ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆರಿಗೆ ಪಾವತಿಗೆ ಶೀಘ್ರವೇ ಆನ್‌ಲೈನ್‌

ಮೈಸೂರು ಮಹಾನಗರ ಪಾಲಿಕೆ ಸಿದ್ಧತೆ, ವಿವಿಧ ಪಾಲಿಕೆಗಳ ವ್ಯವಸ್ಥೆ ಅಧ್ಯಯನ
Last Updated 29 ಏಪ್ರಿಲ್ 2019, 10:51 IST
ಅಕ್ಷರ ಗಾತ್ರ

ಮೈಸೂರು: ಆಸ್ತಿ ತೆರಿಗೆ ಪಾವತಿಸಲು ಹಾಗೂ ವ್ಯಾಪಾರ ಪರವಾನಗಿ ಪಡೆಯಲು ಆನ್‌ಲೈನ್‌ ವ್ಯವಸ್ಥೆ ಜಾರಿ ಗೊಳಿಸಲು ಮೈಸೂರು ಮಹಾನಗರ ಪಾಲಿಕೆ (ಎಂಸಿಸಿ) ಸಿದ್ಧತೆ ನಡೆಸಿದೆ.

ಈ ಉದ್ದೇಶದಿಂದ ನಗರದಲ್ಲಿರುವ ಸುಮಾರು 2 ಲಕ್ಷ ಆಸ್ತಿಗಳ ಮಾಹಿತಿ ಸಂಗ್ರಹಿಸಿ, ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲು ಮುಂದಾಗಿದೆ.

‘ತುಮಕೂರು ಪಾಲಿಕೆಯಲ್ಲಿ ವ್ಯವಸ್ಥೆ ಬಗ್ಗೆ ಅಧ್ಯಯನ ನಡೆಸುತ್ತಿದ್ದೇವೆ. ಅಲ್ಲಿನ ಆಯುಕ್ತರೊಂದಿಗೆ ಚರ್ಚಿಸಿ ದ್ದೇವೆ. ಶೀಘ್ರವೇ ಆನ್‌ಲೈನ್‌ ವ್ಯವಸ್ಥೆ ಜಾರಿಗೆ ತರಲಾಗುವುದು. ಕೌನ್ಸಿಲ್‌ ಕೂಡ ಒಪ್ಪಿಗೆ ನೀಡಿದೆ. ಪಾಲಿಕೆಯನ್ನು ಜನಸ್ನೇಹಿಯಾಗಿಸಲು ಪ್ರಯತ್ನಿಸಲಾಗುತ್ತಿದೆ’ ಎಂದು ಪಾಲಿಕೆ ಆಯುಕ್ತರಾದ ಶಿಲ್ಪಾನಾಗ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ರಾಜ್ಯದಲ್ಲಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹೊರತುಪಡಿಸಿದರೆ ಅತಿ ದೊಡ್ಡ ಪಾಲಿಕೆ ಮೈಸೂರು. ಸ್ವಚ್ಛನಗರಿ ಪಟ್ಟದ ಮೂಲಕ ದೇಶದ ಗಮನ ಸೆಳೆದಿದೆ. ಆದರೆ, ತಾಂತ್ರಿಕ ವಿಚಾರದಲ್ಲಿ ಹಿಂದೆ ಉಳಿದಿದೆ. ಆಸ್ತಿ ತೆರಿಗೆ ಪಾವತಿಗೆ ಆನ್‌ಲೈನ್‌ ವ್ಯವಸ್ಥೆ ಜಾರಿಗೆ ತರಬೇಕೆಂಬುದು ಮೈಸೂರು ನಾಗರಿಕರ ಹಲವು ವರ್ಷಗಳ ಬೇಡಿಕೆ. ಈ ವ್ಯವಸ್ಥೆ ಜಾರಿಗೆ ಬರುವವರೆಗೆ ಬೆಂಗಳೂರಿನಲ್ಲಿ ಇರುವಂತೆ ಆಯ್ದ ಬ್ಯಾಂಕ್‌ಗಳಲ್ಲಿ ಕಂದಾಯ ಮೊತ್ತ ಪಾವತಿಸಲು ಅನುವು ಮಾಡಿಕೊಡಬೇಕು ಎಂಬುದು ಆಗ್ರಹವಾಗಿದೆ.

9 ವಲಯ ಕಚೇರಿಗಳಿದ್ದು, ತೆರಿಗೆ ಪಾವತಿಸಲು ನಾಗರಿಕರು ಸಮಸ್ಯೆ ಎದುರಿಸುತ್ತಿದ್ದಾರೆ. ಕಚೇರಿಗೆ ಅಲೆದು, ಟೇಬಲ್‌ಗಳನ್ನು ಸುತ್ತಿ, ಅರ್ಜಿ ಭರ್ತಿ ಮಾಡಿ, ಬ್ಯಾಂಕ್‌ ಕೌಂಟರ್‌ಗಳಲ್ಲಿ ಸರತಿ ಸಾಲಿನಲ್ಲಿ ನಿಂತು ಪಾವತಿಸಬೇಕಿದೆ. ಇದಕ್ಕಾಗಿ ಒಂದು ದಿನ ವ್ಯರ್ಥವಾಗಲಿದೆ ಎಂಬುದು ಕೆಲವರ ಅಳಲು.

ಈ ವ್ಯವಸ್ಥೆ ಜಾರಿಗೆ ಬಂದರೆ ಮನೆಯಲ್ಲಿ ಕುಳಿತು ಮೊಬೈಲ್‌ ಅಥವಾ ಕಂಪ್ಯೂಟರ್‌ನಲ್ಲಿಯೇ ಆಸ್ತಿ ತೆರಿಗೆ ಪಾವತಿಸಬಹುದು. ವ್ಯಾಪಾರ ಪರವಾನಗಿ ಅಥವಾ ನವೀಕರಣಕ್ಕೂ ಅರ್ಜಿ ಸಲ್ಲಿಸಬಹುದು. ಆಸ್ತಿ ತೆರಿಗೆ ಸಂಗ್ರಹದಲ್ಲೂ ಹೆಚ್ಚಳವಾಗುವ ನಿರೀಕ್ಷೆ ಇದೆ.

‘ನಗರ ಯೋಜನಾ ಶಾಖೆಯು ಕಟ್ಟಡಗಳ ನಕ್ಷೆ ಅನುಮೋದನೆಯನ್ನು ಆನ್‌ಲೈನ್‌ ಮಾಡಲು ಆದ್ಯತೆ ನೀಡಲಾ ಗುವುದು. ಯುಜಿಡಿ ಸಂಬಂಧಿಸಿದ ಸಮಸ್ಯೆಗಳು ಹಾಗೂ ನೀರಿನ ಶುಲ್ಕ ಪಾವತಿಗೂ ಹಂತಹಂತವಾಗಿ ಆನ್‌ಲೈನ್‌ ಸೌಲಭ್ಯ ಜಾರಿಗೆ ತರಲಾಗುವುದು’ ಎಂದು ಮಾಹಿತಿ ನೀಡಿದರು.

ಐದು ವರ್ಷಗಳ ಹಿಂದೆಯೇ ಇಂಥ ವ್ಯವಸ್ಥೆ ಜಾರಿಗೆ ಪಾಲಿಕೆ ಮುಂದಾಗಿತ್ತು. ಅದಕ್ಕಾಗಿ ಸಾಫ್ಟ್‌ವೇರ್‌ ಕೂಡ ಅಭಿವೃದ್ಧಿಪಡಿಸಿತ್ತು. ಅಷ್ಟೇ ಅಲ್ಲ; ಆಸ್ತಿ ತೆರಿಗೆದಾರರ ಸಮೀಕ್ಷೆ ನಡೆಸಿ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡಿತ್ತು. ಆದರೆ, ತಾಂತ್ರಿಕ ಕಾರಣಗಳಿಂದ ಈ ವ್ಯವಸ್ಥೆ ವಿಳಂಬವಾಗಿದೆ. ಅಲ್ಲದೇ, ಯೋಜನೆ ತ್ವರಿತಗೊಳಿಸಲು ಹಿಂದಿನ ಆಯುಕ್ತರು ಹಾಗೂ ಅಧಿಕಾರಿಗಳು ಆಸಕ್ತಿ ತೋರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT