ಗುರುವಾರ , ಜನವರಿ 27, 2022
21 °C
ಮೆಲ್ಲಹಳ್ಳಿ ಬಳಿ 98 ಎಕರೆ ಪ್ರದೇಶದಲ್ಲಿ ‘ಶ್ರೀದತ್ತ ಫಾರಂ’

ಮೈಸೂರು | ಗಣಪತಿ ಸಚ್ಚಿದಾನಂದ ಸ್ವಾಮೀಜಿಯ ಸಾವಯವ ಕೃಷಿ, ಹಸು ಪಾಲನೆ ಪ್ರೀತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವರುಣಾ: ಮೈಸೂರಿನ ಅವಧೂತ ದತ್ತಪೀಠದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಸಾವಯವ ಕೃಷಿ ಮತ್ತು ದೇಸಿ ಹಸುಗಳ ಪಾಲನೆ ಮಾಡಿ ಗಮನ ಸೆಳೆದಿದ್ದಾರೆ.

ವರುಣಾ ಹೋಬಳಿಯ ಮೆಲ್ಲಹಳ್ಳಿ ಸಮೀಪದ ನೀರಹಳ್ಳ ಪ್ರದೇಶದಲ್ಲಿರುವ 98 ಎಕರೆ ಪ್ರದೇಶದ ‘ಶ್ರೀದತ್ತ ಫಾರಂ’ನಲ್ಲಿ ಸ್ವಾಮೀಜಿ ಕಳೆದ 30 ವರ್ಷಗಳಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಜೊತೆಗೆ 100ಕ್ಕೂ ಹೆಚ್ಚು ದೇಸಿ ತಳಿಗಳ ಹಸುಗಳನ್ನು ಸಾಕುತ್ತಿದ್ದಾರೆ. ಬಿಳಿ ರಾಗಿ, ಬಾಸುಮತಿ ಭತ್ತ, ಬಾಳೆ, ತೆಂಗು, ಹಣ್ಣಿನ ಬೆಳೆಗಳನ್ನು ಬೆಳೆಯುತ್ತಿದ್ದಾರೆ.

‘ವಜ್ರೋತ್ಸವ ಗೋಶಾಲೆ’ಯಲ್ಲಿ ದೇಸಿ ತಳಿಗಳಾದ ಗೀರ್, ಸಾಯಿವಾಲ, ರಂಡ್ ಸಿಂಧಿ, ಟಾರ್ ಪಾರ್ಕಾರ್, ಪುಂಗನೂರು, ರಾಟಿ ಮತ್ತಿತರ ಹಸುಗಳನ್ನು ಸಾಕಿದ್ದಾರೆ. ಇವುಗಳಲ್ಲಿ ಉತ್ಪತ್ತಿಯಾಗುವ ಹಾಲನ್ನು ಮಠಕ್ಕೆ ಬಳಸಲಾಗುತ್ತದೆ. ಹೆಚ್ಚುವರಿ ಹಾಲನ್ನು ಡೇರಿಗೆ ಹಾಕಲಾಗುತ್ತದೆ. ಹಸುಗಳ ಮೇವಿಗಾಗಿ ಸಿ.ಒ–3, ನೇಪಿಯರ್, ಸೂಪರ್ ನೇಪಿಯರ್‌ ಶುಂಠಿಹುಲ್ಲು ಬೆಳೆಯಲಾಗಿದೆ. ಸಗಣಿ, ಗಂಜಲ ಹಾಗೂ ಆಶ್ರಮದ ಹಸಿ ತ್ಯಾಜ್ಯವನ್ನು ಬಳಸಿ ಸಾವಯವ ಗೊಬ್ಬರ ತಯಾರಿಸಿ ಬೆಳೆಗಳಿಗೆ ನೀಡಲಾಗುತ್ತದೆ.

ಸಿರಿಧಾನ್ಯಗಳಾದ ನವಣೆ, ಹಾರಕ, ಬರಗು, ಸಾಮೆ, ಊದಲು ಬೆಳೆದು, ಮಠದಲ್ಲಿರುವ ಶುಕವನದ ಪಕ್ಷಿಗಳಿಗೆ ಆಹಾರವಾಗಿ ಬಳಸಲಾಗುತ್ತಿದೆ.

‘ಮೂರು ಎಕರೆ ಪ್ರದೇಶದಲ್ಲಿ ರುದ್ರಾಕ್ಷಿ ವನವಿದ್ದು, ಪ್ರತಿ ವರ್ಷ 25 ಕ್ವಿಂಟಲ್ ಮೂರು ಮುಖದ ರುದ್ರಾಕ್ಷಿ ಬೆಳೆಯುತ್ತಿದ್ದು, ಆಶ್ರಮದ ಭಕ್ತರಿಗೆ ರುದ್ರಾಕ್ಷಿ ವಿತರಿಸಲಾಗುತ್ತದೆ. ರುದ್ರಾಕ್ಷಿ ರಥವನ್ನು ನಿರ್ಮಿಸುವ ಉದ್ದೇಶವಿದೆ’ ಎಂದು ಫಾರಂನ ನಿರ್ವಾಹಕ ವೇಣುಗೋಪಾಲ್ ತಿಳಿಸಿದರು.

‘ಪ್ರಗತಿಪರ ಕೃಷಿಕ ನಗುವನ ಹಳ್ಳಿ ಬೋರೇಗೌಡ ಅವರ ಮಾರ್ಗದರ್ಶನ ದಲ್ಲಿ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಕೃಷಿ ಚಟುವಟಿಕೆ ನಡೆಸುತ್ತಿದ್ದಾರೆ. ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ನೆರವಾಗಿದ್ದಾರೆ’ ಎಂದು ಅವರು ಹೇಳಿದರು.

***

ಸಾವಯುವ ಕೃಷಿಯಿಂದ ನಮ್ಮ ಆರೋಗ್ಯ ಹಾಗೂ ಭೂಮಿಯ ಫಲವತ್ತತೆ ರಕ್ಷಣೆ ಮಾಡಿದಂತಾಗುತ್ತದೆ.
–ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಅವಧೂತ ದತ್ತಪೀಠ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.