ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಶ್ರಮ ಶಾಲೆಗಳಿಗೆ ಪೌಷ್ಟಿಕ ಆಹಾರ ಸರಬರಾಜು ಸ್ಥಗಿತ: ಸದಸ್ಯರಿಂದ ಧರಣಿ

ಆಶ್ರಮ ಶಾಲೆಗಳಿಗೆ ಪೌಷ್ಟಿಕ ಆಹಾರ ಸರಬರಾಜು ಸ್ಥಗಿತ: ಸಭೆಯಲ್ಲಿ ಸರ್ಕಾರದ ವಿರುದ್ಧ ಘೋಷಣೆ
Last Updated 30 ಸೆಪ್ಟೆಂಬರ್ 2020, 15:01 IST
ಅಕ್ಷರ ಗಾತ್ರ

ಹುಣಸೂರು: ತಾಲ್ಲೂಕಿನ 6 ಆಶ್ರಮ ಶಾಲೆಗಳಲ್ಲಿ ಮಕ್ಕಳಿಗೆ ಪಡಿತರ ವಿತರಿಸದ್ದರಿಂದ ವಿದ್ಯಾರ್ಥಿಗಳು ಪೌಷ್ಟಿಕ ಆಹಾರ ವಂಚಿತರಾಗುತ್ತಿದ್ದಾರೆ ಎಂದು ಬುಧವಾರ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ಸರ್ಕಾರದ ವಿರುದ್ಧ ಪ್ರತಿಭಟಿಸಿದ ಪ್ರಸಂಗ ನಡೆಯಿತು.

6 ತಿಂಗಳ ಬಳಿಕ ಅಧ್ಯಕ್ಷೆ ಪದ್ಮಮ್ಮ ನೇತೃತ್ವದಲ್ಲಿ ಸಭೆ ಆರಂಭವಾಗುತ್ತಿದ್ದಂತೆ ಸದಸ್ಯ ಗಣಪತಿ ಇಂಡೋಳ್ಕರ್ ಮಾತನಾಡಿ, ಶಿಕ್ಷಣ ಇಲಾಖೆಯು ಬಿಸಿಯೂಟವನ್ನು ಕೋವಿಡ್ ಹಂತದಲ್ಲೂ ಮುಂದುವರೆಸಿದ್ದು, ಆಶ್ರಮ ಶಾಲೆ ವಿದ್ಯಾರ್ಥಿಗಳು ಈ ವ್ಯವಸ್ಥೆಯಿಂದ ವಂಚಿತರಾಗಿದ್ದಾರೆ. ಗಿರಿಜನ, ಹಕ್ಕಿಪಿಕ್ಕಿ, ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಕೋವಿಡ್ ಹಂತದಲ್ಲಿ ಪೌಷ್ಟಿಕ ಆಹಾರ ಇಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದಾರೆ ಎಂದು ಬಿ.ಸಿ.ಎಂ. ಇಲಾಖೆ ಅಧಿಕಾರಿ ಬಸವರಾಜ್ ಅವರನ್ನು ತರಾಟೆಗೆ ತೆಗೆದುಕೊಂಡರು.

ಇದಕ್ಕೆ ಉತ್ತರಿಸಿದ ಅಧಿಕಾರಿ, ‘ಆಶ್ರಮ ಶಾಲೆ ವಿದ್ಯಾರ್ಥಿಗಳಿಗೆ ಕೋವಿಡ್ ಹಂತದಲ್ಲಿ ಪರ್ಯಾಯ ಶಿಕ್ಷಣ ನೀಡುತ್ತಿದ್ದು, ಪಡಿತರ ವಿತರಣೆಗೆ ಸರ್ಕಾರ ಆದೇಶ ನೀಡಿಲ್ಲ’ ಎಂದು ತಿಳಿಸಿದರು.

ಅಧಿಕಾರಿಯ ಉತ್ತರಕ್ಕೆ ಅಸಮಾಧಾನಗೊಂಡ ಸದಸ್ಯರು ಪಕ್ಷಭೇದ ಮರೆತು ಒಗ್ಗಟ್ಟು ಪ್ರದರ್ಶಿಸಿದ ಸದಸ್ಯರು ಸಭೆಯಲ್ಲಿ ಕೆಲ ಸಮಯ ಧರಣಿ ನಡೆಸಿ ಸರ್ಕಾರದ ವಿರುದ್ಧ ಘೋಷಣೆ ಹಾಕಿದರು.

ಸಭೆ ತೆಗೆದುಕೊಂಡ ತೀರ್ಮಾನವನ್ನು ಸರ್ಕಾರಕ್ಕೆ ಕಳುಹಿಸಬೇಕು. ಇದರ ಪ್ರತಿಯನ್ನು ಜಿಲ್ಲಾಧಿಕಾರಿ ಮತ್ತು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿಗೂ ರವಾನಿಸಬೇಕು ಎಂದು ಸದಸ್ಯ ಕೆಂಗಯ್ಯ ಆಗ್ರಹಿಸಿದರು.

ಕೋವಿಡ್ ಪರೀಕ್ಷೆ: ತಾಲ್ಲೂಕಿನಲ್ಲಿ 13 ಸಾವಿರ ನಾಗರಿಕರನ್ನು ಪರೀಕ್ಷೆಗೆ ಒಳಪಡಿಸಿದ್ದು 1,900 ಜನರು ಕೋವಿಡ್‌ ಪಾಸಿಟಿವ್ ಬಂದಿತ್ತು. ಇವರಲ್ಲಿ 1,600 ಜನರಿಗೆ ಚಿಕಿತ್ಸೆ ನೀಡಲಾಗಿದ್ದು 300 ಜನರು ವಿವಿಧ ಹಂತದಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಕೀರ್ತಿಕುಮಾರ್ ಸಭೆಗೆ ಮಾಹಿತಿ ನೀಡಿದರು.

ಬೀದಿನಾಯಿ: ಕಟ್ಟೆಮಳವಾಡಿ ಗ್ರಾಮದ ರಸ್ತೆಯಲ್ಲಿ ಬೀದಿ ನಾಯಿಗಳು ಸತ್ತಿದ್ದರೂ ಪಂಚಾಯಿತಿ ಅಂತ್ಯ ಸಂಸ್ಕಾರ ಮಾಡಲು ಮುಂದಾಗದೆ ದುರ್ವಾಸನೆ ಹರಡುತ್ತಿದೆ. ಪಂಚಾಯಿತಿ ವಿಶೇಷ ಅನುದಾನದಲ್ಲಿ ಸತ್ತ ನಾಯಿಗಳ ಸಂಸ್ಕಾರ ಮಾಡಲು ಆದೇಶಿಸುವಂತೆ ತಾ.ಪಂ. ಅಧ್ಯಕ್ಷ ಪದ್ಮಮ್ಮ ಬಸವರಾಜ ಸೂಚಿಸಿದರು.

ಸ್ವಮಿತ್ವ: ಕೇಂದ್ರ ಸರ್ಕಾರದ ಸ್ವಮಿತ್ವ ಯೋಜನೆ ತಾಲ್ಲೂಕಿನ ಮೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಮುಕ್ತಾಯಗೊಳಿಸಿ ಆಸ್ತಿ ದಾಖಲೆ ಪ್ರಕ್ರಿಯೆ ನಡೆದಿದೆ ಎಂದು ಸರ್ವೆ ಇಲಾಖೆ ಸಹಾಯಕ ನಿರ್ದೇಶಕಿ ಮಮತಾ ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ರವಿಕುಮಾರ್, ಉಪಾಧ್ಯಕ್ಷ ಪ್ರೇಮೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT