ಸೋಮವಾರ, ಜನವರಿ 27, 2020
14 °C
ನಾಲ್ಕೇ ದಿನಗಳಲ್ಲಿ ಮೊಟ್ಟೆ ಬೆಲೆಯಲ್ಲಿ 37 ಪೈಸೆ ಇಳಿಕೆ

ಮೈಸೂರು : ತಗ್ಗಿದ ಸಗಟು ಈರುಳ್ಳಿ ಬೆಲೆ, ಗ್ರಾಹಕರಿಗೆ ದಕ್ಕದ ಲಾಭ

– ಕೆ.ಎಸ್.ಗಿರೀಶ Updated:

ಅಕ್ಷರ ಗಾತ್ರ : | |

prajavani

ಮೈಸೂರು: ಇಲ್ಲಿನ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಈರುಳ್ಳಿ ದರ ಕೆ.ಜಿ.ಗೆ ₹ 30ಕ್ಕೆ ಇಳಿದಿದೆ. ಆದರೆ, ಚಿಲ್ಲರೆ ಮಾರುಕಟ್ಟೆಯಲ್ಲಿ ₹ 60ರಿಂದ ₹ 70ರಲ್ಲೇ ಮಾರಾಟವಾಗುತ್ತಿದೆ.

‘ಜನವರಿ 8ರಂದು ಉತ್ತಮ ದರ್ಜೆಯ ಈರುಳ್ಳಿಯ ಸಗಟು ಧಾರಣೆ ಕೆ.ಜಿ.ಗೆ ₹ 50 ಇತ್ತು. ಸೋಮವಾರ ₹ 30ಕ್ಕೆ ತಗ್ಗಿದೆ’ ಎಂದು ಎಪಿಎಂಸಿ ಬಾಬಾ ಟ್ರೇಡಿಂಗ್‌ ಕಂಪನಿಯ ಸೈಯದ್‌ ಫರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

ಚಿಲ್ಲರೆ ಮಾರುಕಟ್ಟೆಯಲ್ಲಿ ದರ ಕಡಿಮೆ ಮಾಡದೇ ಮಧ್ಯವರ್ತಿಗಳು ಹಾಗೂ ವ್ಯಾಪಾರಸ್ಥರು ಲಾಭ ಮಾಡಿಕೊಳ್ಳುತ್ತಿದ್ದಾರೆ. ‘ಹಾಪ್‌ಕಾಮ್ಸ್‌’ನಲ್ಲಿ ಕೆ.ಜಿ ಈರುಳ್ಳಿಗೆ ₹ 70 ಇದೆ. ನಾಸಿಕ್, ಅಹಮ್ಮದ್‌ನಗರ, ಪುಣೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಬರುತ್ತಿರುವುದು ಸಗಟು ಬೆಲೆ ಕುಸಿತಕ್ಕೆ ಕಾರಣವಾಗಿದೆ.

ಈಜಿಪ್ಟ್‌ ಈರುಳ್ಳಿಗಿಲ್ಲ ಬೇಡಿಕೆ

‘ಈಜಿಪ್ಟ್‌ ದೇಶದಿಂದ ಬಂದಿರುವ ಈರುಳ್ಳಿಗೆ ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲ. ಇದರ ವಾಸನೆ ಮತ್ತು ಗುಣಮಟ್ಟ ನಮ್ಮ ಈರುಳ್ಳಿಯ ಹಾಗೆ ಇಲ್ಲ ಎಂದು ಖರೀದಿದಾರರು ದೂರ ಸರಿಯುತ್ತಿದ್ದಾರೆ’ ಎಂದು ಸೈಯದ್‌ ಫರಾಜ್ ಹೇಳುತ್ತಾರೆ. ಮಹಾರಾಷ್ಟ್ರದಲ್ಲಿ ಉತ್ತಮ ಇಳುವರಿ ಬಂದಿರುವುದರಿಂದ ಸಹಜವಾಗಿಯೇ ಅದಕ್ಕೆ ಬೇಡಿಕೆ ಸೃಷ್ಟಿಯಾಗಿದೆ.

ನಾಲ್ಕೇ ದಿನಗಳಲ್ಲಿ ಮೊಟ್ಟೆ ಬೆಲೆಯಲ್ಲಿ 37 ಪೈಸೆ ಇಳಿಕೆ

ವರ್ಷದ ಆರಂಭದಲ್ಲಿ ಬೆಲೆ ಏರಿಕೆಯಿಂದ ಮೊಟ್ಟೆ ಉತ್ಪಾದಕರಲ್ಲಿ ನಿರೀಕ್ಷೆ ಮೂಡಿತ್ತು. ಆದರೆ, ಈಗ ಮೊಟ್ಟೆ ಬೆಲೆಯು ಇಳಿಕೆಯ ಹಾದಿ ಹಿಡಿದಿದೆ. ಇದರಿಂದ ಮೊಟ್ಟೆ ಉತ್ಪಾದಕರು ಮತ್ತೆ ನಷ್ಟಕ್ಕೆ ಗುರಿಯಾಗಬೇಕಾಗಿದೆ.

ರಾಷ್ಟ್ರೀಯ ಮೊಟ್ಟೆ ದರ ಸಮನ್ವಯ ಸಮಿತಿಯ ದರವು ಒಂದು ಮೊಟ್ಟೆಗೆ ಜ. 4ರಂದು ₹ 4.89 ದಾಖಲಾಗಿತ್ತು. ಈಗ ಇದರ ದರ ₹ 4.35ಕ್ಕೆ ಇಳಿಕೆ ಕಂಡಿದೆ. ಕಳೆದ ಮೂರು ದಿನಗಳಿಂದ ಈಚೆಗೆ ಇದರ ದರ 37 ಪೈಸೆಯಷ್ಟು ಕಡಿಮೆಯಾಗಿರುವುದು ಚಿಂತೆಗೆ ಕಾರಣವಾಗಿದೆ. ಕೋಳಿ ಆಹಾರದ ಬೆಲೆ ಹೆಚ್ಚಾಗಿರುವುದರಿಂದ ಮೊಟ್ಟೆ ದರದ ಇಳಿಕೆ ತೀವ್ರ ನಿರಾಸೆ ಮೂಡಿಸಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು