ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪರ್ವ’ದ ರಂಗಯಾನ ಆರಂಭ

ಕಲಾಮಂದಿರದಲ್ಲಿ ಮೊದಲ ದಿನವೇ ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕ ಸಮೂಹ
Last Updated 13 ಮಾರ್ಚ್ 2021, 4:29 IST
ಅಕ್ಷರ ಗಾತ್ರ

ಮೈಸೂರು: ಕರೆಗಂಟೆ ರಿಂಗಣಿಸುತ್ತಿದ್ದಂತೆ ಹೊರಾಂಗಣದಲ್ಲಿ ನಿಂತಿದ್ದ ಪ್ರೇಕ್ಷಕ ಸಮೂಹ ಸಾಲುಗಟ್ಟಿ ಒಳ ಬರಲಾರಂಭಿಸಿತು. ವೇದಿಕೆಯ ಮೇಲಿನ ನಟ, ನಟಿಯ ಹೆಜ್ಜೆ ಸಪ್ಪಳ ಕೇಳಿಸುವಷ್ಟು ಗಾಢ ಮೌನ ಎಲ್ಲೆಡೆ ವ್ಯಾಪಿಸಿತ್ತು. ಈ ಎಲ್ಲದರ ಮಧ್ಯೆ ಬೆಳಿಗ್ಗೆಯಿಂದ ರಾತ್ರಿಯವರೆಗೂ ಕುಳಿತ ಪ್ರೇಕ್ಷಕ ಸಮೂಹ ‘ಪರ್ವ’ ನಾಟಕವನ್ನು ಕಣ್ತುಂಬಿಕೊಂಡಿತು.

ಇಲ್ಲಿನ ಕಲಾಮಂದಿರದಲ್ಲಿ ಶುಕ್ರವಾರ ರಂಗಾಯಣದ ವತಿಯಿಂದ ನಡೆದ ‘ಪರ್ವ’ ನಾಟಕ ಪ್ರದರ್ಶನದಲ್ಲಿಈ ಎಲ್ಲ ದೃಶ್ಯಗಳು ಕಣ್ಣಿಗೆ ಸೆರೆಯಾದವು.

ಕನ್ನಡ ರಂಗಭೂಮಿಯ ಇತಿಹಾಸದಲ್ಲಿಯೇ ವಿಶಿಷ್ಟ ಪ್ರಯತ್ನ ಎನ್ನಲಾದ 8 ಗಂಟೆಯಷ್ಟು ಸುದೀರ್ಘ ಅವಧಿಯ ನಾಟಕ ಪ್ರದರ್ಶನಕ್ಕೆ ಸಾಹಿತಿ ಎಸ್.ಎಲ್.ಭೈರಪ್ಪ ಇಲ್ಲಿ ಚಾಲನೆ ನೀಡಿದರು.

ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದ ಎಸ್.ಎಲ್.ಭೈರಪ್ಪ ಅವರು , ‘ನಾನು ಎಸ್.ಎಲ್.ಭೈರಪ್ಪ, ಈ ನಾಟಕಕ್ಕೆ ಚಾಲನೆ ಕೊಡುತ್ತಿದ್ದೇನೆ’ ಎಂದಷ್ಟೇ ಹೇಳುವ ಮೂಲಕ ಚುಟುಕಾಗಿ ತಮ್ಮ ಉದ್ಘಾಟನಾ ಭಾಷಣ ಮುಗಿಸಿದರು.

ನಂತರ ವೇದಿಕೆಯಲ್ಲಿ ಮೂಡಿ ಬಂದ ‘ಪರ್ವ’ದ ದೃಶ್ಯಗಳು ಪ್ರೇಕ್ಷಕರನ್ನು ಕುರ್ಚಿಯಲ್ಲೇ ಬಂಧಿಸಿದವು. ಆರಂಭದಲ್ಲೇ ಕಂಡು ಬಂದ ಧೃತರಾಷ್ಟ್ರ ಭೀಮನನ್ನು ಕೊಲ್ಲುವ ದೃಶ್ಯ ಪ್ರೇಕ್ಷಕರ ಕುತೂಹಲವನ್ನು ಕೆರಳಿಸಿತು. ಈ ಸಮಯದಲ್ಲಿ ಮೂಡಿ ಬಂದ ಬೆಳಕಿನ ವಿನ್ಯಾಸ ನೋಡುಗರನ್ನು ಆರಂಭದಲ್ಲಿಯೇ ಸೆಳೆಯುವಲ್ಲಿ ಯಶಸ್ವಿಯಾಯಿತು.

ಗಾಂಧಾರಿಯ ಮನಸ್ಸಿನ ತುಮುಲಗಳು, ಕಣ್ಣಿಗೆ ಪಟ್ಟಿ ಕಟ್ಟಿಕೊಂಡಿದ್ದರ ನಿಜವಾದ ಕಾರಣ ಹೇಳುವ ಸನ್ನಿವೇಶಗಳು ಮನೋಜ್ಞವಾಗಿ ಮೂಡಿ ಬಂದವು. ಕುಂತಿಯು ತನ್ನ ನೆನಪಿನ ಸುರುಳಿಗಳನ್ನು ಬಿಚ್ಚಿಡುವಾಗ ಒಂದೇ ಅವಧಿಯಲ್ಲಿ ಎರಡು, ಮೂರು ದೃಶ್ಯಗಳನ್ನು ಒಪ್ಪವಾಗಿ ಜೋಡಿಸಿ, ತೋರಿಸಿದ ನಿರ್ದೇಶಕರ ಜಾಣ್ಮೆಗೆ ಪ್ರೇಕ್ಷಕರು ತಲೆದೂಗಿದರು.

ಚಹಾ ವಿರಾಮದ ಹೊತ್ತು ಬಂದಾಗ ‘ಅರೆ ಇಷ್ಟು ಬೇಗನೇ ಚಹಾ ವಿರಾಮ ಬಂತೇ’ ಎಂದು ಕೇಳುವಷ್ಟರ ಮಟ್ಟಿಗೆ ನಾಟಕ ನೋಡುಗರನ್ನು ತನ್ಮಯಗೊಳಿಸಿತ್ತು. ವರ್ತಮಾನ, ಭೂತ ಹಾಗೂ ಭವಿಷ್ಯದ ಘಟನೆಗಳು ಒಟ್ಟೊಟ್ಟಿಗೆ ರಂಗ ಮೇಲೆ ಕಾಣುತ್ತಿವೆ ಏನೋ ಅನ್ನಿಸುವಂತಹ ಭಾವ ಮೂಡಿಸುವಲ್ಲಿ ಕಲಾವಿದರು ಯಶಸ್ವಿಯಾದರು.

ದುರ್ಯೋಧನ ಪ್ರೇಕ್ಷಕರ ಸಮೂಹದೊಳಗೆ ನುಗ್ಗುವುದು, ಗಾಂಧಾರಿ ಕನ್ನಡಿ ಮುಂದೆ ಮಾತನಾಡುವುದು ಸೇರಿದಂತೆ ನಾಟಕದ ಕೊನೆಯ ದೃಶ್ಯಗಳು ಪ್ರೇಕ್ಷಕರನ್ನು ತುದಿಗಾಲ ಮೇಲೆ ನಿಲ್ಲಿಸಿದವು. ನಾಟಕ ಮುಗಿಯುತ್ತಿದ್ದಂತೆ ನಟ, ನಟಿಯರು ಎಲ್ಲರಿಗೂ ಕೈ ಮುಗಿಯುತ್ತ ಕಲಾಮಂದಿರದ ಮುಖ್ಯದ್ವಾರದಿಂದ ನಿರ್ಗಮಿಸುತ್ತಿದ್ದಂತೆ, ಪ್ರೇಕ್ಷಕರು ಎದ್ದುನಿಂತು ಕರತಾಡನ ಮಾಡುವ ಮೂಲಕ ಮೆಚ್ಚುಗೆ ಸೂಚಿಸಿದರು.

₹ 1 ಸಾವಿರ ಮೊತ್ತದ ಟಿಕೆಟ್ ಖರೀದಿಸಿದವರಿಗೆ ಊಟ ಮತ್ತು ಚಹಾ ಉಚಿತವಾಗಿ ಲಭ್ಯವಿತ್ತು. ₹ 500 ಹಾಗೂ ₹ 250 ಟಿಕೆಟ್ ಪಡೆದವರು ಊಟ ಮತ್ತು ಚಹಾವನ್ನು ಖರೀದಿಸಬೇಕಿತ್ತು. ಎರಡೂ ಬದಿಯಲ್ಲೂ ತಲಾ 4 ಕೌಂಟರ್‌ಗಳು ಇದ್ದವು. ಕುಡಿಯುವ ನೀರಿನ ಸೌಲಭ್ಯವನ್ನೂ ಒದಗಿಸಲಾಗಿತ್ತು.

ನಾಟಕದ ಮೊದಲ ಚಹಾ ವಿರಾಮದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಾಹಿತಿ ಎಸ್.ಎಲ್.ಭೈರಪ್ಪ, ‘ಪರ್ವ ಕಾದಂಬರಿಯ ಮೂಲ ಆಶಯಕ್ಕೆ ಧಕ್ಕೆ ಬಾರದ ರೀತಿಯಲ್ಲಿ ನಾಟಕವನ್ನು ರೂಪಿಸಲಾಗಿದೆ. ಎರಡು, ಮೂರು ದೃಶ್ಯಗಳನ್ನು ಒಟ್ಟಿಗೆ ತೋರಿಸು
ವಂತಹ ಜಾಣ್ಮೆ ಕುತೂಹಲ ಮೂಡಿಸುತ್ತದೆ. ನಾಟಕ ಉತ್ತಮವಾಗಿ ಮೂಡಿ ಬಂದಿದೆ. ಕಲಾವಿದರ ಅಭಿನಯ ಮನೋಜ್ಞವಾಗಿದೆ’ ಎಂದರು.

ನಿರ್ದೇಶಕ ಯಶವಂತ ಸರದೇಶ್‌ಪಾಂಡೆ, ನಟಿ ಸುಧಾ ಬೆಳವಾಡಿ ಸೇರಿದಂತೆ ಅನೇಕ ನಟ, ನಟಿಯರು, ನಿರ್ದೇಶಕರು, ರಂಗಕರ್ಮಿಗಳು ಮೊದಲ ಪ್ರದರ್ಶನದಲ್ಲಿ ಭಾಗಿಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT