ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆಯ ಮೈಸೂರು ಪ್ರಾಂತ್ಯ | ಕಡತದಲ್ಲಷ್ಟೇ ಬಯಲು ಬಹಿರ್ದೆಸೆ ಮುಕ್ತ!

ದಾಖಲೆಯಲ್ಲಷ್ಟೇ ಬಯಲು ಶೌಚಮುಕ್ತ: ಸಾರ್ವಜನಿಕ ಶೌಚಾಲಯಗಳ ಕೊರತೆ; ಅಭ್ಯಾಸ ಬದಲಿಸಿಕೊಳ್ಳದ ಹಿರಿಯರು
Last Updated 5 ಅಕ್ಟೋಬರ್ 2019, 20:00 IST
ಅಕ್ಷರ ಗಾತ್ರ

‘ಭಾರತ ಬಯಲು ಶೌಚಮುಕ್ತ’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಆದರೆ, ರಾಜ್ಯದಲ್ಲಿ ಈಗಲೂ ನಸುಕಿನಲ್ಲೇ ಕೈಯಲ್ಲಿ ತಂಬಿಗೆ ಹಿಡಿದು ಮಹಿಳೆಯುರು, ಪುರುಷರು, ಮಕ್ಕಳು ಬಯಲ ಕಡೆಗೆ ಹೋಗುವುದು ಮಾಮೂಲಿ ದೃಶ್ಯ. ಸರ್ಕಾರದ ದಾಖಲೆಗಳಲ್ಲಿ ಮಾತ್ರ ಬಯಲು ಶೌಚಮುಕ್ತವಾಗಿದೆ. ಈ ಕುರಿತು ‘ಪ್ರಜಾವಾಣಿ’ ಇಲ್ಲಿ ಬೆಳಕು ಚೆಲ್ಲಿದೆ.

ಮೈಸೂರು: ‘ಬಯಲು ಬಹಿರ್ದೆಸೆ ಮುಕ್ತ’ ಎಂಬ ಘೋಷಣೆಯಾಗಿ ವರ್ಷಗಳೇ ಗತಿಸಿದ್ದರೂ, ಇಂದಿಗೂ ಅಂದಾಜು ಶೇ 15ರಷ್ಟು ಜನರು ಬಹಿರ್ದೆಸೆಗೆ ಬಯಲನ್ನೇ ಅವಲಂಬಿಸಿರುವುದು ಹಳೆಯ ಮೈಸೂರು ಪ್ರಾಂತ್ಯದ ವಾಸ್ತವ ಚಿತ್ರಣ.

ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಹಾಗೂ ಕೊಡಗು ಜಿಲ್ಲೆಯಲ್ಲಿ, ಸರ್ಕಾರಿ ದಾಖಲೆಗಳ ಪ್ರಕಾರ ಕೆಲ ಕುಟುಂಬಗಳು ವೈಯಕ್ತಿಕ ಶೌಚಾಲಯ ಹೊಂದಿಲ್ಲ. ಇದ್ದರೂ ಬಳಸುತ್ತಿಲ್ಲ. ನಗರ, ಪಟ್ಟಣ, ಗ್ರಾಮೀಣ ಎನ್ನದೇ ಎಲ್ಲೆಡೆಯೂ ಬಯಲು ಬಹಿರ್ದೆಸೆ ಇಂದಿಗೂ ರೂಢಿಯಲ್ಲಿದೆ. ನಗರ ಪ್ರದೇಶದಲ್ಲಿ ಕೊಳೆಗೇರಿಗಳಲ್ಲಿ ಹೆಚ್ಚಿದ್ದರೆ; ಗ್ರಾಮೀಣ ಪ್ರದೇಶದಲ್ಲಿ ತೋಟ, ಹೊಲ, ಜಮೀನು, ನಾಲೆ, ರಸ್ತೆ ಬದಿ ಮಲ ವಿಸರ್ಜನೆಗೆ ತೆರಳುವುದು ಗೋಚರಿಸುತ್ತದೆ.

ಮೈಸೂರು ಜಿಲ್ಲೆಯನ್ನು 2018ರ ಫೆಬ್ರುವರಿಯಲ್ಲಿ ‘ಬಯಲು ಬಹಿರ್ದೆಸೆ ಮುಕ್ತ’ ಎಂದು ಘೋಷಿಸಲಾಗಿದೆ. ಆದರೆ, ಸ್ವಚ್ಛ–ಸುಂದರ ನಗರಿ ಎನಿಸಿದ ಇಲ್ಲೇ ಶೌಚಕ್ಕಾಗಿ ಬಯಲನ್ನು ಅವಲಂಬಿಸಿದ್ದಾರೆ ಎಂಬುದು ನಿಜ. ಗ್ರಾಮೀಣ ಪ್ರದೇಶದಲ್ಲೂ ಇದು ತಪ್ಪಿಲ್ಲ.

‘ಶೇ 85ರಿಂದ 90ರಷ್ಟು ಮಂದಿ ಶೌಚಾಲಯ ಬಳಸುತ್ತಿದ್ದು, ಉಳಿದವರು ಇಂದಿಗೂ ಬಯಲನ್ನೇ ಆಶ್ರಯಿಸಿದ್ದಾರೆ. ಶತ ಪ್ರಯತ್ನ ನಡೆಸಿದರೂ; ಅವರ ಮನಸ್ಥಿತಿ ಬದಲಾಯಿಸಲು ಆಗುತ್ತಿಲ್ಲ’ ಎನ್ನುತ್ತಾರೆ ಸ್ವಚ್ಛ ಭಾರತ್ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಜಿಲ್ಲಾ ಪಂಚಾಯಿತಿ ಅಧಿಕಾರಿಯೊಬ್ಬರು.

‘ಸ್ಟೋರ್‌ ರೂಂ’ಗಳಾದ ಶೌಚಾಲಯಗಳು: ಮಂಡ್ಯ ಜಿಲ್ಲೆಯ 234 ಗ್ರಾಮ ಪಂಚಾಯಿತಿಗಳ 3.52 ಲಕ್ಷ ಕುಟುಂಬಗಳು ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಂಡಿದ್ದು, 2017ರಲ್ಲೇ ಬಯಲು ಶೌಚ ಮುಕ್ತ ಜಿಲ್ಲೆ ಎಂದು ಘೋಷಣೆ ಮಾಡಲಾಗಿದೆ. ಸ್ವಚ್ಛ ಭಾರತ ಅಭಿಯಾನದಡಿ ಜಿಲ್ಲೆ ಶೇ 100ರಷ್ಟು ಸಾಧನೆ ಮಾಡಿದೆ. ಉದ್ಯೋಗ ಖಾತ್ರಿ ಯೋಜನೆ ಸಹಾಯದಿಂದ ಬಯಲು ಶೌಚಾಲಯ ಮುಕ್ತಗೊಂಡಿರುವ ಹಿನ್ನೆಲೆಯಲ್ಲಿ ವಾರ್ಷಿಕ ಪ್ರಶಸ್ತಿಯೂ ಸಂದಿದೆ.

ಕೊಡಗಿಗೆ ರಾಷ್ಟ್ರ ಪ್ರಶಸ್ತಿ: ಮೂರು ವರ್ಷಗಳ ಹಿಂದೆಯೇ ಕೊಡಗು ಜಿಲ್ಲೆಯನ್ನು ‘ಬಯಲು ಶೌಚ ಮುಕ್ತ’ ಎಂದು ಘೋಷಿಸಲಾಗಿದೆ. ಯಶಸ್ವಿ ಅನುಷ್ಠಾನಕ್ಕಾಗಿ ರಾಷ್ಟ್ರಮಟ್ಟದಲ್ಲಿ 7ನೇ ಸ್ಥಾನ ಪಡೆದು, ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದೆ. ಆದರೆ, ವಾಸ್ತವವೇ ಬೇರೆ.

ಗುಡ್ಡಗಾಡು ಪ್ರದೇಶದ ಅದೆಷ್ಟೋ ಮನೆಗಳಲ್ಲಿ ಶೌಚಾಲಯವಿಲ್ಲ. ಎರಡು ವರ್ಷದಿಂದ ‍ಪ್ರವಾಹ, ಭೂಕುಸಿತಕ್ಕೆ ಮನೆಗಳು ನೆಲಸಮವಾಗಿವೆ. ತೋಟದ ಕಾರ್ಮಿಕರು, ಆದಿವಾಸಿಗಳಿಗೆ ಸ್ವಚ್ಛತಾ ಅಭಿಯಾನದ ಸೌಲಭ್ಯ ತಲುಪಿಲ್ಲ. ಇವರು ಶೌಚಕ್ಕಾಗಿ ಬಯಲನ್ನೇ ಆಶ್ರಯಿಸಿದ್ದು, ಜಿಲ್ಲೆ ಬಯಲು ಶೌಚ ಮುಕ್ತವಾಗಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಎದುರಾಗಿದೆ.

ಬಳಸದವರೇ ಹೆಚ್ಚು: ಒಂದೂವರೆ ವರ್ಷದ ಹಿಂದೆಯೇ ಚಾಮರಾಜನಗರ ಜಿಲ್ಲೆ ‘ಬಯಲು ಬಹಿರ್ದೆಸೆ ಮುಕ್ತ’ ಎಂದು ಘೋಷಣೆಯಾಗಿದೆ. ಆದರೆ, ಶೌಚಾಲಯವಿದ್ದರೂ ಬಳಸದವರು ತುಂಬಾ ಜನ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT