ಹಳಗನ್ನಡ ಕಲಿಕೆಯಲ್ಲಿ ನಿರಾಸಕ್ತಿ: ಪ್ರೊ.ಕೆ.ಆರ್‌.ದುರ್ಗಾದಾಸ್ ಬೇಸರ

7
‘ಶಾಸ್ತ್ರೀಯ ಕನ್ನಡ ಪಠ್ಯಗಳ ಅನುವಾದ ಕಮ್ಮಟ’ ಉದ್ಘಾಟನಾ ಕಾರ್ಯಕ್ರಮ

ಹಳಗನ್ನಡ ಕಲಿಕೆಯಲ್ಲಿ ನಿರಾಸಕ್ತಿ: ಪ್ರೊ.ಕೆ.ಆರ್‌.ದುರ್ಗಾದಾಸ್ ಬೇಸರ

Published:
Updated:
Deccan Herald

ಮೈಸೂರು: ಈಚಿನ ದಿನಗಳಲ್ಲಿ ವಿಶ್ವವಿದ್ಯಾಲಯಗಳಲ್ಲಿ ಹಳಗನ್ನಡ ಕಲಿಕೆಯಲ್ಲಿ ನಿರಾಸಕ್ತಿ ಕಾಣುತ್ತಿದೆ ಎಂದು ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ಪ್ರೊ.ಕೆ.ಆರ್‌.ದುರ್ಗಾದಾಸ್ ಬೇಸರ ವ್ಯಕ್ತಪಡಿಸಿದರು.

ಭಾರತೀಯ ಭಾಷಾ ಸಂಸ್ಥಾನ (ಸಿಐಐಎಲ್) ದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ‘ಶಾಸ್ತ್ರೀಯ ಕನ್ನಡ ಪಠ್ಯಗಳ ಅನುವಾದ ಕಮ್ಮಟ’ದ ಉದ್ಘಾಟನೆ ಹಾಗೂ 'ಕಿಟೆಲ್ ಕೋಶ'ದ ಅಂತರ್ಜಾಲ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಳಗನ್ನಡ ಓದುವುದು ಈಗಿನ ಬಹುತೇಕ ಕನ್ನಡ ಅಧ್ಯಾಪಕರಿಗೆ ಬರುತ್ತಲೇ ಇಲ್ಲ. ಇದರ ಪರಿಣಾಮ ವಿದ್ಯಾರ್ಥಿಗಳ ಮೇಲೆ ಉಂಟಾಗುತ್ತಿದೆ. ಅಧ್ಯಾಪಕರೇ ಕಲಿಸುವಲ್ಲಿ ಆಸಕ್ತಿ ತೋರಿಸದೇ ಇರುವ ಕಾರಣ ವಿದ್ಯಾರ್ಥಿಗಳಲ್ಲೂ ಆಸಕ್ತಿ ಬರುತ್ತಿಲ್ಲ. ಈ ಕೊರತೆಯನ್ನು ನೀಗಿಸಬೇಕಾದರೆ ಹಳಗನ್ನಡ ಕಾರ್ಯಾಗಾರಗಳು ಹೆಚ್ಚಾಗಿ ನಡೆಯಬೇಕು. ಹಳಗನ್ನಡ ವಿದ್ವಾಂಸರು ಹೊಸ ತಲೆಮಾರಿನ ಶಿಕ್ಷಕರಿಗೆ ಹಳಗನ್ನಡ ಓದುವುದು, ಭಾಷಾ ಬಳಕೆ, ಅರ್ಥ ವ್ಯಾಖ್ಯಾನಗಳನ್ನು ಮನದಟ್ಟಾಗುವಂತೆ ತಿಳಿಸಿಕೊಡಬೇಕು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮ ಉದ್ಘಾಟಿಸಿದ ಭಾಷಾ ವಿದ್ವಾಂಸ ತಾಳ್ತಜೆ ವಸಂತಕುಮಾರ್‌ ಮಾತನಾಡಿ, ಕನ್ನಡವನ್ನು ಇಂಗ್ಲಿಷಿಗೆ ಅನುವಾದ ಮಾಡುವಾಗ ಪದ ಅನುವಾದ ಮಾಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ಮೂಲ ಕೃತಿಯ ಆಶಯ ಹಾಗೂ ಆಕೃತಿ ಬದಲಾಗದಂತೆ ಎಚ್ಚರ ವಹಿಸಬೇಕು. ಭಾಷೆಯ ಸಾಂಸ್ಕೃತಿಕ ಮೌಲ್ಯಗಳಿಗೆ ಪೆಟ್ಟಾಗದಂತೆ ಎಚ್ಚರವಹಿಸಬೇಕು. ಹಿಂದೆ ಅನೇಕ ವಿದ್ವಾಂಸರೇ ಅರ್ಥ ಕೆಡುವಂತೆ ಅನುವಾದ ಮಾಡಿದ್ದಾರೆ. ತಪ್ಪುಗಳು ಮರುಕಳಿಸದಂತೆ ಜಾಗ್ರತೆ ವಹಿಸುವ ಅಗತ್ಯವಿದೆ ಎಂದರು.

ಭಾಷಾತಜ್ಞ ಪ್ರೊ.ಆರ್ವಿಯಸ್ ಸುಂದರಂ ಮಾತನಾಡಿ, ಕನ್ನಡ ಸಾಹಿತಿಗಳು, ಪ್ರಾಧ್ಯಾಪಕರ ಬಳಿ ಇರುವ ಕನ್ನಡ ಗ್ರಂಥಗಳಿಗಿಂತ ಹೆಚ್ಚು ವಿದೇಶಿ ಭಾಷಾ ವಿದ್ವಾಂಸರ ಬಳಿ ಇವೆ. ಕನ್ನಡವನ್ನು ಕುರಿತು ಇಂಗ್ಲೆಂಡಿನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮಾದರಿಯ ಸಂಸ್ಥೆಗಳು ಅತ್ಯದ್ಭುತ ಸಂಶೋಧನೆಗಳನ್ನು ನಡೆಸಿವೆ ಎಂದರು.

ಸಿಐಐಎಲ್‌ ನಿರ್ದೇಶಕ ಪ್ರೊ.ಡಿ.ಜಿ.ರಾವ್‌ ಅಧ್ಯಕ್ಷತೆವಹಿಸಿದ್ದರು. ಸಂಶೋಧನಾ ಅಧಿಕಾರಿ ಡಾ.ಎಲ್‌.ರಾಮಮೂರ್ತಿ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !