ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಂಬನಿ ಮಿಡಿದ ಸಾಂಸ್ಕೃತಿಕ ನಗರಿ

ಹಲವೆಡೆ ಶ್ರದ್ಧಾಂಜಲಿ ಸಭೆ, ನುಡಿನಮನ, ಗೌರವಾರ್ಪಣೆ
Last Updated 30 ಡಿಸೆಂಬರ್ 2019, 10:22 IST
ಅಕ್ಷರ ಗಾತ್ರ

ಮೈಸೂರು: ಅಸ್ತಂಗತರಾದ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅವರಿಗೆ ಸಾಂಸ್ಕೃತಿಕ ನಗರಿ ಭಾನುವಾರ ಕಂಬನಿ ಮಿಡಿಯಿತು. ಹಲವೆಡೆ ಅವರ ಭಾವಚಿತ್ರಕ್ಕೆ ತುಳಸಿಮಾಲೆಯನ್ನು ಸಮರ್ಪಿಸಿ ವಂದಿಸಲಾಯಿತು. ಕೆಲವೆಡೆ ನುಡಿನಮನ ಕಾರ್ಯಕ್ರಮಗಳು ಏರ್ಪಟ್ಟವು. ಮತ್ತೆ ಕೆಲವೆಡೆ ಶ್ರದ್ಧಾಂಜಲಿ ಸಭೆಗಳು ನಡೆದವು.

ಕೇವಲ ಬ್ರಾಹ್ಮಣ ಸಮುದಾಯ ಮಾತ್ರವಲ್ಲ ಸಮಾಜದ ಎಲ್ಲ ವರ್ಗದವರೂ ಇವರ ಅಗಲಿಕೆಗೆ ಸಂತಾಪ ವ್ಯಕ್ತಪಡಿಸಿದರು. ಸೈದ್ಧಾಂತಿಕ ಭಿನ್ನಾಭಿಪ್ರಾಯವುಳ್ಳವರೂ ನುಡಿನಮನ ಸಮರ್ಪಿಸುವ ಮೂಲಕ ಗೌರವ ಅರ್ಪಿಸಿದರು.

ಇವರ ನಿಧನ ಸುದ್ದಿ ತಿಳಿಯುತ್ತಿದ್ದಂತೆ ಇಲ್ಲಿನ ಶ್ರೀಕೃಷ್ಣಧಾಮದಲ್ಲಿ ನೀರವ ಮೌನ ಆವರಿಸಿತ್ತು. ಶ್ರೀ ಕೃಷ್ಣಮಿತ್ರಮಂಡಳಿ ಹಾಗೂ ಶ್ರೀ ಕೃಷ್ಣ ಟ್ರಸ್ಟ್ ನೇತೃತ್ವದಲ್ಲಿ ಭಕ್ತರು ಇಲ್ಲಿ ಭಜನೆ ನಡೆಸುವ ಮೂಲಕ ಅವರ ಆತ್ಮಕ್ಕೆ ಶಾಂತಿ ಕೋರಿದರು.

ತುಳು ಶಿವಳ್ಳಿ ಮಾಧ್ವ ಬ್ರಾಹ್ಮಣ ಸಂಘದ ಅಧ್ಯಕ್ಷ ಎಂ.ಕೆ.ಪುರಾಣಿಕ್ ಮಾತನಾಡಿ, ‘ಹಿಂದೂ ಸಮಾಜದ ಒಂದು ಸೂರ್ಯ ಅಸ್ತಂಗತವಾಗಿದೆ. ಹಿಂದೂ ಸಮಾಜ ಮಾತ್ರವಲ್ಲ ದೇಶದ ಏಳಿಗೆಗೆ ಪೇಜಾವರ ಶ್ರೀ 88 ವರ್ಷಗಳ ಕಾಲ ಅವಿರತವಾಗಿ ಪ್ರಯತ್ನಿಸಿದರು. ಎಲ್ಲ ಧರ್ಮಗಳನ್ನೂ ಇವರು ಸಮಾನವಾಗಿ ಕಾಣುತ್ತಿದ್ದರು. ಪ್ರಾಣಿ, ಪಕ್ಷಿ, ತರು, ಲತೆಗಳನ್ನೂ ಇವರು ಹಿಂಸಿಸುತ್ತಿರುಲಿಲ್ಲ. ಅಂತಹ ಅಹಿಂಸಾಧರ್ಮ ಇವರದ್ದಾಗಿತ್ತು’ ಎಂದು ಬಣ್ಣಿಸಿದರು.

ಹಲಗೆಯಲ್ಲಿ ಮಲಗಿ ಇವರು ಕಠೋರ ಜೀವನ ಸಾಗಿಸಿದರು. ಯಾರಿಗೂ ನೋವಾಗದ ಹಾಗೆ ಇವರ ಮಾತುಗಳನ್ನಾಡುತ್ತಿದ್ದರು. ಇವರು ಕೋಟ್ಯಂತರ ಮಂದಿಯ ಹೃದಯದಲ್ಲಿ ನೆಲೆಸಿದ್ದಾರೆ ಎಂದರು.

ಶ್ರೀ ಕೃಷ್ಣಟ್ರಸ್ಟ್‌ನ ಅಧ್ಯಕ್ಷ ರವಿಶಾಸ್ತ್ರಿ ಮಾತನಾಡಿ, ‘ನಮ್ಮ ಒಟ್ಟು 4 ಸಂತತಿಯವರು ಅವರನ್ನು ನೋಡಿದ್ದೇವೆ. ನಮ್ಮ ಅಜ್ಜ, ಅಪ್ಪ, ನಾನು ಹಾಗೂ ನನ್ನ ಮಕ್ಕಳು ಅವರನ್ನು ಕಣ್ಣಾರೆ ಕಂಡಿದ್ದೇವೆ. ಉಡುಪಿ, ಬೆಂಗಳೂರಿನ ವಿದ್ಯಾಪೀಠ ಬಿಟ್ಟರೆ ಮೈಸೂರು ಅವರಿಗೆ ಅತಿ ಪ್ರಿಯವಾದ ಊರು’ ಎಂದು ತಿಳಿಸಿದರು.

ಶ್ರೀ ಕೃಷ್ಣ ಮಿತ್ರ ಮಂಡಳಿಯ ಉಪಾಧ್ಯಕ್ಷ ಅನಂತತಂತ್ರಿ, ಟ್ರಸ್ಟಿಗಳಾದ ಪಿ.ಗೋಪಾಲರಾವ್, ಶೇಖರ್, ಎಂ.ಆರ್.ಪುರಾಣಿಕ್ ಇದ್ದರು. ನಂತರ, ಅನೇಕ ಮಂದಿ ಶ್ರೀಗಳ ಅಂತಿಮ ದರ್ಶನ ಪಡೆಯಲು ಬೆಂಗಳೂರಿಗೆ ಹೊರಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT