ಭಾನುವಾರ, ಆಗಸ್ಟ್ 1, 2021
26 °C
ದ್ವಿದಳ ಧಾನ್ಯ ಅಲಸಂದೆ- ಇಳುವರಿ ಕುಂಠಿತ– ತಪ್ಪದ ಗೋಳು

ಮಳೆ ಕೊರತೆ: ರಾಗಿ ಬೆಳೆಯಲು ಸಸಿಮಡಿ ಹಾಕಿದ ರೈತರು

ಬಿಳಿಗಿರಿ.ಆರ್ Updated:

ಅಕ್ಷರ ಗಾತ್ರ : | |

Prajavani

ಜಯಪುರ: ಕಡಿಮೆ ಖರ್ಚು ಹೆಚ್ಚು ಆದಾಯವಿರುವ ಅಲ್ಪಕಾಲಿಕ ದ್ವಿದಳ ಧಾನ್ಯ ಅಲಸಂದೆ ಬೆಳೆಗೆ ಸರಿಯಾದ ಸಮಯಕ್ಕೆ ಮಳೆಯಾಗದೆ, ಕೀಟಬಾಧೆಯಿಂದಾಗಿ ಇಳುವರಿಯೂ ತಗ್ಗಿರುವುದರಿಂದ ಜಯಪುರ ಹೋಬಳಿಯಲ್ಲಿ ರೈತರು ನಷ್ಟ ಅನುಭವಿಸಿದ್ದಾರೆ. ಹೀಗಾಗಿ, ಪರ್ಯಾಯ ಬೆಳೆಯಾಗಿ ರಾಗಿ ಸಸಿಮಡಿ ನಿರ್ಮಿಸಿದ್ದಾರೆ.

ಯುಗಾದಿಗೂ ಮೊದಲೇ ರೈತರು ತಮ್ಮ ಭೂಮಿ ಹಸನು ಮಾಡಿಕೊಂಡು, ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಅಲಸಂದೆ ಬಿತ್ತನೆ ಮಾಡಿದ್ದರು. ಮೊಳಕೆಯೊಡದಿದ್ದ ಕಾಳುಗಳು ಮಳೆ ಕೊರತೆ ಹಾಗೂ ಬಿಸಿಲಿನ ತಾಪಕ್ಕೆ ಸುಟ್ಟು ಹೋಗಿದ್ದವು. ಅನಂತರ ಬಿದ್ದ ಮಳೆಗೆ ಅಳಿದುಳಿದ ಸಸಿಗಳು ಚೇತರಿಕೆ ಪಡೆದು ಹೂವು, ಕಾಯಿಯಾದಾಗ ರೈತರು ಹರ್ಷಗೊಂಡಿದ್ದರು. ಆದರೆ, ಕಾಯಿಕೊರಕ ಕೀಟಗಳ
ಹಾವಳಿ ಮತ್ತು ರಸ ಹೀರುವ ಹೇನುಗಳಿಂದಾಗಿ ಕೊಯ್ಲು ಮಾಡಿದ ಅಲಸಂದೆಯ ಕಾಳುಗಳಲ್ಲೂ ಶೇ 50ರಷ್ಟು ಹಾಳಾದವು. ಎಕರೆಗೆ 50 ಕೆ.ಜಿ.ಗುಣಮಟ್ಟದ ಕಾಳುಗಳೂ ಕೈಗೆ ಬರಲಿಲ್ಲ.

‘ಎಕರೆಗೆ ಐದರಿಂದ ಆರು ಕ್ವಿಂಟಲ್ ಇಳುವರಿ ಬರುತ್ತಿತ್ತು. ಕೀಟಬಾಧೆ, ಮಳೆ ಕೊರತೆಯಿಂದ ಕೈಗೆ ಇಳುವರಿ ಬರಲಿಲ್ಲ’ ಎಂದು ಬೀರಿಹುಂಡಿ ಗ್ರಾಮದ ರೈತ ಬಸವರಾಜು ತಮ್ಮ ಕಷ್ಟ ಹೇಳಿದರು.

ಪರ್ಯಾಯ ಬೆಳೆಯಾಗಿ ‘ರಾಗಿ’ಯನ್ನು ನಾಟಿ ಮಾಡಲು 'ರಾಗಿ ಮಡಿ' (ಒಗ್ಗು) ಹಾಕುತ್ತಿದ್ದಾರೆ. ಅಲಸಂದೆ ಕೂಳೆಯನ್ನು ಮತ್ತು ಕೊಟ್ಟಿಗೆ ಗೊಬ್ಬರವನ್ನು ಮಿಶ್ರಣ ಮಾಡಿ, ಟ್ರಾಕ್ಟರ್‌ನಲ್ಲಿ ಉಳುಮೆ ಮಾಡಿ ಭೂಮಿ ಹದಗೊಳಿಸುವ ಕಾಯಕದಲ್ಲಿ ತೊಡಗಿದ್ದಾರೆ.

ಮಳೆ ಬೀಳುವ ಪ್ರಮಾಣಕ್ಕೆ ಅನುಗುಣವಾಗಿ, ಬದಲಾದ ವಾತಾವರಣಕ್ಕೆ ಹೊಂದಿಕೊಳ್ಳುವಂತಹ ತಳಿಗಳನ್ನು ನಾಟಿ ಮಾಡಲು ಮುಂದಾಗಿದ್ದಾರೆ. ಇದಕ್ಕೆ ಪೂರಕವಾಗಿ, ವೈಜ್ಞಾನಿಕ ಬೇಸಾಯವು ಮಹತ್ವ ಪಡೆದುಕೊಂಡಿದ್ದು, ಕೃಷಿ ವಿಜ್ಞಾನಿಗಳು ನೂತನ ನಾವೀನ್ಯ ರಾಗಿ ತಳಿಗಳನ್ನು ರೈತರಿಗೆ ಪರಿಚಯಿಸಿದ್ದಾರೆ.

‘ದೀರ್ಘಾವಧಿ ರಾಗಿಯ ತಳಿಗಳಾದ ಎಂ.ಆರ್-1 , ಇಂಡಾಫ್-8, ಎಂ.ಆರ್- 6 , ಎಲ್-5, ಜೆಪಿಯು- 28, 66, ಎಚ್.ಆರ್- 911, ಕೆ.ಎಂ.ಆರ್- 301 ಮತ್ತು 204, ಎಂ.ಸಿ- 365 , ಹಾಗೂ ಅಲ್ಪಾವಧಿ ತಳಿಗಳಾದ ಜೆ.ಪಿ.ಯು-45 ಮತ್ತು 48, 26 , ಇಂಡಾಫ್-9, ಕೆಎಂಆರ್-204 ಬಿತ್ತಿದರೆ ಉತ್ತಮ ಇಳುವರಿಯ, ಪೌಷ್ಟಿಕಾಂಶಯುಕ್ತ ಫಸಲನ್ನು ಪಡೆಯಬಹುದು’ ಎಂದು ನಾಗನಹಳ್ಳಿ ಕೃಷಿ ವಿಸ್ತರಣಾ ಘಟಕದ ಬೇಸಾಯ ವಿಜ್ಞಾನ ಪ್ರಾಧ್ಯಾಪಕ ಡಾ.ಸಿ.ರಾಮಚಂದ್ರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಹವಾಮಾನ ಇಲಾಖೆ ವರದಿಯನ್ವಯ ಉತ್ತಮ ಮುಂಗಾರು ಮಳೆಯಾಗುವ ಲಕ್ಷಣ ಇರುವುದರಿಂದ 40 ರಿಂದ 45 ದಿನಗಳ ರಾಗಿ ಮಡಿಯನ್ನು ಬೆಳೆಸಿರುವ ರೈತರು, ಸೋನೆ ಮಳೆಗೆ ನಾಟಿ ಮಾಡಲು ಮುಂದಾಗಿದ್ದಾರೆ. ಇಲಾಖೆ ವತಿಯಿಂದ ರೈತರಿಗೆ ರಾಗಿ ಬಿತ್ತನೆ ಬೀಜವನ್ನು ವಿತರಿಸಲಾಗಿದೆ’ ಎಂದು ಜಯಪುರ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಕಾರ್ತಿಕ್  ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು