ಶುಕ್ರವಾರ, ನವೆಂಬರ್ 22, 2019
20 °C
ಅಣಕು ಮಕ್ಕಳ ಸಂಸತ್‌ನಲ್ಲಿ ಅರ್ಥಪೂರ್ಣ ಚರ್ಚೆ

ಶಾಸಕರು, ಸಭಾಪತಿಗಳಾದ ಮಕ್ಕಳು

Published:
Updated:
Prajavani

ಮೈಸೂರು: ಡಾ.ಬಿ.ಆರ್.ಅಂಬೇಡ್ಕರ್ ನಗರಕ್ಕೆ ಹೊಸ ಅಂಗನವಾಡಿ ಕೇಂದ್ರ ಬೇಕಿದೆ, ನಾಚನಹಳ್ಳಿ, ಶಾಂತಿನಗರದ ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿವೆ, ಬಹಳಷ್ಟು ಕಡೆ ಕಟ್ಟಡಗಳು ಶಿಥಿಲಾವಸ್ಥೆಗಳಿವೆ...

ಇವು ಯಾವುದೋ ಜಿಲ್ಲಾ ಪಂಚಾಯಿತಿ, ವಿಧಾನಸಭೆ, ಪಾಲಿಕೆಯಲ್ಲಾಗಲಿ ಚರ್ಚೆಗೆ ಬಂದ ವಿಷಯಗಳಲ್ಲ. ಇವು ಮಕ್ಕಳು ಅಣಕು ಸಂಸತ್ತಿನಲ್ಲಿ ಪ್ರಸ್ತಾಪಿಸಿದ ಜ್ವಲಂತ ಸಮಸ್ಯೆಗಳು. ಇವುಗಳಿಗೆ ಸ್ಪಂದಿಸುವುದಾಗಿ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಪದ್ಮಾ ಭರವಸೆ ನೀಡಿದರು.

ಈ ಎಲ್ಲ ದೃಶ್ಯಗಳು ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ (ಆರ್‌ಎಲ್‌ಎಚ್‌ಪಿ)ಯು ಪುರಭವನದಲ್ಲಿ ಗುರುವಾರ ಏರ್ಪಡಿಸಿದ್ದ ‘ಮಕ್ಕಳ ಅಣಕು ಸಂಸತ್ತು’ ಕಾರ್ಯಕ್ರಮದಲ್ಲಿ ಕಂಡು ಬಂತು.

‘ಅಂಬೇಡ್ಕರ್ ನಗರದಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದೆ. ಇಲ್ಲಿಂದ ಸಾಕಷ್ಟು ದೂರದಲ್ಲಿ ಅಂಗನವಾಡಿ ಕೇಂದ್ರ ಇದೆ. ಹೀಗಾಗಿ, ಇಲ್ಲೇ ಹೊಸದೊಂದು ಅಂಗನವಾಡಿ ಕೇಂದ್ರ ಬೇಕು’ ಎಂದು ಅಣಕು ಸಂಸತ್ತಿನ ಸದಸ್ಯರೊಬ್ಬರು ಒತ್ತಾಯಿಸುವ ಮೂಲಕ ಗಮನ ಸೆಳೆದರು.‌

ಇದೇ ರೀತಿ ಎಂ.ಸಿ.ಹುಂಡಿಯಲ್ಲಿರುವ ಅಂಗನವಾಡಿ ಕಟ್ಟಡ ಶಿಥಿಲವಾಗಿದೆ. ಕ್ಯಾತಮಾರನಹಳ್ಳಿಯಲ್ಲಿರುವ ಕಟ್ಟಡದಲ್ಲಿ ಶೌಚಾಲಯಗಳ ಕೊರತೆ ಇದೆ ಎಂಬ ಸಮಸ್ಯೆಗಳೂ ಪ್ರಸ್ತಾಪವಾದವು.

ಈ ಎಲ್ಲ ಸಮಸ್ಯೆಗಳನ್ನು ತಾಳ್ಮೆಯಿಂದ ಕೇಳಿದ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಪದ್ಮಾ, ‘ಅಂಬೇಡ್ಕರ್ ನಗರದಲ್ಲಿ ಹೊಸ ಅಂಗನವಾಡಿ ಕೇಂದ್ರ ಸ್ಥಾಪನೆ ಸದ್ಯಕ್ಕೆ ಕಷ್ಟ. ಇದಕ್ಕೆ ಸರ್ಕಾರದ ಅನುಮತಿ ಬೇಕಿರುವುದರಿಂದ ಒಂದಷ್ಟು ಸಮಯ ಹಿಡಿಯುತ್ತದೆ. ಆದರೆ, ನಾಚನಹಳ್ಳಿ ಪಾಳ್ಯ, ಶಾಂತಿನಗರ, ಭಾರತನಗರಗಳಲ್ಲಿನ ಅಂಗನವಾಡಿ ಕೇಂದ್ರಗಳ ಕಟ್ಟಡಗಳ ದುರಸ್ತಿಗೆ ಕ್ರಮ ವಹಿಸಲಾಗುವುದು’ ಎಂದು ಭರವಸೆ ನೀಡಿದರು.

ಎಲ್ಲೆಲ್ಲಿ ಶಿಥಿಲ ಕಟ್ಟಡಗಳಲ್ಲಿ ಅಂಗನವಾಡಿ ಕೇಂದ್ರಗಳಿವೆಯೋ ಅವುಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗುವುದು ಎಂದರು.

ಆರ್‌ಎಲ್‌ಎಚ್‌ಪಿ ಸಂಸ್ಥೆಯ ಸರಸ್ವತಿ ಇದ್ದರು.

ಪ್ರತಿಕ್ರಿಯಿಸಿ (+)