂ ಎಲ್ಲ ರಾಜ್ಯಸರ್ಕಾರಗಳು ಸ್ವಾಮಿ ವಿವೇಕಾನಂದರು ಭೇಟಿ ನೀಡಿದ ಪ್ರಮುಖ ಸ್ಥಳಗಳಲ್ಲಿ ಸ್ಮಾರಕಗಳನ್ನು ನಿರ್ಮಿಸುವ ಯೋಜನೆಯನ್ನು ಹಮ್ಮಿಕೊಂಡವು. ಅದರಂತೆ ನಿರಂಜನ ಮಠ ಮತ್ತು ಎನ್.ಟಿ.ಎಂ ಶಾಲೆಯ ಜಾಗವನ್ನು ಒಳಗೊಂಡಿರುವ ಆವರಣದಲ್ಲಿ ವಿವೇಕಸ್ಮಾರಕವನ್ನು ಭವ್ಯವಾಗಿ ನಿರ್ಮಿಸಬೇಕೆಂದೂ ನಿರ್ಧರಿಸಲಾಯಿತು ಎಂದು ಹೇಳಿದ್ದಾರೆ.

ರಾಮಕೃಷ್ಣ ಆಶ್ರಮವು ಮುಂದೆ ಬಂದಲ್ಲಿ ಮಾತ್ರ ಈ ಜಾಗವನ್ನು ಹಸ್ತಾಂತರಿಸಲಾಗುವುದು ಎಂದು ರಾಜ್ಯ ಸರ್ಕಾರ ಹೇಳಿದ ಬಳಿಕ ಆಶ್ರಮವು ಈ ಕಾರ್ಯಕ್ಕೆ ಮುಂದಾಯಿತು. ರಾಜ್ಯ ಸರ್ಕಾರ ಧನಸಹಾಯ ಘೋಷಿಸಿದ್ದರೆ, ಕೇಂದ್ರ ಸರ್ಕಾರ ಪ್ರಥಮ ಕಂತಿನ ಹಣವನ್ನೂ ಬಿಡುಗಡೆ ಮಾಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನ, ಕೌಶಲ್ಯ ತರಬೇತಿಗಳಿಗಾಗಿ ಸಾಂಸ್ಕೃತಿಕ ಕೇಂದ್ರವನ್ನು ನಿರ್ಮಿಸುವುದಕ್ಕಾಗಿ ಎನ್.ಟಿ.ಎಂ ಶಾಲೆಯ ಜಾಗವನ್ನು ರಾಮಕೃಷ್ಣ ಆಶ್ರಮಕ್ಕೆ ಸರ್ಕಾರ ನೀಡಿತು, ಹೈಕೋರ್ಟ್‌ ಸಹ ಇದನ್ನು ಅನುಮೋದಿಸಿದೆ ಎಂದು ಅವರು ಹೇಳಿದ್ದಾರೆ. 

ಜೀರ್ಣಾವಸ್ಥೆಯಲ್ಲಿರುವ ಹಳೆಯ ಕಟ್ಟಡದ ಬದಲು ಹತ್ತಿರದಲ್ಲೇ ಹೊಸ ಶಾಲಾಕಟ್ಟಡವನ್ನು ಕಟ್ಟುವ ಸಾಧ್ಯತೆಯೂ, ಸ್ಥಳಾವಕಾಶವೂ ಇದೆ. ಹೀಗಿದ್ದರೂ ಇಂತಹ ಸರ್ವಜನ ಹಿತಕಾರಿಯಾದ ವಿವೇಕಸ್ಮಾರಕ ಮತ್ತು ಯುವಸಾಂಸ್ಕೃತಿಕ ಯೋಜನೆಯನ್ನು ವಿರೋಧಿಸುತ್ತಿರುವುದು ಸರಿಯಲ್ಲ ಎಂದು ಅವರು ಕಿಡಿಕಾರಿದ್ದಾರೆ.

ಎಲ್ಲರೂ ಕುವೆಂಪು ಅವರು ಹೇಳಿದ್ದ ‘ಸಮನ್ವಯ’ ಭಾವದಿಂದ, ‘ಪೂರ್ಣದೃಷ್ಟಿ’ಯಿಂದ ಸಹಕರಿಸಬೇಕಾದ ಅಗತ್ಯವಿದೆ ಎಂದು ಪ್ರಕಟಣೆಯಲ್ಲಿ ಪ್ರತಿಪಾದಿಸಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.