ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋರ್ಟ್‌ ಆವರಣದಲ್ಲಿ ಹಸಿರು ತೋರಣ

ಶಹಾಪುರ: ಪಕ್ಷಿಗಳಿಗೆ ನೀರುಣಿಸುವ ನ್ಯಾಯಾಲಯದ ಸಿಬ್ಬಂದಿ
Last Updated 26 ಮೇ 2018, 12:33 IST
ಅಕ್ಷರ ಗಾತ್ರ

ಶಹಾಪುರ: ಹೈದರಾಬಾದ್‌ ಕರ್ನಾಟಕ ಪ್ರದೇಶದಲ್ಲಿ ವನಸಿರಿ ಬೆಳೆಸುವುದು ಅಸಡ್ಡೆಯ ಮಾತು. ಆದರೆ, ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಮಲೆನಾಡ ಸಿರಿಯನ್ನು ನೆನಪಿಸುವಂತೆ ಬೆಳೆದು ನಿಂತ ಮರಗಳು ಕೈಬಿಸಿ ಕರೆಯುವುದರ ಜತೆಯಲ್ಲಿ ತಂಗಾಳಿ ಬೀಸುತ್ತಿವೆ.

ಸಂಜೆ ಆಗುತ್ತಿದ್ದಂತೆ ಪಕ್ಷಿಗಳ ಕಲರವ ಕೇಳುವುದು ಮನಸ್ಸಿಗೆ ಮುದ ನೀಡುತ್ತದೆ. ಪ್ರತಿ ಮರದ ಬಗ್ಗೆ ವಕೀಲರು ಕಾಳಜಿಯನ್ನು ತೋರಿಸಿದ್ದರಿಂದ ಉತ್ತಮ ಪರಿಸರವನ್ನು ನಿರ್ಮಿಸಲು ಸಾಧ್ಯ ಎನ್ನುವುದಕ್ಕೆ ನ್ಯಾಯಾಲಯದ ಆವರಣದಲ್ಲಿ ಬೆಳೆದು ನಿಂತ ಮರಗಳು ಸಾಕ್ಷಿಯಾಗಿವೆ ಎನ್ನುತ್ತಾರೆ ಹಿರಿಯ ವಕೀಲ ಸೈಯದ್‌ ಇಬ್ರಾಹಿಂಸಾಬ್ ಜಮದಾರ.

ಸುಮಾರು 6 ಎಕರೆಯಷ್ಟು ಆವರಣದಲ್ಲಿ ಅರಣ್ಯ ಇಲಾಖೆಯ ಸಹಕಾರದಿಂದ 150ಕ್ಕೂ ಹೆಚ್ಚು ಬೇವಿನ ಮರಗಳನ್ನು ಪೋಷಿಸಲಾಗಿದೆ. ಇಲ್ಲಿ 5 ಆಲದ ಮರ, 8 ಹೊಂಗೆ, ಬದಾಮಿ, ಬೆಟ್ಟದ ನೆಲ್ಲಿ ಮರ ಬೆಳೆಸಿದ್ದೇವೆ ಸುತ್ತಲು ಕಾಂಪೌಂಡ್‌ ವ್ಯವಸ್ಥೆ ಇರುವುದರಿಂದ ಎಲ್ಲ ಮರಗಳಿಗೆ ರಕ್ಷಣೆ ಇದೆ ಎನ್ನುತ್ತಾರೆ ಹಿರಿಯ ವಕೀಲ ಭಾಸ್ಕರರಾವ ಮುಡಬೂಳ.

ಈ ಹಿಂದೆ ವಕೀಲರ ಶ್ರಮದಾನದ ಮೂಲಕ ಮರದ ಅಕ್ಕಪಕ್ಕದಲ್ಲಿ ಬೆಳೆದು ನಿಂತ ತ್ಯಾಜ್ಯ ವಸ್ತುಗಳನ್ನು ತೆಗೆದು ಸ್ವಚ್ಛ ಮಾಡಲಾಗಿತ್ತು. ನ್ಯಾಯಾಲಯದ ಆವರಣದಲ್ಲಿ ಇಷ್ಟೊಂದು ಮರಗಳ ರಾಶಿಯನ್ನು ಬೇರೆಡೆ ಕಾಣಲು ಸಾಧ್ಯವಿಲ್ಲ ಎನ್ನುತ್ತಾರೆ ಅವರು.

ಪಕ್ಷಿಗಳಿಗೆ ನೀರುಣಿಸುವ ಕಾಯಕ: ನ್ಯಾಯಾಲಯದ ಶಿರಸ್ತೇದಾರ ವಿಶ್ವಾರಾಧ್ಯಸ್ವಾಮಿ ಹಿರೇಮಠ ತುಸು ಶ್ರಮವಹಿಸಿ ಹಳೆಯ ಮಣ್ಣಿನ ಪಾತ್ರೆಯ ಮುಚ್ಚಳ ಹಾಗೂ ತಟ್ಟೆಯನ್ನು ಮರದ ಟೊಂಗೆಗಳಿಗೆ ನೇತು ಹಾಕಿ, ಬಿಡುವಿನ ವೇಳೆಯಲ್ಲಿ ಪಕ್ಷಿಗಳಿಗೆ ನೀರುಣಿಸುವ ಕಾಯಕ ಮಾಡುತ್ತಿದ್ದಾರೆ.

ಇವರೊಂದಿಗೆ ಮೌನೇಶ ಗೌಂಡಿ ಹಾಗೂ ಚಂದ್ರಶೇಖರ ಜತೆಗೆ ಯುವ ವಕೀಲರೂ ಕೈಜೋಡಿಸುತ್ತಾರೆ ಎನ್ನುತ್ತಾರೆ ಸಿದ್ರಾಯ ಕುರಂದವಾಡ. ಯಾರೂ ಪಕ್ಷಿಗಳಿಗೆ ನೀರು ಉಣಿಸಿ ಎಂದು ಹೇಳುವುದಿಲ್ಲ. ಮಾನಸಿಕ ನೆಮ್ಮದಿ ಹಾಗೂ ನಮ್ಮಂತೆ ಉಳಿದ ಜೀವರಾಶಿಗಳಿಗೆ ಗುಟುಕು ನೀರು ಒಂದಿಷ್ಟು ಆಸರೆಯಾದೀತು ಎಂಬ ಭಾವನೆ ನಮ್ಮದು ಎನ್ನುತ್ತಾರೆ ಅವರು.
**
ನ್ಯಾಯಾಲಯದ ಆವರಣದಲ್ಲಿ 200ಕ್ಕೂ ಹೆಚ್ಚು ವಿವಿಧ ಮರಗಳನ್ನು ಬೆಳೆಸಲಾಗಿದೆ. ಇಲ್ಲಿನ ಸಿಬ್ಬಂದಿ ಪಕ್ಷಿಗಳಿಗೆ ನೀರುಣಿಸುವ ಕಾಯಕ ಮೆಚ್ಚುವಂತದ್ದು
ಭಾಸ್ಕರರಾವ ಮುಡಬೂಳ, ಹಿರಿಯ ವಕೀಲರು

ಟಿ.ನಾಗೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT