ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯವಂತ ಸಮಾಜ: ನರ್ಸ್‌ ಪಾತ್ರ ಪ್ರಮುಖ

‘ವಿಶ್ವ ಶುಶ್ರೂಷಕರ ದಿನಾಚರಣೆ’ಯಲ್ಲಿ ಪ್ರೊ.ಲಕ್ಷ್ಮಿದೇವಿ ಅಭಿಮತ
Last Updated 23 ಮೇ 2019, 19:13 IST
ಅಕ್ಷರ ಗಾತ್ರ

ಮೈಸೂರು: ‘ಆರೋಗ್ಯವಂತ ಸಮಾಜ ನಿರ್ಮಿಸುವಲ್ಲಿ ನರ್ಸಿಂಗ್‌ ಕ್ಷೇತ್ರದ ಪಾತ್ರ ಬಹುಮುಖ್ಯ. ಈ ಕಾರಣದಿಂದ ನಿಷ್ಠೆಯಿಂದ ಕಾರ್ಯನಿರ್ವಹಿಸಿ’ ಎಂದು ರಾಜೀವ್‌ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ನರ್ಸಿಂಗ್ ವಿಭಾಗದ ಡೀನ್‌ ಪ್ರೊ.ಎನ್‌.ಲಕ್ಷ್ಮಿದೇವಿ ಸಲಹೆ ನೀಡಿದರು.

ಜೆಎಸ್‌ಎಸ್‌ ಆಸ್ಪತ್ರೆ, ಜೆಎಸ್‌ಎಸ್‌ ನರ್ಸಿಂಗ್‌ ಕಾಲೇಜು ಮತ್ತು ಜೆಎಸ್‌ಎಸ್‌ ಶುಶ್ರೂಷಾ ಶಾಲೆ ಆಶ್ರಯದಲ್ಲಿ ನಡೆದ ಫ್ಲಾರೆನ್ಸ್‌ ನೈಂಟಿಗೇಲ್‌ ಅವರ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ‘ವಿಶ್ವ ಶುಶ್ರೂಷಕರ ದಿನಾಚರಣೆ’ಯಲ್ಲಿ ಅವರು ಮಾತನಾಡಿದರು.

‘ಆರೋಗ್ಯ ಕೈಕೊಟ್ಟಾಗ ಪ್ರತಿಯೊಬ್ಬ ರೋಗಿಯೂ ಉತ್ತಮ ಸೌಲಭ್ಯವಿರುವ ಆಸ್ಪತ್ರೆಗೆ ಹೋಗಲು ಇಚ್ಛೆ ಪಡುತ್ತಾರೆ. ಇದರರ್ಥ ಕಟ್ಟಡವಲ್ಲ, ಚಿಕಿತ್ಸೆ. ಅದರಲ್ಲೂ ನರ್ಸ್‌ಗಳ ಆರೈಕೆಯೇ ಮುಖ್ಯವಿರುತ್ತದೆ. ನರ್ಸ್‌ ಕೆಲಸ 24 X7 ಇರುತ್ತದೆ. ಅದು ಆಸ್ಪತ್ರೆ, ಮನೆ ಅಥವಾ ಯುದ್ಧ ಭೂಮಿಯೇ ಇರಬಹುದು. ರೋಗಿಯ ಆರೈಕೆ ಮಾಡಿ, ಪ್ರೀತಿ ತೋರಿಸಿ ಅವರಿಗೆ ಧೈರ್ಯ ತುಂಬಿ ಆರೋಗ್ಯವಾಗುತ್ತೀರಿ ಎಂಬ ಭರವಸೆ ನೀಡಬೇಕು. ವೈದ್ಯರು ಚಿಕಿತ್ಸೆ ನೀಡುತ್ತಾರೆ. ಆದರೆ, ಹೆಚ್ಚು ಕಾಲ ನರ್ಸ್‌ಗಳೇ ಆರೈಕೆ ಮಾಡುತ್ತಿರುವುದರಿಂದ ರೋಗಿಗಳಿಗೆ ನಿಮ್ಮ ಸೇವೆಯೇ ಮುಖ್ಯ’ ಎಂದರು.

ರಾಜೀವ್‌ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಕುಲಸಚಿವ ಡಾ.ಕೆ.ಬಿ.ಲಿಂಗೇಗೌಡ ಮಾತನಾಡಿ, ಶುಶ್ರೂಷಕರ ವೃತ್ತಿ ಪಾವಿತ್ರ್ಯತೆ ಶ್ರೇಷ್ಠವಾದುದು. ರೋಗಿಗಳನ್ನು ಅದರಲ್ಲೂ ಹಿರಿಯ ರೋಗಿಗಳನ್ನು ತಂದೆ– ತಾಯಿಯಂತೆ ನೋಡಿಕೊಳ್ಳಿ. ಜೀವನದ ಭರವಸೆಯನ್ನು ಕಳೆದುಕೊಂಡ ಒಬ್ಬ ರೋಗಿಗೆ ನಿಮ್ಮ ಆರೈಕೆ, ಹೊಸ ಜೀವನ ಚೈತನ್ಯ ನೀಡಬಲ್ಲದು’ ಎಂದು ಹೇಳಿದರು.

‘ಕೇಂದ್ರ ಕಾರಾಗೃಹದ ಕೈದಿ, ಕ್ಯಾನ್ಸರ್‌ ಪೀಡಿತ ರೋಗಿಯನ್ನು ಕಿದ್ವಾಯಿ ಆಸ್ಪತ್ರೆಗೆ ತಂದಾಗ ಜೂಲಿಯಟ್ ಎಂಬ ಹಿರಿಯ ನರ್ಸ್‌ ಮನೆಯಿಂದ ತಂದ ಬಿರಿಯಾನಿ ನೀಡಿದರು. ಒಳ್ಳೆಯ ಮಾತು ಆಡಿದ್ದರು. ಆಗ ಆ ವ್ಯಕ್ತಿ ಜೀವನದಲ್ಲಿ ಇಷ್ಟೊಂದು ಸಂತೋಷದ ದಿನ ಕಂಡಿರಲಿಲ್ಲ ಎಂದು ಹೇಳಿದ್ದರು. ಇದು ನರ್ಸ್‌ಗಳ ಉತ್ತಮ ಸೇವೆಗೆ ಒಂದು ಉದಾಹರಣೆ’ ಎಂದರು.

ಜೆಎಸ್‌ಎಸ್‌ ಆಸ್ಪತ್ರೆಯ ನಿರ್ದೇಶಕ ಕರ್ನಲ್‌ ಡಾ.ಎಂ.ದಯಾನಂದ, ನರ್ಸಿಂಗ್‌ ಸೇವೆ ಕೇವಲ ಕೆಲಸ, ಗಳಿಕೆಗೆ ಸೀಮಿತವಲ್ಲ. ಏನಾದರೂ ಹೊಸದನ್ನು ಸಂಶೋಧಿಸಿ ಸಾಧನೆ ಮಾಡಬೇಕು ಎಂದು ಹೇಳಿದರು.

ಜೆಎಸ್‌ಎಸ್‌ ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಆರ್.ಮಹೇಶ್ ಅಧ್ಯಕ್ಷತೆ ವಹಿಸಿದ್ದರು. ಜೆಎಸ್‌ಎಸ್‌ ನರ್ಸಿಂಗ್‌ ಶಾಲೆ ಪ್ರಾಚಾರ್ಯ ಎಸ್‌.ಜಿ.ಶಶಿಧರಕುಮಾರ್‌, ಜೆಎಸ್‌ಎಸ್‌ ಶುಶ್ರೂಷಾ ಮುಖ್ಯಾಧಿಕಾರಿ ಜೆನೆಟ್ ಮಥಾಯಿಸ್, ಜೆಎಸ್‌ಎಸ್‌ ನರ್ಸಿಂಗ್‌ ಕಾಲೇಜು ಪ್ರಾಚಾರ್ಯ ಶೀಲಾ ವಿಲಿಯಮ್ಸ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT