ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

6ರಿಂದ 4 ಎಕರೆಗೆ ಕುಗ್ಗಿದ ಹೆಲಿಪ್ಯಾಡ್ ವಿಸ್ತೀರ್ಣ

ಸದ್ಯ ಗುರುತು ಮಾಡಿರುವ ಮರಗಳನ್ನು ಕೈ ಬಿಡುವ ಸಾಧ್ಯತೆ
Last Updated 6 ಏಪ್ರಿಲ್ 2021, 11:05 IST
ಅಕ್ಷರ ಗಾತ್ರ

ಮೈಸೂರು: ಉದ್ದೇಶಿತ ಹೆಲಿಪ್ಯಾಡ್‌ನ ವಿಸ್ತೀರ್ಣವನ್ನು ಕಡಿಮೆ ಮಾಡಲು ಪ್ರವಾಸೋದ್ಯಮ ಇಲಾಖೆ ನಿರ್ಧರಿಸಿದೆ. ಈ ಮೊದಲು ಇಲಾಖೆಗೆ ಸೇರಿದ 6 ಎಕರೆ ಪ್ರದೇಶದಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿತ್ತು. ಆದರೆ, ಈಗ 4 ಎಕರೆ ಪ್ರದೇಶದಲ್ಲಷ್ಟೇ ನಿರ್ಮಿಸಲು ನಿರ್ಧರಿಸಲಾಗಿದ್ದು, ಪರಿಷ್ಕೃತ ನಕ್ಷೆ ಇನ್ನೆರಡು ದಿನಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.

ಈ ಕುರಿತು ‘ಪ್ರಜಾವಾಣಿ’ ಪ್ರವಾಸೋದ್ಯಮ ಇಲಾಖೆಯ ಜಂಟಿ ನಿರ್ದೇಶಕ ಮೋತಿಲಾಲ್‌ ಅವರನ್ನು ಸಂಪರ್ಕಿಸಿದಾಗ, ಅವರು ಈ ವಿಷಯವನ್ನು ಖಚಿತಪಡಿಸಿದರು.

‘ಹೆಲಿಪ್ಯಾಡ್‌ ನಿರ್ಮಾಣ ಯೋಜನೆ ಅಂತಿಮ ಸ್ವರೂಪಕ್ಕೆ ಬಂದಿಲ್ಲ. ಕೇವಲ ಸಮೀಕ್ಷಾ ಕಾರ್ಯ ಮಾತ್ರವೇ ನಡೆಯುತ್ತಿದೆ. ನಮ್ಮ ಇಲಾಖೆಗೆ ಸೇರಿದ ಸುಮಾರು 48 ಎಕರೆಯಷ್ಟು ಭೂಮಿ ಇಲ್ಲಿದೆ. ಇಲ್ಲಿ ಮೊದಲು 6 ಎಕರೆಯಷ್ಟು ಭೂಮಿಯ ಸಮೀಕ್ಷಾ ಕಾರ್ಯ ನಡೆದಿತ್ತು. ಆದರೆ, ಈಗ 4 ಎಕರೆಗಷ್ಟೇ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಇಲ್ಲಿ ಹೆಚ್ಚಿನ ದೊಡ್ಡ ಮರಗಳು ಇಲ್ಲ. ಕೇವಲ ಗಿಡಗಂಟಿಗಳು ಹಾಗೂ ಸಣ್ಣಸಣ್ಣ ಮರಗಳಷ್ಟೇ ಇವೆ. ಯಾವುದು ಸಹ ಅಂತಿಮ ಸ್ವರೂಪ ಪಡೆದಿಲ್ಲ’ ಎಂದುಮೋತಿಲಾಲ್‌ ತಿಳಿಸಿದರು.

‘ಉದ್ದೇಶಿತ ಜಾಗದಿಂದ ತುಸು ಮುಂದೆ ಮತ್ತೆ ಸಮೀಕ್ಷಾ ಕಾರ್ಯ ನಡೆಸಲು ಸೂಚಿಸಲಾಗಿದೆ. ಇನ್ನೆರಡು ದಿನಗಳಲ್ಲಿ ಪರಿಷ್ಕೃತ ನಕ್ಷೆ ಹೊರಬರುವ ಸಾಧ್ಯತೆ ಇದೆ’ ಎಂದು ಅರಣ್ಯ ಇಲಾಖೆಯ ಹೆಸರು ಬಹಿರಂಗಪಡಿಸಲು ಬಯಸದ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಇಲ್ಲೇ ಏಕೆ ಹೆಲಿಪ್ಯಾಡ್?

ಪ್ರವಾಸೋದ್ಯಮ ಇಲಾಖೆಯಡಿ ಬರುವ ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ (ಜಂಗಲ್‌ ಲಾಡ್ಜಸ್‌ ಅಂಡ್‌ ರೆಸಾರ್ಟ್‌)ಗೆ ಉದ್ದೇಶಿತ ಜಾಗವು ಸೇರುತ್ತದೆ. ಇಲ್ಲಿಯೇ ನಿರ್ಮಿಸಬೇಕು ಎಂಬುದಕ್ಕೆ ಭಾರಿ ರಾಜಕೀಯ ಒತ್ತಡವೂ ಇದೆ. ಹೋಟೆಲ್ ಸಹ ಸನಿಹದಲ್ಲೇ ಇರುವುದರಿಂದ ಪ್ರವಾಸೋದ್ಯಮ ಗರಿಗೆದರುತ್ತದೆ ಎಂಬ ಆಶಯವೂ ಇದರ ಬೆನ್ನಿಗಿದೆ. ಬೇರೆ ಕಡೆ ಇಲಾಖೆಗೆ ಸೇರಿದ ಭೂಮಿ ಇಲ್ಲ. ಭೂಸ್ವಾಧೀನಕ್ಕೆ ಕೈ ಹಾಕಿದರೆ ಆರ್ಥಿಕ ಹೊರೆ ಅಧಿಕವಾಗುತ್ತದೆ. ಹಾಗಾಗಿ, ಇಲ್ಲಿಯೇ ಹೆಲಿಪ್ಯಾಡ್‌ ನಿರ್ಮಿಸಲು ಇಲಾಖೆ ಉತ್ಸುಕವಾಗಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಹೆಸರು ಬಹಿರಂಗಪಡಿಸಲು ಬಯಸದ ಅಧಿಕಾರಿಯೊಬ್ಬರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT