ಶನಿವಾರ, ಮಾರ್ಚ್ 28, 2020
19 °C
ವಿನೂತನ ಕೇಂದ್ರದ ಲೋಕಾರ್ಪಣೆ ಮಾರ್ಚ್ 14ರಂದು

ಜೆಎಸ್‌ಎಸ್‌ನಲ್ಲಿ ವಿನೂತನ ಕೇಂದ್ರ: ರೋಗಿಗಳಿಲ್ಲದೇ ಶಸ್ತ್ರಚಿಕಿತ್ಸಾ ತರಬೇತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳಿಗೆ ರೋಗಿಗಳಿಲ್ಲದೇ ಶಸ್ತ್ರಚಿಕಿತ್ಸೆ ಸೇರಿದಂತೆ ವಿವಿಧ ಬಗೆಯ ಚಿಕಿತ್ಸೆಗಳ ತರಬೇತಿ ನೀಡುವಂತಹ ವಿನೂತನ ಅತ್ಯಾಧುನಿಕ ವ್ಯವಸ್ಥೆಯೊಂದನ್ನು ಜೆಎಸ್‌ಎಸ್‌ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಕಲ್ಪಿಸಿದೆ.

‘ಕೌಶಲಯುಕ್ತ ಸಿಮುಲೇಷನ್ (ಪ್ರತ್ಯಾನುಕರಣೆ) ಕೇಂದ್ರವು ಈಗಾಗಲೇ ರಾಜ್ಯದಲ್ಲಿ 3 ಕಡೆ ಇವೆ. ಆದರೆ, ಅತ್ಯಾಧುನಿಕ, ಅಂತರರಾಷ್ಟ್ರೀಯಮಟ್ಟದ ಸಲಕರಣೆಗಳನ್ನು ಹೊಂದಿರುವಂತಹ ರಾಜ್ಯದ ಮೊದಲ ಕೇಂದ್ರ ಎಂಬ ಹೆಗ್ಗಳಿಕೆಗೆ ಈ ಕೇಂದ್ರ ಪಾತ್ರವಾಗಿದೆ’ ಎಂದು ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ.ಬೆಟಸೂರಮಠ ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.‌

ಮಾರ್ಚ್ 14ರಂದು ಬೆಳಿಗ್ಗೆ 10.30ಕ್ಕೆ ಜೆಎಸ್ಎಸ್ ಆಸ್ಪತ್ರೆಯ ಶ್ರೀರಾಜೇಂದ್ರ ಶತಮಾನೋತ್ಸವ ಭವನದಲ್ಲಿ ‘ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ’ದ ಪ್ರಧಾನಕಾರ್ಯದರ್ಶಿ ಡಾ.ರಾಕೇಶ್‌ಕುಮಾರ್ ವಾಟ್ಸ್‌ ಉದ್ಘಾಟಿಸಲಿದ್ದು, ಸಚಿವ ವಿ.ಸೋಮಣ್ಣ ಅಧ್ಯಕ್ಷತೆ ವಹಿಸುವರು ಎಂದು ಅವರು ಹೇಳಿದರು.

ಕೇಂದ್ರದಲ್ಲಿ ಏನೇನಿದೆ?

ಜೆಎಸ್ಎಸ್ ಹಳೆಯ ಆಸ್ಪತ್ರೆಯ 12 ಸಾವಿರ ಅಡಿ ಜಾಗದಲ್ಲಿ ₹ 20 ಕೋಟಿ ವೆಚ್ಚದಲ್ಲಿ ಈ ಕೇಂದ್ರವು ತಲೆ ಎತ್ತಿದೆ. ಇದರಲ್ಲಿ ಶಸ್ತ್ರಚಿಕಿತ್ಸಾ ಕೊಠಡಿ ಸೇರಿದಂತೆ ವಿವಿಧ ಬಗೆಯ ಚಿಕಿತ್ಸೆ ನೀಡುವ ಕೊಠಡಿಗಳು ಹೇಗಿವೆಯೋ ಹಾಗೇಯೇ ಕೊಠಡಿಗಳನ್ನು ವಿನ್ಯಾಸಗೊಳಿಸಲಾಗಿದೆ. ಆದರೆ, ಇಲ್ಲಿರುವವರು ರೋಗಿಗಳಲ್ಲ. ಅವರ ಬದಲಿಗೆ ರೋಗಿಗಳ ಹಲವು ಮಾದರಿಗಳನ್ನು ಇರಿಸಲಾಗಿದೆ.

ಪ್ರಸವ, ಹೃದಯಾಘಾತ, ಶಸ್ತ್ರಚಿಕಿತ್ಸೆಗಳು, ಲ್ಯಾಪ್ರೊಸ್ಕೋಪಿಕ್ ಸೇರಿದಂತೆ ಹಲವು ಬಗೆಯ ಚಿಕಿತ್ಸೆಗಳನ್ನು ರೋಗಿಗಳ ಮಾದರಿಯಲ್ಲಿರುವ ಪ್ರತಿಕೃತಿಗಳಿಗೆ ನೀಡುವ ವ್ಯವಸ್ಥೆ ಇದೆ. ನೈಜ ರೋಗಿಯ ಪ್ರತಿಕ್ರಿಯೆಗಳನ್ನು ಇವು ನೀಡುತ್ತವೆ. ಇದರಿಂದ ಹಿರಿಯ ವೈದ್ಯರ ಜತೆ ರೋಗಿಗಳ ಮೇಲೆ ಶಸ್ತ್ರಚಿಕಿತ್ಸೆ ನಡೆಸಿ, ತರಬೇತಿ ಹೊಂದುವ ಬದಲು, ನೇರವಾಗಿ ಈ ರೋಗಿಗಳ ಮಾದರಿಗಳ ಮೇಲೆ ಶಸ್ತ್ರಚಿಕಿತ್ಸೆ ನೀಡಿದರೆ ವಿದ್ಯಾರ್ಥಿಗಳ ಕಲಿಕೆ ಇನ್ನಷ್ಟು ಗಟ್ಟಿಗೊಳ್ಳುತ್ತದೆ ಎಂದು ಸಂಯೋಜಕರಾದ ಡಾ.ಎಸ್.ಅರ್ಚನಾ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)