ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಿತ ತಜ್ಞ ಪ್ರೊ.ರುದ್ರಯ್ಯ ನಿಧನ

Last Updated 19 ಸೆಪ್ಟೆಂಬರ್ 2019, 20:43 IST
ಅಕ್ಷರ ಗಾತ್ರ

ಮೈಸೂರು: ಅಂತರರಾಷ್ಟ್ರೀಯ ಗಣಿತ ತಜ್ಞ, ಶಿಕ್ಷಣ ತಜ್ಞ, ಸಂಶೋಧಕ ಪ್ರೊ.ಎನ್‌.ರುದ್ರಯ್ಯ (88) ಇಲ್ಲಿನ ವಿಜಯನಗರ ನಿವಾಸದಲ್ಲಿ ಗುರುವಾರ ಬೆಳಿಗ್ಗೆ ನಿಧನರಾದರು.ಅವರಿಗೆ ಪುತ್ರ, ಸೊಸೆ, ಇಬ್ಬರು ಮೊಮ್ಮಕ್ಕಳು ಇದ್ದಾರೆ.

ತುಮಕೂರು ಜಿಲ್ಲೆ ಬೆಳ್ಳಾವಿಯ ಪ್ರೊ.ರುದ್ರಯ್ಯ, ವೃದ್ಧಾಪ್ಯದ ದಿನಗಳನ್ನು ತಮ್ಮ ಫಾರ್ಮ್‌ಹೌಸ್‌ನಲ್ಲಿ ಕಳೆಯುತ್ತಿದ್ದರು. 52 ಮಂದಿಗೆ ಪಿಎಚ್‌.ಡಿ ಮಾರ್ಗದರ್ಶನ ನೀಡಿ, ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗ ತೋರಿ, ಅಂತರರಾಷ್ಟ್ರೀಯ ಮಟ್ಟದ ಪತ್ರಿಕೆಗಳಲ್ಲಿ 324 ಪ್ರಬಂಧ ಪ್ರಕಟಿಸಿದ್ದ ಅವರು ಈಚೆಗೆ ಮರೆಗುಳಿ ಕಾಯಿಲೆಯಿಂದ ಬಳಲುತ್ತಿದ್ದರು.

ಟೊರಂಟೊದಲ್ಲಿ ಪಿಎಚ್‌.ಡಿ: ಸಿದ್ಧಗಂಗಾ ಮಠದಲ್ಲಿ ಆರಂಭಿಕ ಶಿಕ್ಷಣ ಪಡೆದಿದ್ದ ಪ್ರೊ. ರುದ್ರಯ್ಯ, ಮೈಸೂರು ವಿಶ್ವವಿದ್ಯಾಲಯದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ (ಎಂ.ಎಸ್ಸಿ) ಪೂರೈಸಿದ್ದರು. ಉನ್ನತ ಶಿಕ್ಷಣಕ್ಕಾಗಿ (ಅನ್ವಯಿಕ ಗಣಿತ) ಕೆನಡಾದ ಟೊರಂಟೊಗೆ ತೆರಳಿದ್ದ ಅವರು, ಅಲ್ಲಿಯೇ ಗಣಿತದಲ್ಲಿ ಪಿಎಚ್‌.ಡಿ ಪದವಿ ಪಡೆದಿದ್ದರು.

ಮೈಸೂರು ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಗಣಿತ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ, ಸೆಂಟ್ರಲ್‌ ಕಾಲೇಜಿನ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸಿದ್ದ ಪ್ರೊ. ರುದ್ರಯ್ಯ, 1990ರಿಂದ 1996ರವರೆಗೆ ಎರಡು ಅವಧಿಗೆ ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದರು. ಜಗತ್ತಿನ ಹಲವು ವಿ.ವಿಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಸಂಶೋಧನಾ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ಪುರಸ್ಕಾರಗಳಿಗೆ ಭಾಜನರಾಗಿದ್ದರು.

ಹುಣಸೂರು ತಾಲ್ಲೂಕಿನ ಬನ್ನಿಕುಪ್ಪೆ ಫಾರ್ಮ್‌ಹೌಸ್‌ನಲ್ಲಿ ಶುಕ್ರವಾರ ಬೆಳಿಗ್ಗೆ 10 ಗಂಟೆಗೆಅಂತ್ಯಕ್ರಿಯೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT