ಶುಕ್ರವಾರ, ಅಕ್ಟೋಬರ್ 18, 2019
20 °C
ಪಾರಂಪರಿಕ ಆಟಗಳ ಉದ್ಘಾಟನಾ ಸ್ಪರ್ಧೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿಕೆ

ಸರ್ಕಾರಿ ಕಚೇರಿ ಜನರ ಜೀವನಾಡಿಯಾಗಲಿ: ಸಚಿವ ವಿ.ಸೋಮಣ್ಣ

Published:
Updated:
Prajavani

ಮೈಸೂರು: ‘ಸರ್ಕಾರಿ ಕಚೇರಿಗಳು ನೊಣ ಹೊಡಿಯುವ, ತೂಕಡಿಸುವ ತಾಣಗಳಾಗಬಾರದು. ಜನರ ಜೀವನಾಡಿಯಾಗಿರಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹೇಳಿದರು.

ನಾಡಹಬ್ಬ ಮೈಸೂರು ದಸರಾ ಅಂಗವಾಗಿ ನಗರದ ವಸ್ತು ಪ್ರದರ್ಶನ ಆವರಣದಲ್ಲಿನ ಪುರಾತತ್ವ ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಗಿದ್ದ ‘ಪಾರಂಪರಿಕ ಆಟಗಳ ಸ್ಪರ್ಧೆ’ಯನ್ನು ಸಂಸದ ಪ್ರತಾಪಸಿಂಹ ಜತೆ ಪಗಡೆ ಆಡುವ ಮೂಲಕ ಉದ್ಘಾಟಿಸಿದ ಸಚಿವರು ಮಾತನಾಡಿದರು.

‘ಸರ್ಕಾರ ಎಂಬುದು ನಿಂತ ನೀರಲ್ಲ. ಹರಿಯೋ ನೀರು. ನೂರಾರು ಚಟುವಟಿಕೆ ಸದಾ ನಡೆದಿರುತ್ತವೆ. ಇದಕ್ಕೆ ಪೂರಕವಾಗಿ ಸರ್ಕಾರಿ ಕಚೇರಿಗಳು ಜನರ ಸೇವೆಗೆ ಸದಾ ಬಾಗಿಲು ತೆರೆದುಕೊಂಡಿರಬೇಕು’ ಎಂದು ಹೇಳಿದರು.

‘ಮನುಷ್ಯನಿಗೆ ಯಾವುದಾದರೂ ಒಂದು ಕಲೆ ಇರಬೇಕು. ಆಗ ಮಾತ್ರ ಚಟುವಟಿಕೆಯಿಂದ ಇರಲು ಸಾಧ್ಯ. ದ್ವೇಷ–ಹೊಟ್ಟೆಕಿಚ್ಚು ಎಂಬುದೇ ಇರಲ್ಲ. ನನಗೂ ಅಳಿಗುಳಿ ಮನೆ ಆಟ ತುಂಬಾ ಇಷ್ಟ. ಈ ಆಟದಲ್ಲಿ ನಾನು ಸೋಲುವುದಿಲ್ಲ. ಕಿಲಾಡಿ. ಇದು ನನ್ನ ತಾಯಿ ಹೇಳಿಕೊಟ್ಟ ಆಟ. ಚಿನ್ನಿದಾಂಡು ಆಡುವುದರಲ್ಲಿ ನಾನು ಎಕ್ಸ್‌ಪರ್ಟ್‌ ಇದ್ದೆ’ ಎನ್ನುವ ಮೂಲಕ ಸಚಿವರು ತಮ್ಮ ಬಾಲ್ಯವನ್ನು ನೆನೆದರು.

ಸಂಸದ ಪ್ರತಾಪಸಿಂಹ, ಮಹಾನಗರ ಪಾಲಿಕೆ ಮೇಯರ್ ಪುಷ್ಪಲತಾ ಜಗನ್ನಾಥ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪರಿಮಳಾ ಶ್ಯಾಮ್, ಪಾರಂಪರಿಕ ಉಪ ಸಮಿತಿ ಅಧ್ಯಕ್ಷ ಕೃಷ್ಣ, ಮುಖಂಡ ರಾಜೀವ್ ಉಪಸ್ಥಿತರಿದ್ದರು.

Post Comments (+)