ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭತ್ತ ಬೆಳೆದವರ ಗೋಳು ಕೇಳೋರಿಲ್ಲ! ದುಬಾರಿಯಾದ ಕಟಾವಿನ ವೆಚ್ಚ

ದುಬಾರಿಯಾದ ಕಟಾವಿನ ವೆಚ್ಚ l ಮಧ್ಯವರ್ತಿಗಳದ್ದೇ ಕಾರುಬಾರು l ಫಸಲು ಒಣಗಿಸಲು ಸಾಕಾಗದ ಬಿಸಿಲು
Last Updated 16 ಡಿಸೆಂಬರ್ 2021, 0:45 IST
ಅಕ್ಷರ ಗಾತ್ರ

ಮೈಸೂರು: ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಭತ್ತದ ಕಟಾವಿನ ವೆಚ್ಚ ಎರಡು ಪಟ್ಟಿಗಿಂತ ಹೆಚ್ಚಾಗಿದ್ದು, ಬೆಳೆಗಾರರ ಸಂಕಷ್ಟ ಮತ್ತಷ್ಟು ಬಿಗಡಾಯಿಸಿದೆ.

ಮೂರು ತಿಂಗಳಿಂದ ಬಿಡದೆ ಸುರಿದ ಮಳೆಯು ರೈತರನ್ನು ಹೈರಣಾಗಿಸಿದೆ. ಮೋಡ ಕವಿದ ವಾತಾವರಣದ ನಡುವೆ ನೆಲ ಒಣಗಲು ಸಾಕಾಗುವಷ್ಟು ಬಿಸಿಲಿಲ್ಲ. ಈ ಬಾರಿ ಎಂದಿನಂತೆ ಟೈಯರ್ ವೀಲ್‌ ಇರುವ ಭತ್ತದ ಕಟಾವು ಯಂತ್ರ ಗದ್ದೆಗಿಳಿಯಲಾಗದ ಸ್ಥಿತಿ ಇದೆ. ಈ ಯಂತ್ರಕ್ಕೆ ಕಳೆದ ವರ್ಷ ಪ್ರತಿ ಗಂಟೆಗೆ ₹ 1,500 ವರೆಗೂ ಗರಿಷ್ಠ ದರ ನಿಗದಿಯಾಗಿತ್ತು.

ಒದ್ದೆ ನೆಲದಿಂದಾಗಿ ಅನಿವಾರ್ಯ ವಾಗಿ ರೈತರು ಚೈನ್‌ ವೀಲ್ ಭತ್ತದ ಕಟಾವು ಯಂತ್ರದ ಮೊರೆ ಹೋಗಬೇಕಿದೆ. ಕಳೆದ ವರ್ಷ ಈ ಯಂತ್ರಕ್ಕೆ ಪ್ರತಿ ಗಂಟೆಗೆ ಗರಿಷ್ಠ ₹ 2,500ದವರೆಗೆ ಇತ್ತು. ಈಗ ₹ 3,200ಕ್ಕೇರಿದೆ. ಪ್ರತಿ ಎಕರೆ ಕಟಾವು ಮಾಡಲು ಕನಿಷ್ಠ ಎರಡು ಗಂಟೆ ಕಾಲವಾದರೂ ಬೇಕು. ಕಳೆದ ವರ್ಷದ ಕಟಾವಿನ ವೆಚ್ಚ ₹ 3,000ಕ್ಕೆ ಮುಗಿದಿತ್ತು. ಈಗ ₹ 6,800ವರೆಗೂ ತಲುಪಿದ್ದು ರೈತರು ಪರದಾಡುತ್ತಿದ್ದಾರೆ.

ತಮಿಳುನಾಡಿನಿಂದ ನೂರಾರು ಸಂಖ್ಯೆಯಲ್ಲಿ ಭತ್ತ ಕಟಾವು ಯಂತ್ರಗಳನ್ನು ಮಧ್ಯವರ್ತಿಗಳು ತಂದಿದ್ದಾರೆ. ‘ಮೂಲ ಮಾಲೀಕರಿಂದ ಕಡಿಮೆ ವೆಚ್ಚದಲ್ಲಿ ತಂದಿರುವ ಅವರು ಕೃತಕ ಅಭಾವ ಸೃಷ್ಟಿಸಿ ಹೆಚ್ಚಿನ ದರ ಪಡೆಯುತ್ತಿದ್ದಾರೆ’ ಎಂಬ ಆರೋಪವೂ ಕೇಳಿ ಬಂದಿದೆ.

ತಮಿಳುನಾಡಿನಿಂದ ಬರುವ ಯಂತ್ರಗಳನ್ನು ಬಿಟ್ಟರೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯವರ ಬಳಿ 20, ಕೃಷಿ ಇಲಾಖೆಯ ಕೃಷಿ ಯಂತ್ರಧಾರೆಯಲ್ಲಿ ಬೆರಳೆಣಿಕೆಯಷ್ಟು ಯಂತ್ರಗಳನ್ನು ಬಿಟ್ಟರೆ ಬೇರೆಲ್ಲೂ ಇಲ್ಲ. ಹೀಗಾಗಿ, ರೈತರೆಲ್ಲರೂ ಅನಿವಾರ್ಯವಾಗಿ ತಮಿಳುನಾಡಿನ ಯಂತ್ರಗಳನ್ನೇ ಅವಲಂಬಿಸಬೇಕಿದೆ.

ದರ ನಿಗದಿಯೇ ಆಗಿಲ್ಲ!

ಭತ್ತದ ಕಟಾವು ಯಂತ್ರಗಳಿಗೆ ದರ ನಿಗದಿಪಡಿಸುವ ಕುರಿತು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆಯೇ ನಡೆದಿಲ್ಲ. ಕಳೆದ ವರ್ಷ ಕೋವಿಡ್ ಕಾರಣಕ್ಕೆ ಸಭೆ ನಡೆಯಲಿಲ್ಲ. ಈ ವರ್ಷವೂ ಸಭೆ ನಡೆಸದೇ ದರ ನಿಗದಿಪಡಿಸಿಲ್ಲ. ರೈತರ ಸಂಕಷ್ಟವನ್ನು ಕೇಳುವವರಿಲ್ಲದ ಸ್ಥಿತಿ ನಿರ್ಮಾಣವಾಗಿದೆ.

‘ಕಟಾವು ಯಂತ್ರದ ಮಾಲೀಕರು ಯಾವುದೇ ಮಾನದಂಡವಿಲ್ಲದೆ ದಲ್ಲಾಳಿಗಳ ಮೂಲಕ ರೈತರಿಂದ ಅಕ್ರಮವಾಗಿ ಹಣ ಸುಲಿಗೆ ಮಾಡುತ್ತಿದ್ದಾರೆ. ದಲ್ಲಾಳಿಗಳು ಮನಬಂದಂತೆ ದರ ನಿಗದಿ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿ ಕೂಡಲೇ ಪ್ರಾದೇಶಿಕ ಸಾರಿಗೆ ಅಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಕೃಷಿ ಇಲಾಖೆ ಅಧಿಕಾರಿಗಳು, ತೂಕ ಮತ್ತು ಅಳತೆ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕು ತಹಶೀಲ್ದಾರ್ ಸೇರಿದಂತೆ ಸಭೆ ನಡೆಸಿ ಬಾಡಿಗೆ ನಿಗದಿಪಡಿಸಬೇಕು’ ಎಂದು ಅತ್ತಹಳ್ಳಿಯ ರೈತ ದೇವರಾಜ್‌ ಒತ್ತಾಯಿಸಿದ್ದಾರೆ.

‘ಕೃಷಿ ಯಂತ್ರಧಾರೆ ವಿಫಲ’

ಸರ್ಕಾರದ ಕೃಷಿ ಯಂತ್ರಧಾರೆ ಯೋಜನೆ ವಿಫಲಗೊಂಡಿದೆ ಎಂದು ಬಹುತೇಕ ರೈತರು ದೂರುತ್ತಾರೆ. ಸದ್ಯ, ಜಿಲ್ಲೆಯಲ್ಲಿ ಬನ್ನೂರು, ತಲಕಾಡು, ತಿ.ನರಸೀಪುರ, ಬಿಳಿಗೆರೆ, ಕೆ.ಆರ್.ನಗರ, ನಾಗನಹಳ್ಳಿ ಸೇರಿದಂತೆ ಕೇವಲ 8 ಕಡೆ ಮಾತ್ರವೇ ಯಂತ್ರೋಪಕರಣ ಲಭ್ಯವಿದೆ.

‘ಅತಿ ಕಡಿಮೆ ಯಂತ್ರಗಳ ಯಂತ್ರಧಾರೆ ಯೋಜನೆಯು ಇದ್ದೂ ಇಲ್ಲದಂತಾಗಿದೆ’ ಎಂದು ಕೆ.ಆರ್.ನಗರ ತಾಲ್ಲೂಕಿನ ಅರ್ಜುನಹಳ್ಳಿಯ ರೈತ ರಾಮಪ್ರಸಾದ್ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT