ಗುರುವಾರ , ಫೆಬ್ರವರಿ 27, 2020
19 °C
24 ಗಂಟೆಗಳಲ್ಲಿ ನಾಟಕೀಯ ವಿದ್ಯಮಾನಗಳಿಗೆ ಸಾಕ್ಷಿಯಾದ ನಗರ ಪೊಲೀಸ್‌ ವಿಭಾಗ

ಡಿಸಿಪಿ ಬಿ.ಟಿ.ಕವಿತಾ ವರ್ಗಾವಣೆ ಆದೇಶ 24 ತಾಸಿಗೆ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ನಗರದ ಡಿಸಿಪಿಯಾಗಿ ವರ್ಗಾವಣೆಗೊಂಡು ಬಂದಿದ್ದ ಬಿ.ಟಿ.ಕವಿತಾ ಅವರ ವರ್ಗಾವಣೆ ಆದೇಶವನ್ನು ಸರ್ಕಾರ ಕೇವಲ ಒಂದೇ ದಿನಕ್ಕೆ ರದ್ದುಪಡಿಸಿದೆ. ಇದಕ್ಕೆ ಪ್ರಭಾವಿ ರಾಜಕಾರಣಿಗಳ ಒತ್ತಡ ಕಾರಣ ಎಂದು ಹೇಳಲಾಗಿದೆ.

ರಾಜ್ಯ ಗುಪ್ತವಾರ್ತೆ ವಿಭಾಗದ ಎಸ್‌ಪಿಯಾಗಿದ್ದ ಕವಿತಾ ಅವರನ್ನು ಬುಧವಾರವಷ್ಟೇ ಡಾ.ಅಮಟೆ ವಿಕ್ರಮ್ ಅವರ ವರ್ಗಾವಣೆಯಿಂದ ತೆರವಾದ ಸ್ಥಾನಕ್ಕೆ ವರ್ಗಾವಣೆ ಮಾಡಿ ಸರ್ಕಾರದ ಅಧೀನ ಕಾರ್ಯದರ್ಶಿ ಎ.ವಿಜಯಕುಮಾರ್ ಆದೇಶ ಹೊರಡಿಸಿದ್ದರು.

ಈ ಆದೇಶದ ಪ್ರಕಾರ ಗುರುವಾರ ಬೆಳಿಗ್ಗೆ ಕರ್ತವ್ಯಕ್ಕೆ ವರದಿ ಮಾಡಿಕೊಂಡ ಕವಿತಾ ಅವರಿಗೆ ಅಧಿಕಾರ ನೀಡಲಿಲ್ಲ. ತಾಂತ್ರಿಕ ಕಾರಣಗಳ ನೆಪವೊಡ್ಡಿದ ಹಿರಿಯ ಅಧಿಕಾರಿಗಳು ಗುರುವಾರ ರಾತ್ರಿಯವರೆಗೂ ಅಧಿಕಾರ ವಹಿಸಿಕೊಳ್ಳದಂತೆ ತಡೆದರು.

ಗುರುವಾರ ತಡರಾತ್ರಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಟಿಪ್ಪಣಿಯೊಂದನ್ನು ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್ ಅವರಿಗೆ ಕಳುಹಿಸಿ ವರ್ಗಾವಣೆ ಆದೇಶ ರದ್ದುಗೊಂಡಿದೆ ಎಂದು ತಿಳಿಸಿದರು.‌

ನಂತರ, ಶುಕ್ರವಾರ ಸರ್ಕಾರದ ಉಪಕಾರ್ಯದರ್ಶಿ ಜೆ.ಡಿ.ಮಧುಚಂದ್ರ ತೇಜಸ್ವಿ ಅವರು ಡಾ.ಅಮಟೆ ವಿಕ್ರಂ ಅವರು ಹಾಲಿ ನಗರ ಡಿಸಿಪಿ ಹುದ್ದೆಯಲ್ಲಿ ಹಾಗೂ ಕವಿತಾ ಅವರನ್ನು ಹಿಂದೆ ಕಾರ್ಯನಿರ್ವಹಿಸುತ್ತಿದ್ದ ರಾಜ್ಯ ಗುಪ್ತವಾರ್ತೆ ಎಸ್‌ಪಿ ಹುದ್ದೆಯಲ್ಲಿ ಮುಂದುವರೆಯುವಂತೆ ಅಧಿಸೂಚನೆ ಹೊರಡಿಸಿದರು. ಈ ಮೂಲಕ ಕೇವಲ ಒಂದೇ ದಿನಕ್ಕೆ ತಾನೇ ಮಾಡಿದ ವರ್ಗಾವಣೆ ಆದೇಶವನ್ನು ಸರ್ಕಾರ ರದ್ದುಗೊಳಿಸಿದೆ.

ಸಮ್ಮಿಶ್ರ ಸರ್ಕಾರದ ಮುಸಕಿನ ಗುದ್ದಾಟ ಫಲ:

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಗೃಹಸಚಿವ ಪರಮೇಶ್ವರ್ ಅವರ ನಡುವಿನ ಮುಸುಕಿನ ಗುದ್ದಾಟದ ಫಲ ಇದು ಎಂದು ವಿಶ್ಲೇಷಿಸಲಾಗುತ್ತಿದೆ. ಪೊಲೀಸ್ ಇಲಾಖೆಯ ವರ್ಗಾವಣೆಗೆ ಸ್ವತಃ ಮುಖ್ಯಮಂತ್ರಿ ತಡೆ ನೀಡಿರುವುದು ಇದಕ್ಕೆ ಪುಷ್ಟಿ ನೀಡಿದೆ.

ದಲಿತೆ ಎಂಬ ಕಾರಣಕ್ಕೆ ರದ್ದು?

ಕವಿತಾ ಅವರು ದಲಿತ ಸಮುದಾಯಕ್ಕೆ ಸೇರಿದವರು. ಈಗಾಗಲೇ ನಗರ ಪೊಲೀಸ್‌ ಇಲಾಖೆಯ ಉನ್ನತ ಸ್ಥಾನದಲ್ಲಿರುವವರೆಲ್ಲ ದಲಿತರೇ ಎಂಬ ಕಾರಣಕ್ಕೆ ಜಿಲ್ಲೆಯ ಸಚಿವರು ಒತ್ತಡ ತಂದು ವರ್ಗಾವಣೆ ಆದೇಶವನ್ನು ರದ್ದುಗೊಳಿಸಿದ್ದಾರೆ ಎಂಬ ಊಹಾಪೋಹಗಳೂ ಹರಡಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು