ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಹಲವು ಪ್ರವಾಸಿ ಸ್ಥಳ ನೋಡುವುದಕ್ಕೆ ಒಂದೇ ಟಿಕೆಟ್!

ದಸರಾ ವೇಳೆಗೆ ಅನುಷ್ಠಾನಗೊಳಿಸಲು ಜಿಲ್ಲಾಡಳಿತ ಕ್ರಮ
Last Updated 7 ಜುಲೈ 2022, 20:00 IST
ಅಕ್ಷರ ಗಾತ್ರ

ಮೈಸೂರು: ನೀವು ಈ ಬಾರಿಯ ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಸಂದರ್ಭದಲ್ಲಿ ‘ಸಾಂಸ್ಕೃತಿಕ ನಗರಿ’ ಮೈಸೂರಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಿದರೆ, ಎಲ್ಲ ಕಡೆಯೂ ಪ್ರತ್ಯೇಕವಾಗಿ ಪ್ರವೇಶ ಟಿಕೆಟ್ ತೆಗೆದುಕೊಳ್ಳುವುದಕ್ಕೆ ‘ಕ್ಯೂ’ ನಿಲ್ಲುವುದು ತಪ್ಪಲಿದೆ. ಒಂದು ಕಡೆಯಲ್ಲಿ ಟಿಕೆಟ್‌ ಖರೀದಿಸಿದರೆ ಹಲವು ಪ್ರೇಕ್ಷಣೀಯ ಸ್ಥಳಗಳಿಗೆ ಪ್ರವೇಶ ಕೊಡುವ ವ್ಯವಸ್ಥೆ ಜಾರಿಗೆ ಜಿಲ್ಲಾಡಳಿತ ಕ್ರಮ ವಹಿಸಿದೆ.

ಅಂಬಾವಿಲಾಸ ಅರಮನೆ, ಚಾಮರಾಜೇಂದ್ರ ಮೃಗಾಲಯ, ಕಾರಂಜಿಕೆರೆ, ಚಾಮುಂಡಿಬೆಟ್ಟ, ಸಂತ ಫಿಲೋಮಿನಾ ಚರ್ಚ್‌, ಲಲಿತಮಹಲ್ ಅರಮನೆ, ರೈಲ್ವೆ ವಸ್ತುಸಂಗ್ರಹಾಲಯ ಹಾಗೂ ನೆರೆಯ ಮಂಡ್ಯ ಜಿಲ್ಲೆಯಲ್ಲಿರುವ ಕೆಆರ್‌ಎಸ್‌ ಬೃಂದಾನದ ಮೊದಲಾದ ತಾಣಗಳಿಗೆ ಪ್ರವಾಸಿಗರು ಮತ್ತು ಸಂದರ್ಶಕರು ಸಾವಿರಾರು ಸಂಖ್ಯೆಯಲ್ಲಿ ಭೇಟಿ ಕೊಡುತ್ತಾರೆ. ವಾರಾಂತ್ಯ ಹಾಗೂ ಸರ್ಕಾರಿ ರಜಾ ದಿನಗಳಲ್ಲಿ ಅಪಾರ ಪ್ರಮಾಣದಲ್ಲಿರುತ್ತದೆ. ಹೀಗೆ ಬರುವವರು, ಎಲ್ಲ ಕಡೆಯೂ ಪ್ರತ್ಯೇಕವಾಗಿ ಟಿಕೆಟ್‌ ಖರೀದಿಸುವ ಮತ್ತು ಇದಕ್ಕಾಗಿ ಸರದಿ ಸಾಲಿನಲ್ಲಿ ನಿಲ್ಲಬೇಕಾದ ಅನಿವಾರ್ಯತೆ ಪ್ರವಾಸಿಗರದಾಗಿದೆ. ಅಲ್ಲದೇ, ಸಮಯವೂ ವ್ಯರ್ಥವಾಗುತ್ತದೆ. ಇದನ್ನು ತಪ್ಪಿಸುವ ಸಲುವಾಗಿ ‘ಒಂದು ಟಿಕೆಟ್; ಹಲವು ಪ್ರವೇಶ’ ಉಪಕ್ರಮವನ್ನು ಜಾರಿಗೊಳಿಸಲು ಯೋಜಿಸಲಾಗಿದೆ. ಟಿಕೆಟ್‌ ದರ ಮೊದಲಾದವು ನಿಗದಿಯಾಗಬೇಕಿದೆ.

ಕೆಲ ವರ್ಷಗಳ ಹಿಂದೆ ಇತ್ತು

2014ರಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗಿತ್ತು. ಪ್ರವಾಸಿಗರಿಂದ ಉತ್ತಮ ಪ್ರತಿಕ್ರಿಯೆಯೂ ವ್ಯಕ್ತವಾಗಿತ್ತು. ಕೋವಿಡ್–19 ಸಾಂಕ್ರಾಮಿಕ, ಲಾಕ್‌ಡೌನ್‌ ಹಾಗೂ ಪ್ರವಾಸಿ ತಾಣಗಳಲ್ಲಿ ವಿಧಿಸಲಾಗಿದ್ದ ನಿರ್ಬಂಧಗಳ ಕಾರಣದಿಂದಾಗಿ ಪ್ರವಾಸೋದ್ಯಮಕ್ಕೆ ಮಂಕು ಕವಿದಿದ್ದರಿಂದಾಗಿ ‘ಒಂದು ಟಿಕೆಟ್‌’ ಯೋಜನೆ ಸ್ಥಗಿತಗೊಂಡಿತ್ತು. ಈಗ, ನಗರದಲ್ಲಿ ಪ್ರವಾಸೋದ್ಯಮ ಗರಿಗೆದರಿರುವುದರಿಂದಾಗಿ ಆಕರ್ಷಣೆಗಳನ್ನು ಹೆಚ್ಚಿಸಲು ಜಿಲ್ಲಾಡಳಿತ ಮುಂದಾಗಿದೆ. ದಸರಾ ಸಂದರ್ಭದಲ್ಲಿ ಇದೊಂದು ಹೊಸ ಆಕರ್ಷಣೆಯೂ ಆಗಲಿದೆ ಎಂದು ಆಶಿಸಲಾಗಿದೆ.

‘ಹಲವು ಪ್ರವಾಸಿ ತಾಣಗಳಿಗೆ ಪ್ರವೇಶಕ್ಕೆ ಒಂದೇ ಟಿಕೆಟ್‌ ಕೊಡುವುದಕ್ಕೆ ನಿರ್ಧರಿಸಲಾಗಿದೆ. ಕೆಲವು ವರ್ಷಗಳ ಹಿಂದೆ ಹೇಗೆ ಅನುಷ್ಠಾನಗೊಳಿಸಲಾಗಿತ್ತು ಎನ್ನುವುದನ್ನು ಪರಿಶೀಲಿಸಿ, ಸುಧಾರಿತ ವ್ಯವಸ್ಥೆ ಜಾರಿಗೊಳಿಸಲಾಗುವುದು. ಬಯಸುವವರು ಮಾತ್ರ ಅಂತಹ ಟಿಕೆಟ್ ಖರೀದಿಸಬಹುದು. ಯಾರಿಗೂ ಒತ್ತಡ ಹೇರುವುದಿಲ್ಲ. ಆಯ್ಕೆಯು ಐಚ್ಛಿಕವಾಗಿರಲಿದೆ' ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ‘ಪ್ರಜಾವಾಣಿ’ಗೆ ತಿಳಿಸಿದರು.

ಸಮಯವೂ ಉಳಿಯಲಿದೆ

‘ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್‌ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜನಪ್ರತಿನಿಧಿಗಳಿಂದಲೂ ಈ ಸಲಹೆ ಬಂದಿದೆ. ಅದನ್ನು ಪರಿಗಣಿಸಲಾಗಿದ್ದು, ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗುತ್ತಿದೆ. ಹೊಸ ವ್ಯವಸ್ಥೆಯಲ್ಲಿ, ಎಲ್ಲ ಕಡೆಯೂ ಟಿಕೆಟ್‌ ಖರೀದಿಸಬೇಕಾದ ಅಗತ್ಯ ಇರುವುದಿಲ್ಲವಾದ್ದರಿಂದ ಸಮಯವೂ ಉಳಿಯಲಿದೆ. ಪ್ರವಾಸಿಗರು, ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆಗೆ ಹೆಚ್ಚಿನ ಸಮಯ ವಿನಿಯೋಗಿಸಬಹುದಾಗಿದೆ’ ಎನ್ನುತ್ತಾರೆ ಅವರು.

ಹೊರ ಜಿಲ್ಲೆ, ರಾಜ್ಯ ಅಥವಾ ವಿದೇಶಗಳಿಂದ ಬರುವ ಪ್ರವಾಸಿಗರು, ಕೌಂಟರ್‌ಗಳಲ್ಲಿ ಸರದಿ ಸಾಲಿನಲ್ಲಿ ನಿಂತು ಟಿಕೆಟ್‌ ಖರೀದಿಸಬೇಕಾದ್ದರಿಂದ ಸಮಯ ವ್ಯರ್ಥವಾಗುತ್ತಿದೆ. ಅಲ್ಲಲ್ಲಿ ಚಿಲ್ಲರೆಯ ಸಮಸ್ಯೆಯೂ ಎದುರಾಗುತ್ತದೆ. ಕುಟುಂಬ ಸಮೇತ ಬಂದವರು ಅಥವಾ ತಂಡಗಳಾಗಿ ಬರುವವರು ಒಂದು ದಿನದಲ್ಲಿ ಹಲವು ತಾಣಗಳನ್ನು ಸಂದರ್ಶಿಸಲು ಸಾಧ್ಯವಾಗುವುದಿಲ್ಲ. ಕ್ಯೂನಲ್ಲೇ ಕಿರಿಕಿರಿ ಅನುಭವಿಸುತ್ತಾ ಹೈರಾಣಾಗುವ ಪರಿಸ್ಥಿತಿ ಇದೆ. ಹೀಗಾಗಿ, ಒಂದೆಡೆಯೇ ಎಲ್ಲ ಟಿಕೆಟ್ ಲಭ್ಯವಾಗುವಂತೆ ಮಾಡಬೇಕು. ಅದನ್ನು ತೋರಿಸಿದರೆ, ಸುಗಮವಾಗಿ ಪ್ರವೇಶ ಸಿಗುವಂತಾಗಬೇಕು ಎನ್ನುವುದು ಸಾರ್ವಜನಿಕರು ಮತ್ತು ಪ್ರವಾಸೋದ್ಯಮ ಕ್ಷೇತ್ರದ ಭಾಗಿದಾರರ ಒತ್ತಾಯವಾಗಿತ್ತು. ಪ್ರವಾಸಿಗರಿಗೆ ಪ್ರಯಾಸವಾಗದಂತಹ ವ್ಯವಸ್ಥೆ ಬೇಕು ಎನ್ನುವುದು ಅವರ ಮನವಿಯಾಗಿತ್ತು.

ಸಮಗ್ರ ವರದಿಗೆ ಸೂಚನೆ

ಹಲವು ಪ್ರವಾಸಿ ತಾಣಗಳ ಪ್ರವೇಶಕ್ಕೆ ಒಂದೇ ಟಿಕೆಟ್‌ ನೀಡುವ ಯೋಜನೆಗೆ ಒಲವು ವ್ಯಕ್ತವಾಗಿದೆ. ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸಮಗ್ರ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ.

–ಎಸ್.ಟಿ. ಸೋಮಶೇಖರ್, ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT