ಮಂಗಳವಾರ, ಮಾರ್ಚ್ 2, 2021
29 °C
ಜ್ಞಾನ ಹಂಚುವ ಕಾಯಕದಲ್ಲಿ ನಿರತರಾದವರು

ಎಲೆಮರೆಯ ಕಾಯಿಯಂತೆ ಪತ್ರಿಕಾ ವಿತರಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಮೈಸೂರು: ಮಳೆ ಸುರಿಯಲಿ, ಮಂಜು ಮುಸುಕಲಿ, ರಸ್ತೆ ಹಾಳಾಗಲಿ... ಇವರ ಕಾಯಕ ತಪ್ಪದು. ಆರೋಗ್ಯ ಕೆಡಲಿ, ಮೈ ಸುಡಲಿ, ಮನೆಗೆ ನೆಂಟರು ಬರಲಿ ಇವರ ಸುತ್ತಾಟ ನಿಲ್ಲದು. ಮುಂಜಾನೆ ಸೂರ್ಯ ಎಷ್ಟು ಕರಾರುವಕ್ಕಾಗಿ ಉದಯಿಸುತ್ತಾನೋ ಅಷ್ಟೇ ಕರಾರುವಕ್ಕಾಗಿ ಇವರು ತಮ್ಮ ಕೆಲಸಕ್ಕೆ ತೆರಳಲೇಬೇಕು. ನಿಜಕ್ಕೂ ಈ ವಿಚಾರದಲ್ಲಿ ಸೂರ್ಯನಿಗೆ ಇವರು ಸೆಡ್ಡು ಹೊಡೆಯುತ್ತಾರೆ.

ಇಂತಹ ಕಾಯಕಯೋಗಿಗಳೇ ಪತ್ರಿಕಾ ವಿತರಕರು. ಒಂದು ಪತ್ರಿಕೆ ಓದುಗರ ಕೈ ಸೇರಲು ಇವರ ಪಾತ್ರ ಬಲು ದೊಡ್ಡದು. ನಿತ್ಯ ಬೆಳಿಗ್ಗೆ ಎಷ್ಟೇ ಚಳಿಯಾದರೂ, ಮಳೆಯಾದರೂ ಏನೇ ಆದರೂ ಒಂದು ದಿನವೂ ರಜೆ ತೆಗೆದುಕೊಳ್ಳದೇ ಕಾರ್ಯನಿರ್ವಹಿಸುತ್ತಾರೆ. ಇವರ ಸೇವೆ ನಿಜಕ್ಕೂ ಎಲೆಮರೆಯ ಕಾಯಿಯಂತಾಗಿದೆ.

ಇವರ ಕೆಲಸಕ್ಕೆ ವಯಸ್ಸಿನ ಹಂಗಿಲ್ಲ. ಬಾಲಕರಿಂದ ಹಿಡಿದು ವಯೋವೃದ್ಧರವರೆಗೂ ಈ ವೃತ್ತಿಯಲ್ಲೇ ಜೀವನ ಕಂಡವರಿದ್ದಾರೆ. ಜಗತ್ತಿಗೆ ಜ್ಞಾನ ಹಂಚುವ ಮಹಾಕಾಯಕದಲ್ಲಿ ತಾವಿದ್ದೇವೆ ಎನ್ನುವ ಲವಲೇಶ ಗರ್ವವೂ ಇವರಿಗಿಲ್ಲ. ಹರಿದ ಬಟ್ಟೆ, ಹಳೆಯ ಸೈಕಲ್‌, ಸವೆದ ಚಪ್ಪಲಿಗಳೇ ಇವರ ಆಸ್ತಿ. ಬಹಳಷ್ಟು ಮಂದಿ ವಿತರಕರು ಮನೆಯಲ್ಲಿ ಸಾವು ಸಂಭವಿಸಿದ್ದರೂ ಪತ್ರಿಕೆ ಹಂಚುವುದನ್ನು ಮರೆಯುವುದಿಲ್ಲ.

50 ವರ್ಷಗಳಿಂದ ಇದೇ ಸೇವೆಯಲ್ಲಿ:

ತಿ.ನರಸೀಪುರ ತಾಲ್ಲೂಕಿನ ಮೂಗೂರಿನ ಎಸ್‌ಬಿವಿ ಸ್ವಾಮಿ 1967ರಿಂದಲೂ ಪತ್ರಿಕಾ ವಿತರಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ, ಇವರಿಗೆ 75 ವರ್ಷ. ಈ ಇಳಿ ವಯಸ್ಸಿನಲ್ಲೂ ಸ್ವಲ್ಪವೂ ಎದೆಗುಂದದ ಇವರು ವಿವಿಧ ಪತ್ರಿಕೆಗಳನ್ನು ಓದುಗರ ಆಸಕ್ತಿಗೆ ಅನುಗುಣವಾಗಿ ಹಂಚುತ್ತಿದ್ದಾರೆ. ಮನೆಮನೆಗೆ ಪತ್ರಿಕೆ ಹಾಕುವುದು ದೊಡ್ಡ ಕೆಲಸ ಅಲ್ಲ. ಆದರೆ, ಅವರಿಂದ ಹಣ ಪಡೆಯುವುದು ತೀರಾ ಕಷ್ಟದ ಕೆಲಸ. ಹಲವು ಬಾರಿ ನಮ್ಮ ಕೈಲಿಂದಲೇ ಹಣ ಹೋಗಿದೆ. ಆದರೂ, ಪತ್ರಿಕೆ ಹಂಚುವುದು ಎಂದರೆ ಜ್ಞಾನ ಹಂಚಿದಂತೆ. ಇದೊಂದು ರೀತಿಯಲ್ಲಿ ಜ್ಞಾನಯೋಗ ಎಂದು ತಿಳಿದು ಈ ವೃತ್ತಿಯಲ್ಲಿದ್ದೇನೆ ಎಂದು ಅವರು ಹೇಳುತ್ತಾರೆ.

ಸೌಲಭ್ಯಗಳಿಲ್ಲ:

‘ಪತ್ರಿಕೆ ಹಂಚುವುದು ಎಂದರೆ ಜಗತ್ತಿನ ವಿದ್ಯಮಾನಗಳನ್ನು ಎಲ್ಲರಿಗೂ ತಲುಪಿಸುವುದು ಎಂದೇ ಅರ್ಥ. ಟಿ.ವಿಯಲ್ಲಿ ವಾರ್ತೆ ಬಂದರೂ ಎಲ್ಲ ಸುದ್ದಿಗಳೂ ಅದರಲ್ಲಿರುವುದಿಲ್ಲ. ಪತ್ರಿಕೆಯಲ್ಲಿ ಸ್ಥಳೀಯ, ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯಮಟ್ಟದ ಎಲ್ಲ ಸುದ್ದಿಗಳೂ ಇರುತ್ತವೆ. ಇದನ್ನು ಓದಿ ಬಹಳಷ್ಟು ಮಂದಿ ಉನ್ನತ ಹುದ್ದೆಗಳಿಗೆ ಹೋಗಿದ್ದಾರೆ. ಆದರೆ, ನಾವು ಮಾತ್ರ ಯಾವುದೇ ಸೌಲಭ್ಯಗಳಿಲ್ಲದೇ ಹಾಗೆಯೇ ಇದ್ದೇವೆ. ಕನಿಷ್ಠ ಸೌಲಭ್ಯಗಳನ್ನಾದರೂ ಸರ್ಕಾರ ನಮಗೆ ಕಲ್ಪಿಸಿಕೊಡಬೇಕು’ ಎಂದು 18 ವರ್ಷಗಳಿಂದ ಇದೇ ವೃತ್ತಿಯಲ್ಲಿರುವ ಕೌಲಂದೆಯ ಮಲ್ಲಣ್ಣ ಒತ್ತಾಯಿಸುತ್ತಾರೆ.‌

ಕಾರ್ಮಿಕರ ಕೊರತೆ ಇದೆ:

‘ಪತ್ರಿಕೆ ವಿತರಣೆ ಮೊದಲಿನಷ್ಟು ಸುಲಭವಾಗಿಲ್ಲ. ಸೈಕಲ್ ಬದಲು ಮೋಟಾರು ವಾಹನ ಬಂದಿರಬಹುದು. ಆದರೆ, ಜನರ ಮನಸ್ಥಿತಿ ಬದಲಾಗಿದೆ. ಪತ್ರಿಕೆ ತೆಗೆದುಕೊಂಡು ಹಣ ನೀಡುವವರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಇದರ ಜತೆಗೆ, ಕಾರ್ಮಿಕರ ಕೊರತೆ ಕಾಡುತ್ತಿದೆ. ಪತ್ರಿಕೆ ಹಂಚುವ ಕೆಲಸಕ್ಕೆ ಹುಡುಗರು ಬರುವುದೇ ಇಲ್ಲ. ಗ್ರಾಮಾಂತರ ಭಾಗಗಳಲ್ಲಿ ಪತ್ರಿಕೆ ವಿತರಣೆ ಎಂಬುದು ಸವಾಲಿನ ಕೆಲಸ’ ಎಂದು ಹನಗೂಡುವಿನಲ್ಲಿ 16 ವರ್ಷಗಳಿಂದ ಪತ್ರಿಕಾ ವಿತರಿಸುತ್ತಿರುವ ವೆಂಕಟಪ್ಪ ಹೇಳುತ್ತಾರೆ.‌

12 ವರ್ಷಗಳಿಂದ ಇದೇ ವೃತ್ತಿ:

‘ಕಳೆದ 12 ವರ್ಷಗಳಿಂದ ಇದೇ ವೃತ್ತಿಯಲ್ಲಿದ್ದೇನೆ. ಕೆಲಸ ಮಾಡುವುದಕ್ಕೆ ಖುಷಿ ಎನಿಸುತ್ತಿದೆ. 5–6 ಕಿ.ಮೀ ದೂರವರೆಗೆ ಪತ್ರಿಕೆ ತಲುಪಿಸುವ ಕೆಲಸ ಸುಲಭವಾದುದಲ್ಲ. ಸರ್ಕಾರ ಮತ್ತು ಸಮಾಜ ನಮ್ಮತ್ತ ಸ್ವಲ್ಪವಾದರೂ ನೋಡಬೇಕು’ ಎಂದು ಹನೂರಿನ ಕಾಡಂಚಿನ ಗ್ರಾಮಗಳಲ್ಲಿ ಪತ್ರಿಕೆ ವಿತರಕರಾಗಿರುವ ದೇವರಾಜು ನಾಯ್ಡು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು